ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ವಿಷಾದ । ಲೀಲಮ್ಮ, ಎಂ.ಕೆ.ಶಿವನಂಜಪ್ಪ ಐದನೇ ವರ್ಷದ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ ಮಂಡ್ಯಜನಪ್ರತಿನಿಧಿಗಳ ಕುಟುಂಬಗಳು ಯಾರ ಕೈಗೂ ನಿಲುಕದೆ ನಾಗಾಲೋಟದಲ್ಲಿ ಓಡುತ್ತಿವೆ. ಈ ಬೆಳವಣಿಗೆಯನ್ನು ನೋಡಿದರೆ ಜನಸಾಮಾನ್ಯರ ಕಣ್ಣಿಗೆ ಕಾಣದಷ್ಟು ದೂರದಲ್ಲಿ ಅವರು ನಿಂತಿದ್ದಾರೆ. ಇಂತಹ ಸಮಯದಲ್ಲಿ ಶ್ರೇಷ್ಠ ರಾಜಕೀಯ ಮುತ್ಸದ್ಧಿ ನಾಯಕರು ನೆನಪಾಗುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
ನಗರದ ಗಾಂಧಿ ಭವನದಲ್ಲಿ ಲೀಲಮ್ಮ ಶಿವನಂಜಪ್ಪ, ಎಂ.ಕೆ.ಶಿವನಂಜಪ್ಪ ಸ್ಮಾರಕ ಐದನೇ ವರ್ಷದ ಪ್ರಶಸ್ತಿ ಪ್ರದಾನ ಹಾಗೂ ನಾಲ್ಕು ಕೃತಿಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಜನರ ಕಷ್ಟಗಳಿಗೆ ಸ್ಪಂದಿಸುವ, ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಜನಪ್ರತಿನಿಧಿಗಳು ಬೇಕಿದೆ. ಶ್ರೇಷ್ಠ ರಾಜಕೀಯ ಮುತ್ಸದ್ಧಿಗಳನ್ನು ನೆನಪಿಸಿಕೊಳ್ಳುವುದರೊಂದಿಗೆ ಸಾಮಾಜಿಕ ಪ್ರಜ್ಞೆಯ ಸಂಚಲನವನ್ನು ಜನಮಾನಸದಲ್ಲಿ ಮೂಡಿಸಬೇಕು ಎಂದರು.
ಹಿಂದೆ ಜಿಲ್ಲೆಯಲ್ಲಿ ಆಡಳಿತ ನಡೆಸಿದ ಅನೇಕ ಪ್ರತಿನಿಧಿಗಳು ಪ್ರಜೆಗಳಿಗೆ ದೇವರ ಸ್ವರೂಪದಂತಿದ್ದರು. ಅವರ ಮಾತು, ನಡವಳಿಕೆ, ಸಮಾಜಮುಖಿ ಸೇವೆಗಳನ್ನು ನೋಡಿದಾಗ, ಸಾರ್ವಜನಿಕರೇ ಅವರಿಗೆ ಅಭಿನಂದನಾ ಸಮಾರಂಭ ಮಾಡಬೇಕಿತ್ತು ಎನಿಸುತ್ತದೆ. ಪ್ರಸ್ತುತ ಸಮಾಜದಲ್ಲಿ ನೆಲ, ಸಂಸ್ಕೃತಿ, ವ್ಯವಸ್ಥೆಗಾಗಿ ಅವಿರತ ಶ್ರಮಿಸಿದ ಪೂರ್ವಿಕರನ್ನು ನೆನೆಯುವ ಕಲ್ಪನೆಗಳೇ ದೂರವಾಗುತ್ತಿವೆ ಎಂದು ವಿಷಾದದಿಂದ ಹೇಳಿದರು.ಒಳ್ಳೆಯ ವಿಚಾರಗಳು, ಒಳ್ಳೆಯವರನ್ನು ಮುಂದಿಟ್ಟುಕೊಂಡು ನಾವು ಹೊಸ ತಲೆಮಾರಿನವರಿಗೆ ತಿಳಿಸಿಕೊಡದಿದ್ದರೆ ದ್ರೋಹ ಮಾಡಿದಂತಾಗುತ್ತದೆ. ಅವುಗಳನ್ನು ತಿಳಿಸಿಕೊಟ್ಟಾಗ ಮಾತ್ರ ದೇಶವನ್ನು ಸಾಂಸ್ಕೃತಿಕವಾಗಿ ಕಟ್ಟುವ ಕೆಲಸವಾಗುತ್ತದೆ ಎಂದರು.
