ಕನ್ನಡಪ್ರಭ ವಾರ್ತೆ ಅಥಣಿ
ಇಲ್ಲಿನ ಜೈನ ಬಸದಿಯಲ್ಲಿ ಚಾತುರ್ಮಾಸ ವ್ರತಾಚರಣೆಯ ಅಂಗವಾಗಿ ೧೦೮ ಶ್ರವಣನಂದಿ ಮಹಾರಾಜರು ಹಾಗೂ ೧೦೫ ಶೀತಲನಂದಿ ಮಹಾರಾಜರ ಅಥಣಿ ಪಟ್ಟಣ ಪುರಪ್ರವೇಶ ಅದ್ಧೂರಿಯಾಗಿ ಜರುಗಿತು.ಧಾರ್ಮಿಕ ಕ್ಷೇತ್ರ ಅಥಣಿ ಪಟ್ಟಣಕ್ಕೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಮುನಿ ಮಹಾರಾಜರನ್ನು ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಜೈನ ಸಮುದಾಯದ ಮುಖಂಡರು ಹಾಗೂ ನೂರಾರು ಶ್ರಾವಕ ಶ್ರಾವತಿಯರು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು. ವಿವಿಧ ವಾದ್ಯ, ಮೇಳಗಳೊಂದಿಗೆ ಪಟ್ಟಣದಲ್ಲಿ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ಮುನಿ ಮಹಾರಾಜರನ್ನು ಪಟ್ಟಣದ ಜೈನ ಬಸದಿಗೆ ಬರಮಾಡಿಕೊಳ್ಳಲಾಯಿತು. ನಂತರ ನಡೆದ ಧಾರ್ಮಿಕ ಸಭೆಯಲ್ಲಿ ೧೦೮ ಶ್ರವಣನಂದಿ ಮಹಾರಾಜರು ಮಾತನಾಡಿ, 4 ತಿಂಗಳ ಚಾತುರ್ಮಾಸ ವ್ರತಾಚರಣೆಯ ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿ, ಆತ್ಮಶುದ್ಧಿ ಮತ್ತು ಆತ್ಮ ಕಲ್ಯಾಣ ಪ್ರೇರೆಪಿಸುವಂತಾಗಬೇಕು ಎಂದು ನುಡಿದರು.೧೦೫ ಶೀತಲನಂದಿ ಮಹಾರಾಜರು ಮಾತನಾಡಿ, ಚಾತುರ್ಮಾಸದ ನಾಲ್ಕು ತಿಂಗಳ ಅವಧಿಯಲ್ಲಿ ಧರ್ಮ ಜಾಗೃತಿ ಮತ್ತು ಆತ್ಮಕಲ್ಯಾಣ ಕಾರ್ಯಕ್ರಮ ಜರುಗುತ್ತದೆ. ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ಎಲ್ಲ ಶ್ರಾವಕ ಶ್ರಾವಕಿಯರು ತಮ್ಮ ಬದುಕನ್ನು ಕಲ್ಯಾಣ ಮಾಡಿಕೊಳ್ಳಬೇಕು ಎಂದು ಆಶೀರ್ವದಿಸಿದರು.ಈ ಸಂದರ್ಭದಲ್ಲಿ ನಿವೃತ್ತ ಇಂಜನೀಯರ್ ಹಾಗೂ ಭಾರತೀಯ ಜೈನ ಸಂಘಟನೆಯ ರಾಜ್ಯ ಸಂಚಾಲಕರಾದ ಅರುಣ ಯಲಗುದ್ರಿ, ಡಿ.ಡಿ.ಮೇಕನಮರಡಿ, ಕಲ್ಲಪ್ಪ ವಣಜೋಳ, ಸಾತಗೌಡ ಅಥಣಿ, ನಿತಿನ್ ಗೊಂಗಡಿ, ರಾಜು ಹುಣಸಿಮೊರೆ, ನಾಗರಾಜ ಗೋಂಗಡಿ, ಅಭಿನಂದನ್ ಪಡನಾಡ, ಅವಿನಾಶ ಮುಧೋಳ, ಅಶೋಕ ಪಡನಾಡ, ರಾಜು ಕರ್ಪೂರಶೆಟ್ಟಿ ಸೇರಿದಂತೆ ನೂರಾರು ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು.