ಮೆಣಸಿನಕಾಯಿ ಬೆಳೆದ ರೈತನಿಗೆ ಬೆಲೆ ಇಳಿಕೆ ಬರೆ

KannadaprabhaNewsNetwork |  
Published : Jan 28, 2024, 01:16 AM IST
ಅಫಜಲ್ಪುರದ ರೈತ ಚಿದಾನಂದ ಸಾಲಿಮಠ ಮೆಣಸಿನಕಾಯಿ ಕಟಾವು ಮಾಡಿ ಹೊಲದಲ್ಲಿ ಸಂಗ್ರಹಿಸಿಟ್ಟಿರುವುದು. | Kannada Prabha

ಸಾರಾಂಶ

ಅಫಜಲ್ಪುರ ತಾಲೂಕಿನಾದ್ಯಂತ ಸುಮಾರು 500 ಹೆಕ್ಟೇರ್‌ಗೂ ಹೆಚ್ಚು ಕ್ಷೇತ್ರದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಇನ್ನೇನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಿದರೆ ಬರದ ನಡುವೆ ಭರ್ಜರಿ ಲಾಭ ಮಾಡಿಕೊಳ್ಳಬಹುದೆಂದು ಕನಸ್ಸು ಕಟ್ಟಿಕೊಂಡಿದ್ದ ರೈತರಿಗೆ ದಿಢೀರ ಬೆಲೆ ಇಳಿಕೆಯಿಂದಾಗಿ ಮರ್ಮಾಘಾತವಾದಂತಾಗಿದೆ.

ರಾಹುಲ್ ದೊಡ್ಮನಿ

ಕನ್ನಡಪ್ರಭ ವಾರ್ತೆ ಚವಡಾಪುರ

ಮಳೆ ಕೊರತೆಯಿಂದ ಆವರಿಸಿದ ಬರದ ಛಾಯೆಯ ನಡುವೆ ಲಾಭದಾಯಕ ತೋಟಗಾರಿಕೆ ಬೆಳೆ ಎನಿಸಿಕೊಂಡಿದ್ದ ಮೆಣಸಿನಕಾಯಿ ಬೆಳೆದ ರೈತರಿಗೆ ಈಗ ಬೆಲೆ ಇಳಿಕೆಯ ಬರೆ ಬಿದ್ದಿದ್ದು ಭಾರಿ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಲೆ ಇಳಿಕೆಯ ಖಾರ ಮೈಸುಡುವಂತೆ ಮಾಡಿದೆ.

ಅಫಜಲ್ಪುರ ತಾಲೂಕಿನಾದ್ಯಂತ ಸುಮಾರು 500 ಹೆಕ್ಟೇರ್‌ಗೂ ಹೆಚ್ಚು ಕ್ಷೇತ್ರದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ವರ್ಷಾರಂಭದಲ್ಲಿ ಮೆಣಸಿನಕಾಯಿ ಬೆಲೆ ಬ್ಯಾಡಗಿ ಮೆಣಸಿನಕಾಯಿ ಕ್ವಿಂಟಲ್‌ಗೆ 50 ಸಾವಿರದ ಗಡಿ ದಾಟಿದ್ದರೆ ಇತರ ಮೆಣಸಿನಕಾಯಿ ಬೆಲೆ 30 ಸಾವಿರದ ಗಡಿ ದಾಟಿತ್ತು. ಇನ್ನೇನು ಮೆಣಸಿನಕಾಯಿ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಿದರೆ ಬರದ ನಡುವೆ ಭರ್ಜರಿ ಲಾಭ ಮಾಡಿಕೊಳ್ಳಬಹುದೆಂದು ಕನಸ್ಸು ಕಟ್ಟಿಕೊಂಡಿದ್ದ ರೈತರಿಗೆ ದಿಢೀರ ಬೆಲೆ ಇಳಿಕೆಯಿಂದಾಗಿ ಮರ್ಮಾಘಾತವಾದಂತಾಗಿದೆ.

ಲಾಭದ ಸಿಹಿ ತರಬೇಕಿದ್ದ ಮೆಣಸಿನಕಾಯಿ ಖಾರವಾಯ್ತು:

