ಕಂಪ್ಲಿ: ದೆಹಲಿಯಲ್ಲಿ ವೋಟ್ ಚೋರಿ ಹಾಗೂ ಚುನಾವಣಾ ಅಕ್ರಮಗಳ ವಿರುದ್ಧ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಬೃಹತ್ ಹೋರಾಟದಲ್ಲಿ ಕಾಂಗ್ರೆಸ್ ಎಸ್ಸಿ ಘಟಕದ ಬಳ್ಳಾರಿ ಜಿಲ್ಲಾಧ್ಯಕ್ಷ ವೀರಾಂಜನೇಯಲು ಸೇರಿದಂತೆ ಕಂಪ್ಲಿ ಕ್ಷೇತ್ರದ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ ಮೂಲ ಅಸ್ತಿತ್ವವೇ ಜನಮತವಾಗಿದೆ. ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯಬಾರದು. ಆದರೆ ಬಿಜೆಪಿ ಸರ್ಕಾರ ಅಧಿಕಾರದ ಬಲದಿಂದ ಮತದಾರರ ಹೆಸರು ತೆಗೆಯುವುದು, ಮತ ಯಂತ್ರಗಳ ದುರ್ಬಳಕೆ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಜನಮತವನ್ನು ವಂಚಿಸುತ್ತಿದೆ ಎಂಬ ಆರೋಪಗಳು ದಿನೇದಿನೇ ಹೆಚ್ಚುತ್ತಿವೆ. ಕಾಂಗ್ರೆಸ್ ಪಕ್ಷವು ಸದಾ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಮತದಾನದ ಪಾರದರ್ಶಕತೆ ರಕ್ಷಿಸುವ ಪರವಾಗಿ ನಿಂತಿದ್ದು, ದೇಶದ ಜನತೆಯ ಹಕ್ಕುಗಳನ್ನು ಕಾಪಾಡಲು ಹೋರಾಟ ನಡೆಸುತ್ತಿದೆ. ಈ ಹೋರಾಟವೂ ಅದೇ ಭಾಗವಾಗಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆಗಳ ವಿರುದ್ಧ ಘೋಷಣೆಗಳನ್ನು ಕೂಗಿ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣಾ ವ್ಯವಸ್ಥೆ ಜಾರಿಗೆ ಒತ್ತಾಯಿಸಿದರು.