ಪರಿಸರಸ್ನೇಹಿ ಕಲೆಯಲ್ಲಿ ಜನಸ್ನೇಹಿಯಾದ ಚಿತ್ರಗಾರ ಕುಟುಂಬ

KannadaprabhaNewsNetwork |  
Published : Nov 15, 2024, 12:36 AM IST
೧೩ಕೆಎನ್‌ಕೆ-೧                                   ಮಣ್ಣಿನಿಂದ ಗೌರಿ ಮೂರ್ತಿ ತಯಾರಿಸುತ್ತಿರುವ ಲಕ್ಷ್ಮೀಬಾಯಿ ಚಿತ್ರಗಾರ.  | Kannada Prabha

ಸಾರಾಂಶ

ವರ್ಷವಿಡಿ ಬರುವ ನಾನಾ ಹಬ್ಬಗಳಿಗೆ ಪಟ್ಟಣದ ಚಿತ್ರಗಾರ ಕುಟುಂಬವೊಂದು ನಾಲ್ಕೈದು ದಶಕಗಳಿಂದ ಪರಿಸರ ಸ್ನೇಹಿ ಮೂರ್ತಿಗಳ ತಯಾರಿಸುವ ಮೂಲಕ ಜನಸ್ನೇಹಿಯಾಗಿದೆ.

ಎಂ. ಪ್ರಹ್ಲಾದ್

ಕನ್ನಡಪ್ರಭ ವಾರ್ತೆ ಕನಕಗಿರಿ

ವರ್ಷವಿಡಿ ಬರುವ ನಾನಾ ಹಬ್ಬಗಳಿಗೆ ಪಟ್ಟಣದ ಚಿತ್ರಗಾರ ಕುಟುಂಬವೊಂದು ನಾಲ್ಕೈದು ದಶಕಗಳಿಂದ ಪರಿಸರ ಸ್ನೇಹಿ ಮೂರ್ತಿಗಳ ತಯಾರಿಸುವ ಮೂಲಕ ಜನಸ್ನೇಹಿಯಾಗಿದೆ.

ಪಟ್ಟಣದ ರಾಜಬೀದಿಯಲ್ಲಿನ ಲಕ್ಷ್ಮೀಬಾಯಿ ರಮೇಶ ಚಿತ್ರಗಾರ ಕುಟುಂಬವು ನಾಲ್ಕೈದು ದಶಕಗಳಿಂದ ಪರಿಸ್ನೇಹಿ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಡಿಜಿಟಲ್ ಯುಗದಲ್ಲಿಯೂ ಇಲ್ಲಿನ ಮಣ್ಣಿನ ಮೂರ್ತಿಗಳು ಫೇಮಸ್ ಆಗಿದ್ದು, ಗ್ರಾಹಕರು ಹಬ್ಬಕ್ಕಿಂತ ಮುಂಚೆಯೇ ಮೂರ್ತಿ ತಯಾರಿಸಿ ಕೊಡುವಂತೆ ಮುಂಗಡ ಹಣ ನೀಡಿ ಬುಕ್ ಮಾಡುತ್ತಿದ್ದಾರೆ.

ಛತ್ರಿ, ಚಾಮರ, ಗೊಂಡೆ ಹೆಣೆಯುವುದು, ಗಣಪತಿ, ಗೌರಿ, ಮಣ್ಣೆತ್ತು, ಶೇಷ, ಗರುಡ, ಆಂಜನೇಯ ಹೀಗೆ ನಾನಾ ದೇವಿಯರ ಮೂರ್ತಿಗಳು ಲಕ್ಷ್ಮೀಬಾಯಿ ಅವರ ಕೈಯಲ್ಲಿ ಅರಳುತ್ತಿವೆ. ಮಾಡೆಲ್ ಮೂರ್ತಿಗಳಿಗಿಂತ ಇವರ ಕೈಯಲ್ಲಿ ತಯಾರಾದ ಮಣ್ಣಿನ ಮೂರ್ತಿಗಳಿಗೆ ಬಾರಿ ಬೇಡಿಕೆ ಇದೆ. ಇಲ್ಲಿ ತಯಾರು ಆಗುವ ವಸ್ತುಗಳು ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿಯೂ ಜನಮನ್ನಣೆ ಪಡೆದಿವೆ. ವಸ್ತುಗಳ ಬೆಲೆ ವರ್ಷಕ್ಕಿಂತ ವರ್ಷ ₹೧೦ರಿಂದ ೨೦ ಏರಿಕೆಯಾಗಿರುವುದರಿಂದ ಗ್ರಾಹಕರು ಹೆಚ್ಚಿಗೆ ಹಣ ನೀಡುವ ಮೂರ್ತಿಗಳನ್ನು ಕೊಳ್ಳುತ್ತಿದ್ದಾರೆ. ನ. 15ರಂದು ಗೌರಿ ಹುಣ್ಣಿಮೆ ಇರುವುದರಿಂದ ಗೌರಿ ಮೂರ್ತಿಗಳು ಮಾರಾಟವಾಗುತ್ತಿವೆ. ೨೫೦ ರಿಂದ ₹೩೦೦ವರೆಗೆ ಗೌರಿ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಪರಿಸರದ ಮೇಲೆ ಬಹಳಷ್ಟು ದುಷ್ಪರಿಣಾಮ ಉಂಟಾಗುತ್ತಿದೆ. ಆದರೂ ಜನ ಅರ್ಥ ಮಾಡಿಕೊಳ್ಳುತ್ತಿಲ್ಲ. ನಮ್ಮ ಪೂರ್ವಜರು ಕಲಿಸಿದ ಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ.

ನಾವು ಪಡುವ ಶ್ರಮಕ್ಕಿಂತ ನಮ್ಮ ಕೂಲಿ ಉಳಿದರೆ ಸಾಕು. ಹೆಚ್ಚಿನ ಲಾಭಾಂಶ ಬೇಕಿಲ್ಲ ಎನ್ನುತ್ತಾರೆ ಕಲಾವಿದ ನಾಗರಾಜ ಚಿತ್ರಗಾರ.

ತಲೆತಲಾಂತರದಿಂದ ಬಂದ ಈ ಕಲೆಯನ್ನು ಲಕ್ಷ್ಮೀಬಾಯಿ ಅವರ ಕುಟುಂಬ ಅಳವಡಿಸಿಕೊಳ್ಳುವ ಮೂಲಕ ಮಾಡೆಲ್ ಯುಗದ ನೆಪದಲ್ಲಿ ಪರಿಸರದ ಮೇಲೆ ದುಷ್ಪರಿಣಾಮ ಆಗಬಾರದೆಂಬ ಪ್ರಮುಖ ಉದ್ದೇಶ ಹೊಂದಿರುವ ಈ ಕುಟುಂಬ ಪರಿಸರ ಸ್ನೇಹಿ ಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಇದೇ ಕಾರಣಕ್ಕಾಗಿಯೇ ಚಿತ್ರಗಾರ ಕುಟುಂಬವು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