ಸಮಾಜಕ್ಕಾಗಿ ದುಡಿಯುವ ಕೈಗಳು ಮತ್ತು ಅವರ ಭಾವನೆಗಳನ್ನು ಗೌರವಿಸಬೇಕು. ಸಮರ್ಪಣಾ ಭಾವವಿರುವ ವ್ಯಕ್ತಿಗಳಿಂದ ಮಾತ್ರ ಉತ್ತಮ ಸಮಾಜಕ್ಕೆ ಪೂರಕ ನೆಲೆಯನ್ನು ಕಟ್ಟಿಕೊಡಲು ಸಾಧ್ಯ ಎಂದು ಹೇಳಿದರು.ನಾಲ್ಕು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಾಹಿತಿ ತೈಲೂರು ವೆಂಕಟಕೃಷ್ಣ, ಪುಸ್ತಕಗಳು ಜೀವನ ಮೌಲ್ಯ ಎತ್ತಿ ಹಿಡಿಯುತ್ತವೆ. ಪುಸ್ತಕ ಸಂಸ್ಕೃತಿ ಬೆಳೆಯಬೇಕು. ಅದರಿಂದ ಜ್ಞಾನ ವಿಕಾಸವಾಗುತ್ತದೆ. ಒಳ್ಳೆಯ ಪುಸ್ತಕಗಳು ಎಲ್ಲರ ಮನೆಗಳಲ್ಲೂ ಇರಬೇಕು ಎಂದು ಹೇಳಿದರು.
ಸಜ್ಜನರ ಸಹವಾಸ ಮತ್ತು ಪುಸ್ತಕಗಳಿಂದ ಜೀವನ ಮೌಲ್ಯ ಹೆಚ್ಚಿಸಿಕೊಳ್ಳಬೇಕು. ಪುಸ್ತಕ ಓದುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಒಳ್ಳೆಯ ವಿಚಾರಗಳು ಮನಸ್ಸನ್ನು ಮುಟ್ಟುವುದರಿಂದ ಉತ್ತಮ ಕೆಲಸಗಳಿಗೂ ಪ್ರೇರಣೆಯಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಕನ್ನಿಕ ನವೋದಯ ತರಬೇತಿ ಕೇಂದ್ರದ ಮುಖ್ಯಸ್ಥೆ ಡಾ.ಎಚ್.ಆರ್.ಕನ್ನಿಕ, ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್ ಕಾರ್ಯದರ್ಶಿ ಹೊಳಲು ರಾಘವೇಂದ್ರ, ಮಂಡ್ಯ ಚೆಸ್ ಅಕಾಡೆಮಿ ಸಹ ಸಂಸ್ಥಾಪಕಿ ಮಾಧುರಿ ಜೈನ್, ಹರಿಕಥಾ ಕೀರ್ತನಕಾರ ಕಾರಸವಾಡಿ ಸತೀಶ್, ಪ್ರತಿಭಾವಂತ ವಿಕಲಚೇತನ ಡಾ.ಎಂ.ಬಿ.ಮಾಲಾ, ಮಿಮ್ಸ್ ನಿವೃತ್ತ ಸಾರ್ವಜನಿಕ ಸಂಪರ್ಕ ಅಧಿಕಾರಿ ಚ.ಮ.ಉಮೇಶ್‌ಬಾಬು ಅವರನ್ನು ಅಭಿನಂದಿಸಲಾಯಿತು.
ಡಾ.ಪ್ರದೀಪ್‌ಕುಮಾರ್ ಹೆಬ್ರಿ ಬರೆದಿರುವ ಅಜಾತಶತ್ರು, ಎಂ.ಎಸ್.ಆತ್ಮಾನಂದ ಸಂಪಾದಿಸಿರುವ ಸುಭಾಷಿತ, ವಿಚಾರ ವಿನಿಮಯ, ಆತ್ಮದೀಪ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ಎಸ್‌ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್ ಇದ್ದರು.---
ಮಂಡ್ಯದ ಗಾಂಧಿ ಭವನದಲ್ಲಿ ನಡೆದ ಲೀಲಮ್ಮ ಶಿವನಂಜಪ್ಪ, ಎಂ.ಕೆ.ಶಿವನಂಜಪ್ಪ ಸ್ಮಾರಕ ಐದನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.