ದಯಾನಂದ ಕಲ್ನಾರ್
ರಾಜ್ಯದಲ್ಲಿ ಬೇಸಗೆಯ ಬಿಸಿಲ ತಾಪ ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದ್ದು, ಮಾನವರ ಜೊತೆಗೆ ಪ್ರಾಣಿ-ಪಕ್ಷಿಗಳು ಕೂಡ ಬಿಸಿಲ ತಾಪದಿಂದ ತತ್ತರಿಸುತ್ತಿದೆ. ಮಂಗಳೂರಿನ ಪಿಲಿಕುಳ ಡಾ.ಶಿವರಾಮ ಕಾರಂತ ನಿಸರ್ಗಧಾಮದ ಜೈವಿನ ಉದ್ಯಾನದಲ್ಲಿ (ಝೂ) ಬಿಸಿಲ ತಾಪದಿಂದ ಪ್ರಾಣಿ-ಪಕ್ಷಿಗಳ ರಕ್ಷಣೆಗೆ ಫ್ಯಾನ್, ಕೂಲರ್, ಸ್ಲಿಂಕ್ಲರ್ ವ್ಯವಸ್ಥೆ ಮಾಡಲಾಗಿದೆ.
ಬೇಸಗೆಯ ಬಿಸಿಲ ಬೇಗೆಗೆ ಮನುಷ್ಯರು ವಿವಿಧ ರೀತಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅದರಂತೆ ಪಿಲಿಕುಳ ಪ್ರಾಣಿ ಸಂಗ್ರಹಾಲಯದಲ್ಲೂ ಪ್ರಾಣಿ-ಪಕ್ಷಿಗಳಿಗೆ ಬೇಸಗೆಯ ಬಿಸಿಲ ತಾಪದಿಂದ ರಕ್ಷಣೆಗೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪೂರಕ ಕ್ರಮ ಕೈಗೊಳ್ಳಲಾಗಿದೆ. ಪ್ರಾಣಿಗಳಿಗೆ ಫ್ಯಾನ್, ಕೂಲರ್, ಸ್ಲಿಂಕ್ಲರ್: ಅದರಲ್ಲೂ ಬಿಸಿಲ ತಾಪಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಿಲುಕುವ ಪ್ರಾಣಿ-ಪಕ್ಷಿಗಳಿಗೆ ಆದ್ಯತೆ ನೀಡಿ, ಪ್ರಾಣಿ-ಪಕ್ಷಿಗಳಿಗೆ ಸಮರ್ಪಕ ಕುಡಿಯುವ ನೀರು ಪೊರೈಕೆ, ಗೂಡಿನಲ್ಲಿ ಫ್ಯಾನ್ ಅಳವಡಿಕೆ, ಗೂಡಿನ ಮೇಲ್ಛಾವಣಿ ಮೂಲಕ ಗೂಡು ತಂಪಾಗಿರುವಂತೆ ಮಾಡಲು ಮೇಲ್ಛಾವಣಿಗೆ ಸ್ಲಿಂಕ್ಲರ್ ಮೂಲಕ ನೀರು ಹಾಯಿಸುವ ವ್ಯವಸ್ಥೆ ಮಾಡಲಾಗಿದೆ. ಝೂನ ಪ್ರಾಣಿಗಳ ಓಡಾಟದ ಪ್ರದೇಶಗಳಲ್ಲಿ ಅಲ್ಲಲ್ಲಿ ನೀರಿನ ತೊಟ್ಟಿ ನಿರ್ಮಿಸಿ ಅದರಲ್ಲಿ ನೀರು ಸಂಗ್ರಹಿಸಲಾಗುತ್ತಿದ್ದು, ಇದರಲ್ಲಿ ಪ್ರಾಣಿಗಳು ಮಿಂದು ಬೇಸಗೆಯ ಬಿಸಿಲಿನಿಂದ ತಮ್ಮನ್ನು ತಂಪಾಗಿಸುತ್ತಿವೆ. ಪಿಲಿಕುಳ ಝೂ ಅರಣ್ಯ ಪ್ರದೇಶದಲ್ಲಿಯೇ ಇರುವುದರಿಂದ ಇಲ್ಲಿ ಹೆಚ್ಚಿನ ಪ್ರಮಾಣದ ಬಿಸಿಲಿನ ತೀವ್ರತೆ ಇಲ್ಲ, ಆದರೂ ಪೂರಕ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೈಮೇಲೆ ಹೆಚ್ಚಿನ ಕೂದಲು ಇರುವ ಪ್ರಾಣಿಗಳ ಹೊರತು ಕೆಲವು ಪ್ರಾಣಿಗಳ ಮೈಗೆ, ಗೂಡಿಗೆ ಪೈಪ್ ಮೂಲಕ ನೀರು ಹಾಕುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಜೊತೆಗೆ ಬೇಸಗೆಯಲ್ಲಿ ಪ್ರಾಣಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲೂ ನಿಗಾ ವಹಿಸಲಾಗುತ್ತಿದೆ. ಬೇಸಗೆಯ ಬಿಸಿ ಪರಿಣಾಮ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ. ಪೊಲೀಸ್ ಶ್ವಾನ ದಳಕ್ಕೂ ಕೂಲರ್: ಮಂಗಳೂರಿನ ಪೊಲೀಸ್ ಇಲಾಖೆಯಲ್ಲಿನ ಶ್ವಾನದಳಕ್ಕೂ ಬೇಸಗೆಯ ಬಿಸಿಲ ತಾಪದ ದುಷ್ಪರಿಣಾಮ ತಡೆಗೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಶ್ವಾನಗಳ ಕೊಠಡಿಯಲ್ಲಿ ಫ್ಯಾನ್ ಕೂಲರ್ ವ್ಯವಸ್ಥೆ. ಶ್ವಾನಗಳ ವಾಕಿಂಗ್ ಸಮಯ ಬದಲಿಸಿ, ಬಿಸಿಲ ಪ್ರಮಾಣ ಕಡಿಮೆ ಇರುವ ವೇಳೆ ವಾಕಿಂಗ್ ಮಾಡಿಸುವುದು, ಆಹಾರದಲ್ಲೂ ಕೆಲವು ಬದಲಾವಣೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಪಿಲಿಕುಳ ಜೈವಿನ ಉದ್ಯಾನ ಬಗ್ಗೆ: ಪಶ್ಚಿಮಘಟ್ಟಗಳ ವೈವಿಧ್ಯಮಯ ವನ್ಯಜೀವಿಗಳ ಸಂರಕ್ಷಣೆಗೆ ಪಿಲಿಕುಳ ಜೈವಿಕ ಉದ್ಯಾನ ಒಂದು ಪ್ರಮುಖ ಹೆಜ್ಜೆಯಾಗಿದೆ. ಸುಮಾರು 82 ಹೆಕ್ಟೇರ್ ವ್ಯಾಪ್ತಿಯಲ್ಲಿ ವಿಸ್ತಾರಗೊಂಡಿರುವ ಈ ಉದ್ಯಾನವನ್ನು ಭಾರತದ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ‘ಮೇಜರ್ ಝೂ’ ಎಂದು ಮಾನ್ಯತೆ ಪಡೆದುಕೊಂಡಿದೆ. ಪ್ರಾಣಿಗಳ ನೈಸರ್ಗಿಕ ವಾಸಸ್ಥಾನವನ್ನು ಹೋಲುವಂತೆ ಉದ್ಯಾನದ ಆವರಣಗಳನ್ನು ವಿನ್ಯಾಸಗೊಳಿಸಲಾಗಿದೆ. ಇಲ್ಲಿ 900ಕ್ಕೂ ಹೆಚ್ಚು ಪ್ರಾಣಿಗಳು, ಹಾವುಗಳು ಮತ್ತು ಪಕ್ಷಿಗಳು ವಾಸವಿದ್ದು, ಬಹುಪಾಲು ಪ್ರಜಾತಿಗಳು ಯಶಸ್ವಿಯಾಗಿ ಸಂಕುಲವೃದ್ಧಿ ಮಾಡುತ್ತಿವೆ.ಪಿಲಿಕುಳದಲ್ಲಿ ಪ್ರಾಣಿ-ಪಕ್ಷಿಗಳಿಗೆ ಬೇಸಗೆಯ ಬಿಸಿಲ ತಾಪದಿಂದ ರಕ್ಷಣೆಗೆ ನೀರು ಹಾಯಿಸುವ, ಗೂಡಿಗೆ ಫ್ಯಾನ್, ಕೂಲರ್ ಅಳವಡಿಸುವ ವ್ಯವಸ್ಥೆ ಮಾಡಲಾಗಿದೆ. ಗೂಡಿನ ಮೇಲ್ಛಾವಣಿಗೆ ಸ್ಲಿಂಕ್ಲರ್ ಮೂಲಕ ನೀರು ಹಾಯಿಸಲಾಗುತ್ತಿದೆ. ಬೇಸಗೆಯ ತಾಪದಿಂದ ಪ್ರಾಣಿ-ಪಕ್ಷಿಗಳಿಗೆ ಯಾವುದೇ ತೊಂದರೆ ಆಗದಂತೆ ಪೂರಕ ವಾತವರಣ ಕಲ್ಪಿಸಲಾಗಿದೆ.