ಅಫಜಲ್ಪುರ ತಾಲೂಕಿನಾದ್ಯಂತ ಈ ಬಾರಿ ಹೆಚ್ಚಿನ ಕ್ಷೇತ್ರದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಎಲ್ಲಾ ರೈತರು ಮೆಣಸಿನಕಾಯಿಯ ಲಾಭ ಪಡೆದು ಕೃಷಿಗಾಗಿ ಮಾಡಿದ ಸಾಲ ತೀರಿಸಿ ಋಣಮುಕ್ತರಾಗಬೇಕೆಂದು ಹಂಬಲಿಸಿ ನಿತ್ಯ ಹೊಲಕ್ಕೆ ಹೋಗಿ ಕೆಂಪು ಬಂಗಾರವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದರು. ಈಗ ಕಟಾವಾಗಿರುವ ಮೆಣಸಿನಕಾಯಿ ಲಾಭದ ಸಿಹಿ ತರುತ್ತದೆಂದು ಭಾವಿಸಿದ್ದವರಿಗೆ ಬೆಲೆ ಇಳಿಕೆಯ ಖಾರ ಕಣ್ಣೀರು ತರಿಸುತ್ತಿದೆ. ತಿಂಗಳ ಹಿಂದಷ್ಟೆ ಕ್ವಿಂಟಲ್‌ಗೆ 30 ಸಾವಿರಕ್ಕಿಂತ ಹೆಚ್ಚಿದ್ದ ಮೆಣಸಿನಕಾಯಿ ಬೆಲೆ ಈಗ ದಿಢೀರನೆ 10 ಸಾವಿರಕ್ಕೆ ಇಳಿಕೆಯಾಗಿದ್ದು ರೈತರ ಚಿಂತೆ ಇಮ್ಮುಡಿಗೊಳಿಸಿದೆ.

ಅಫಜಲ್ಪುರ ತಾಲೂಕಿಗೊಂದು ಬೇಕು ಕೋಲ್ಡ್ ಸ್ಟೋರೇಜ್‌:

ಕಟಾವು ಮಾಡಿದ ಮೆಣಸಿನಕಾಯಿ ಸಂಗ್ರಹಿಸಿಟ್ಟು ಬೆಲೆ ಏರಿಕೆ ಆದಾಗ ಮಾರಾಟ ಮಾಡಿ ಲಾಭ ಮಾಡಿಕೊಳ್ಳಬೇಕೆಂದರೆ ಅಫಜಲ್ಪುರ ತಾಲೂಕಿನಲ್ಲಿ ಮೆಣಸಿನಕಾಯಿ ಸಂಗ್ರಹ ಘಟಕ (ಕೊಲ್ಡ್ ಸ್ಟೋರೇಜ್‌) ಇಲ್ಲ. ಇದರಿಂದಾಗಿ ರೈತರು ಕಟಾವು ಮಾಡಿದ ತಕ್ಷಣ ಪಕ್ಕದ ಸೊಲ್ಲಾಪುರ ಇಲ್ಲವೇ ಕಲಬುರಗಿ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡುತ್ತಿದ್ದಾರೆ. ಬೆಲೆ ಇಳಿಕೆಯ ಬರೆ ಒಂದು ಕಡೆಯಾದರೆ ಮಾರುಕಟ್ಟೆಗಳಲ್ಲಿ ಕ್ವಿಂಟಲ್ ಮೆಣಸಿನಕಾಯಿಗೆ ಒಂದು ಸಾವಿರದಂತೆ ದಲ್ಲಾಳಿಗಳು ಕಮಿಷನ್ ಪಡೆಯುತ್ತಾರೆ, ವಾಹನ ಬಾಡಿಗೆ, ದಲ್ಲಾಳಿಗಳ ಕಮಿಷನ್ ಎಲ್ಲಾ ತೆಗೆದು ಬಂದ ಆದಾಯ ಲೆಕ್ಕ ಹಾಕಿದರೆ ರೈತರಿಗೆ ಮೆಣಸಿನಕಾಯಿ ಬೆಳೆಯಲು ಮಾಡಿದ ಖರ್ಚು ಕೂಡ ಭರ್ತಿಯಾಗುವುದಿಲ್ಲ. ಇಷ್ಟೆಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ತಾಲೂಕಿಗೊಂದು ಕೊಲ್ಡ್‌ ಸ್ಟೋರೇಜ್‌ ಬೇಕೇ ಬೇಕು. ಅಫಜಲ್ಪುರ ತಾಲೂಕಿನ ಮೆಣಸಿನಕಾಯಿ ಬೆಳೆ ಕ್ಷೇತ್ರಕ್ಕೆ ಹೋಲಿಸಿದರೆ ಅಂದಾಜು 2500 ಟನ್‌ ಸಾಮರ್ಥ್ಯದ ಕೊಲ್ಡ್ ಸ್ಟೋರೇಜ್ ಅಗತ್ಯವಿದೆ. ಕೊಲ್ಡ್ ಸ್ಟೋರೇಜ್‌ ಇಲ್ಲದ್ದರಿಂದ ಮೆಣಸಿನಕಾಯಿ ಸಂಗ್ರಹಿಸಿಟ್ಟುಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ.

