42 ಲಕ್ಷ ಪುಟಗಳ ಕಂದಾಯ ದಾಖಲೆಗಳನ್ನು ಒಂದು ವರ್ಷದ ಅವಧಿಯಲ್ಲಿ ಡಿಜಟಲೀಕರಣಗೊಳಿಸಿ, ಕಾಲ ವಿಳಂಬವಿಲ್ಲದೆ ನಿಖರ ಕಂದಾಯ ಮಾಹಿತಿ ಒದಗಿಸುವ ಕಾರ್ಯವನ್ನು ಪೂರ್ಣಗೊಳಿಸಿದ ಸಾಹಸದಲ್ಲಿ ಹಾನಗಲ್ಲ ತಾಲೂಕು ತಹಸೀಲ್ದಾರ್ ಕಚೇರಿ ಸಾಧನೆ ಮಾಡಿದೆ.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ 42 ಲಕ್ಷ ಪುಟಗಳ ಕಂದಾಯ ದಾಖಲೆಗಳನ್ನು ಒಂದು ವರ್ಷದ ಅವಧಿಯಲ್ಲಿ ಡಿಜಿಟಲೀಕರಣಗೊಳಿಸಿ, ಕಾಲ ವಿಳಂಬವಿಲ್ಲದೆ ನಿಖರ ಕಂದಾಯ ಮಾಹಿತಿ ಒದಗಿಸುವ ಕಾರ್ಯವನ್ನು ಪೂರ್ಣಗೊಳಿಸಿದ ಸಾಹಸದಲ್ಲಿ ಹಾನಗಲ್ಲ ತಾಲೂಕು ತಹಸೀಲ್ದಾರ್ ಕಚೇರಿ ಸಾಧನೆ ಮಾಡಿದೆ. ರಾಜ್ಯದ ಅತಿ ದೊಡ್ಡ ತಾಲೂಕಿನಲ್ಲಿ ಒಂದಾದ ಹಾನಗಲ್ಲ ತಾಲೂಕಿನಲ್ಲಿ 157 ಗ್ರಾಮಗಳು, 3 ಕಂದಾಯ ಹೋಬಳಿಗಳಿವೆ. ಈ ಎಲ್ಲ ಗ್ರಾಮಗಳ 1930ರಿಂದ 2000ನೇ ಇಸ್ವಿಯವರೆಗಿನ 70 ವರ್ಷಗಳ 42 ಲಕ್ಷ ಪುಟಗಳ ಕಂದಾಯ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಮೂಲಕ ಒಂದು ಸಾಹಸದ ಕೆಲಸವನ್ನೇ ಸಮರ್ಥವಾಗಿ ಪೂರ್ಣಗೊಳಿಸಿದಂತಾಗಿದೆ. ಈ ಕಾರ್ಯ ಪೂರ್ಣಗೊಳಿಸಲು ಒಂದು ವರ್ಷದ ಅವಧಿ ತೆಗೆದುಕೊಳ್ಳಲಾಗಿದ್ದು, ದಿನಕ್ಕೆ 11 ಗಂಟೆಗಳ ಕಾಲ ಕಂದಾಯ ಇಲಾಖೆಯ 20 ನೌಕರರು ಅವಿರತ ಶ್ರಮಿಸಿದ್ದಾರೆ. 10 ಜನ ಕಂಪ್ಯೂಟರ್ ಆಪರೇಟರ್, 10 ಜನ ಕಚೇರಿಯ ಸಹಾಯಕ ಸಿಬ್ಬಂದಿ, ಕಾಲ ಕಾಲಕ್ಕೆ ಇತರ ಕಂದಾಯ ಇಲಾಖೆಯ ಸಿಬ್ಬಂದಿಯ ಸಹಾಯ ಪಡೆದು ಅತ್ಯಂತ ಸಮರ್ಥವಾಗಿ ಡಿಜಿಟಲೀಕರಣ ಪೂರ್ಣಗೊಳಿಸಿ ಅತ್ಯಂತ ಸುಲಭ ಹಾಗೂ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ದಾಖಲೆಗಳನ್ನು ಸಾರ್ವಜನಿಕರಿಗೆ ನೀಡುವ ಕಾರ್ಯ ನಡೆದಿದೆ. ಕೈ ಬರಹದ ಪಹಣಿಗಳು, ಮ್ಯುಟೇಶನ್ ದಾಖಲೆಗಳು, ಭೂನ್ಯಾಯ ಮಂಡಳಿಯ ಮಂಜೂರಿ ಪ್ರಕರಣಗಳು, ಖಾತಾ ಬದಲಾವಣೆ ಮೂಲ ವರದಿ ಕಡತಗಳು, ನ್ಯಾಯಾಲಯ ಪ್ರಕರಣಗಳು, ಪಹಣಿ ತಿದ್ದುಪಡಿ ಪ್ರಕರಣಗಳು, ಶರತ್ತು ತಿದ್ದುಪಡಿಗಳು, ಭೂನ್ಯಾಯ ಮಂಡಳಿ ಆದೇಶಗಳು, ಭೂ ಮಂಜೂರಾತಿ ಆದೇಶಗಳು ಸೇರಿದಂತೆ ಕಂದಾಯ ದಾಖಲೆಗೆ ಸಂಬಂಧಿಸಿದ ಕೈ ಬರಹದಲ್ಲಿದ್ದ ಮತ್ತು ಹಾರ್ಡ್‌ ಕಾಪಿಯಾಗಿದ್ದ ಎಲ್ಲ ದಾಖಲೆಗಳನ್ನು ಈಗ ಸಾಫ್ಟ ತಂತ್ರಾಂಶದಲ್ಲಿ ನೀಡುವ ಸಾಹಸ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಎಲ್ಲ ದಾಖಲೆಗಳ ವಿಷಯವಾರು ವಿಂಗಡಣೆ, ಹಳೆಯ ಕಡತಗಳನ್ನು ಹೊಂದಿಸುವುದು, ಕಡತಗಳ ಅನುಕ್ರಮಣಿಕೆ ತಪ್ಪದಂತೆ ಡಿಜಿಟಲೀಕರಣಗೊಳಿಸುವುದು, ಹೊಸ ಸಾಫ್ಟವೇರ್‌ಗೆ ಕಡತಗಳನ್ನು ಹೊಂದಿಸುವುದು ತೀರ ಜವಾಬ್ದಾರಿಯ ಕೆಲಸವಾಗಿತ್ತು. ಕಚೇರಿಯ ಎಲ್ಲ ಸಾಮಾನ್ಯ ಕೆಲಸಗಳ ಒತ್ತಡದಲ್ಲಿಯೂ ಕೂಡ ಸಾರ್ವಜನಿಕರ ಸಹಕಾರವೂ ಸೇರಿ ಈ ಡಿಜಟಲೀಕರಣ ಯಶಸ್ವಿಯಾಗಿದೆ ಎನ್ನುತ್ತಾರೆ ತಾಲೂಕು ತಹಸೀಲ್ದಾರ್ ಎಸ್.ರೇಣುಕಾ. ಈ ಡಿಜಿಟಲೀಕರಣದಿಂದಾಗಿ ಈಗ ಯಾವುದೇ ದಾಖಲೆ ಪಡೆಯಲು ಕಾಲ ವಿಳಂಬವಿಲ್ಲ. ಸುಲಭವಾಗಿ ದಾಖಲೆಗಳನ್ನು ತಹಸೀಲ್ದಾರ್ ಕಚೇರಿಯಲ್ಲಿ ಹಾಗೂ ಬೊಮ್ಮನಹಳ್ಳಿ, ಅಕ್ಕಿಆಲೂರು ನಾಡ ಕಚೇರಿಗಳಲ್ಲಿ ನಿಗದಿತ ಶುಲ್ಕ ಪಾವತಿಸಿ ಸುಲಭವಾಗಿ ಪಡೆಯಬಹುದಾಗಿದೆ. ಈಗ ದಾಖಲೆಗಳು ಕಳೆಯುವ ಪ್ರಸಂಗವೇ ಇಲ್ಲ. ಅನಗತ್ಯ ಮೋಸ ವಂಚನೆ ಮೂಲಕ ದಾಖಲೆಗಳನ್ನು ತಿದ್ದುಪಡಿ ಮಾಡಿ ಕೊಡಲು ಬರುವುದಿಲ್ಲ. ಇವೆಲ್ಲ ಸ್ಕ್ಯಾನಿಂಗ್‌ನಲ್ಲಿ ಭದ್ರವಾಗಿವೆ. ಇಷ್ಟಾಗಿಯೂ ಬಿಟ್ಟು ಹೋದ ದಾಖಲೆಗಳನ್ನು ಇಲ್ಲಿ ಮತ್ತೆ ನಮೂದಿಸಬಹುದಾಗಿದೆ. ತಪ್ಪಾಗಿದ್ದರೆ ಅಧಿಕೃತ ಆದೇಶವನ್ನಿಟ್ಟುಕೊಂಡು ತಿದ್ದುಪಡಿಯನ್ನೂ ಮಾಡಬಹುದಾಗಿದೆ. ಡಿಜಿಟಲೀಕರಣಗೊಂಡ ಒಂದು ಪುಟ ಮಾಹಿತಿ ಪಡೆಯಲು ಸಾರ್ವಜನಿಕರು ಸರ್ಕಾರಕ್ಕೆ 20 ರು. ಪಾವತಿಸಬೇಕು. ಈ ಹಣ ನೇರವಾಗಿ ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗುತ್ತದೆ. ಈಗಾಗಲೇ 60 ಸಾವಿರ ಪುಟಗಳನ್ನು ಸಾರ್ವಜನಿಕರು ಡಿಜಟಲೀಕರಣಗೊಂಡ ದಾಖಲೆಯಿಂದ ಪಡೆದಿದ್ದಾರೆ. ತಾಲೂಕು ತಹಸೀಲ್ದಾರ್ ಎಸ್. ರೇಣುಕಾ ಈ ಕುರಿತು ಮಾಹಿತಿ ನೀಡಿ, ಈ ಡಿಜಟಲೀಕರಣ ಒಂದು ಸವಾಲಿನ ಕೆಲಸವಾಗಿತ್ತು. ಆದರೆ ಇದನ್ನು ಸವಾಲಾಗಿ ಸ್ವೀಕರಿಸಿ ದಿನಕ್ಕೆ ನಮ್ಮ ಸಿಬ್ಬಂದಿ 10-11 ಗಂಟೆಗಳ ಕಾಲ ಬೇಸರವಿಲ್ಲದೆ ಕೆಲಸ ನಿರ್ವಹಿಸಿದ್ದರಿಂದ ಇದು ಸಾಧ್ಯವಾಗಿದೆ. ಆದರೆ ಡಿಜಟಲೀಕರಣ ಹಾಗೂ ಮನೆಗಳ ಹಕ್ಕು ಪತ್ರ ವಿತರಣಾ ಕಾರ್ಯಗಳ ನಡುವೆ ಕೆಲಸದ ಒತ್ತಡದಲ್ಲಿ ಕಚೇರಿಯ ಇತರ ಕೆಲಸಗಳಿಗೆ ಒಂದಷ್ಟು ವಿಳಂಬವಾಗಿದೆ ಎಂಬ ಭಾವನೆ ನನ್ನದಾಗಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಿದ್ದರಿಂದ ಮಾತ್ರ ತೃಪ್ತಿಕರವಾಗಿ ಡಿಜಟಲೀಕರಣ ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ. ಕೆಲಸ ಆರಂಭಿಸಿದಾಗ ದೊಡ್ಡ ಹೊರೆ ಎನಿಸಿತ್ತು. ಅರ್ಧ ಕೆಲಸ ಮುಗಿದಾಗ ಇನ್ನಷ್ಟು ವೇಗಕ್ಕೆ ಅವಕಾಶ ಮಾಡಿಕೊಂಡೆವು. ಈಗ ಕೆಲಸ ಮುಗಿದಿದೆ. ಮನಸ್ಸು ನಿರಾಳವಾಗಿದೆ. ಬಹಷ್ಟು ತೃಪ್ತಿ ಇದೆ. ಸಹಕರಿಸಿದ ಸಿಬ್ಬಂದಿಗೆ ನಿಜಕ್ಕೂ ಕೃತಜ್ಞತೆ ಹೇಳಲೇಬೇಕು. ಕಚೇರಿ ಸಮಯವನ್ನು ಮೀರಿ ಎಲ್ಲರೂ ಕೈ ಜೋಡಿಸಿದ್ದು ಸ್ಮರಣೀಯವಾದುದು ಎಂದು ಹಾನಗಲ್ಲ ತಹಸೀಲ್ದಾರ್‌ ಎಸ್.ರೇಣುಕಾ ಹೇಳಿದರು.