ಅಡಿಕೆ ಸಸಿ, ಬಾಳೆ, ತೆಂಗಿನ ಗಿಡಗಳ ನಾಶ । ಉಪಟಳಕ್ಕೆ ಕೊನೆ ಎಂದು?
ಕನ್ನಡ ಪ್ರಭ ವಾರ್ತೆ ಹೊನ್ನಾವರ
ಕೃಷಿ ಎಂದರೆ ಮೂಗು ಮುರಿಯುವವರೇ ಇಂದಿನ ಕಾಲದಲ್ಲಿ ಹೆಚ್ಚಾಗಿದ್ದಾರೆ. ಇದಕ್ಕೆ ಕಾರಣ ಹಲವಿದೆ. ಕೂಲಿ ಸಮಸ್ಯೆ, ಹಳ್ಳಿಯಲ್ಲಿ ಯುವ ಸಮುದಾಯ ಇರಲು ಮನಸ್ಸು ಮಾಡದೆ ಇದ್ದಿದ್ದು, ಕೃಷಿಯ ವೆಚ್ಚ ಹೆಚ್ಚು, ಉತ್ಪಾದನೆ ಕಡಿಮೆ ಹೀಗೆ ಹಲವು ಕಾರಣ ಇದೆ. ಇದರ ಜೊತೆ ಕಾಡು ಪ್ರಾಣಿಗಳ ಉಪಟಳ ಹೆಚ್ಚಾದರೆ ಕೇಳಬೇಕಾ? ಕೃಷಿಯನ್ನು ಮಾಡುವವರು ಸಹ ಇದರ ಸಹವಾಸವೇ ಸಾಕು ಎಂದು ಹೇಳುತ್ತಾರೆ. ಇದೇ ಪರಿಸ್ಥಿತಿ ತಾಲೂಕಿನ ನಗರೆ ಗ್ರಾಮದಲ್ಲಿದೆ.ಬಹುತೇಕ ಜನರು ನಂಬಿರುವುದೇ ಕೃಷಿಯನ್ನು. ಅದರಲ್ಲೂ ಅಡಿಕೆಯನ್ನು ಪ್ರಧಾನ ಬೆಳೆಯಾಗಿ ಬೆಳೆಯುತ್ತಾರೆ. ಇದರ ಉತ್ಪನ್ನದ ಮೇಲೆ ಜನರು ಅವಲಂಬಿತವಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಗರೆಯ ಗ್ರಾಮದಲ್ಲಿ ರೈತರು ಕಷ್ಟಪಟ್ಟು ನೆಟ್ಟ ಅಡಿಕೆ ಗಿಡವನ್ನು ರಾತ್ರಿ ಬೆಳಗಾಗುವುದರೊಳಗಾಗಿ ಕಾಡು ಹಂದಿಗಳು ಬಂದು ನಾಶ ಮಾಡುತ್ತವೆ. ಇದು ಸಹಜವಾಗಿಯೇ ಕೃಷಿಕರನ್ನು ಬೇಸರಕ್ಕೆ ದೂಡುತ್ತಿದೆ. ಅಲ್ಲದೆ ಅಡಿಕೆ ಬೆಳೆಯುವ ಕಾಯಕ ಎಂದರೆ ಅದೊಂದು ಸಾಹಸ ಎಂದು ಹೇಳುವಷ್ಟರ ಮಟ್ಟಿಗೆ ಬಂದು ನಿಲ್ಲಿಸಿದೆ.
ಕಾಡು ಹಂದಿಯಿಂದ ತಮ್ಮ ತೋಟ ರಕ್ಷಿಸಿಕೊಳ್ಳಲು ರೈತರುರಾತ್ರಿ ೧೦ ಗಂಟೆಯ ನಂತರ ಪಟಾಕಿ ಹೊಡೆಯುತ್ತಾರೆ. ಸಮೀಪದಲ್ಲಿ ಬರುತ್ತಿರುವ ಹಂದಿಗಳು ಆ ಶಬ್ಧಕ್ಕೆ ಓಡಿ ಹೋಗಲಿ. ಇಲ್ಲಿ ಜನವಸತಿ ಇದೆ ಎಂದು ಅರಿಯಲಿ ಎಂಬ ಕಾರಣಕ್ಕೆ ಹೊಡೆಯುತ್ತಾರೆ. ಆದರೂ ಸಹ ಹಂದಿಗಳು ಬಂದು ತೋಟ ಹಾಳುಗೆಡುವುದು ಕಡಿಮೆ ಆಗುತ್ತಿಲ್ಲ.ಪ್ರಹಾರ ಮಾಡುವಂತಿಲ್ಲ:
ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು, ಗ್ರಾಪಂನವರು ರೈತರ ಬಗ್ಗೆ ಗಮನ ಹರಿಸಿ, ಸೂಕ್ತ ಪರಿಹಾರ ಸಿಗುವಂತೆ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.