ಮನೆಯಲ್ಲಿಟ್ಟುಕೊಳ್ಳಲಾಗದೆ ಬಂದ ಬೆಲೆಗೆ ಮಾರಾಟ ಮಾಡಿ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಆದರೆ ರೈತರಿಂದ ಖರೀದಿ ಮಾಡಿದವರು ಪುನಃ ಬೆಲೆ ಏರಿಕೆ ಆದಾಗ ಮಾರಾಟ ಮಾಡಿ ಆದಾಯ ಗಳಿಸಿಕೊಳ್ಳುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಯಾಗಿ ರೈತರಿಗೆ ಅನುಕೂಲವಾಗಬೇಕಾದರೆ ಕೊಲ್ಡ್ ಸ್ಟೋರೇಜ್ ಅವಶ್ಯಕತೆ ತುಂಬಾ ಇದೆ.

ಮಳೆ ಬಾರದೆ ತೊಗರಿ, ಹತ್ತಿ ಬೆಳಿ ಹಾಳಾದ್ವು, ಮೆಣಸಿನಕಾಯಿ ಚಲೋ ಲಾಭಾ ತರತದಂತ ಭಾಳ ಖರ್ಚ ಮಾಡಿ ಬೆಳದಿವ್ರಿ, 4 ಎಕರೆ ಮೆಣಸಿನಕಾಯಿ ಬೆಳಿಲಾಕ್ 4 ಲಕ್ಷಕಿಂತ ಹೆಚ್ಚು ಖರ್ಚ ಮಾಡಿನ್ರಿ, ಕಟಾವಿಗಿ ಬರುತನಕ ಮೆಣಸಿನಕಾಯಿ ನೋಡಿ ಕೆಂಪು ಬಂಗಾರ ಭರ್ಜರಿ ಲಾಭ ತರತದಂತ ಭಾಳ ಖುಷಿ ಆಗಿದ್ದೆ. ಆದ್ರ ಕಟಾವಾದ ಬಳಿಕ ಮಾರ್ಕೆಟ್ ರೇಟ್‌ ನೋಡಿ ಕಣ್ಣಿಗಿ ಕತ್ತಲ ಬಂದಂಗ ಆಗ್ಯಾದ್ರಿ. ಹೆಚ್ಚಿನ ಆದಾಯ ನಿರೀಕ್ಷೆ ಇತ್ತು, ಈಗ ಮಾಡಿದ ಲಾಗೋಡಿಗಿ ರೊಕ್ಕ ಸಾಕಾಗ್ತದೋ ಇಲ್ಲೋ ಅನಸೈತಿ. ಅಫಜಲ್ಪುರದಾಗ ಕೋಲ್ಡ್ ಸ್ಟೋರೇಜ್ ಇಲ್ಲದಕ್ಕ ಭಾಳ ಸಮಸ್ಯೆ ಆಗ್ಯಾದ್ರಿ.

ಲಕ್ಷ್ಮಣ ಶಿವಪ್ಪ ಸಿಂಗೆ ಆನೂರ/ಚಿದಾನಂದ ಬಸಯ್ಯ ಸಾಲಿಮಠ ಅಫಜಲ್ಪುರ, ಮೆಣಸಿನಕಾಯಿ ಬೆಳೆದ ರೈತರು

ಹಣ್ಣುಗಳ ಸಂರಕ್ಷಣೆಗೆ ಕೊಲ್ಡ್ ಸ್ಟೋರೇಜ್ ಇದ್ದಂತೆ ಮೆಣಸಿನಕಾಯಿ ಸಂರಕ್ಷಣೆಗೆ ಅಫಜಲ್ಪುರದಲ್ಲಿ ಕೊಲ್ಡ್ ಸ್ಟೋರೇಜ್ ಇಲ್ಲ. ಇದರಿಂದಾಗಿ ರೈತರಿಗೆ ಬಹಳಷ್ಟು ಸಮಸ್ಯೆ ಆಗುತ್ತಿದೆ. ಖಾಸಗಿಯಾಗಿ ಕೊಲ್ಡ್ ಸ್ಟೋರೇಜ್ ಮಾಡಿಕೊಳ್ಳುವವರಿದ್ದರೆ ಇಲಾಖೆಯಿಂದ 40% ಸಬ್ಸಿಡಿ ವ್ಯವಸ್ಥೆ ಇದೆ. ಏಪ್ರೀಲ್ ಮೇ ತಿಂಗಳಲ್ಲಿ ಮತ್ತೆ ಬೆಲೆ ಏರಿಕೆ ಆಗುವ ಸಾಧ್ಯತೆ ಇದ್ದು ಅಲ್ಲಿತನಕ ಮೆಣಸಿನಕಾಯಿ ಸಂಗ್ರಹಿಸಿಟ್ಟು ಮಾರಾಟ ಮಾಡಿದರೆ ಲಾಭ ಪಡೆಯಲು ಅನುಕೂಲವಾಗಲಿದೆ.

ಶಿವಯೋಗಿ, ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಅಫಜಲ್ಪುರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!