ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ಹಾರೋಹಳ್ಳಿ ಗ್ರಾಮದ ಎಚ್.ಎನ್. ಮಧು ಅವರು ಎಂ.ಕಾಂ ಪದವೀಧರರಾಗಿದ್ದು ವ್ಯವಸಾಯದಲ್ಲೂ ಅಪಾರ ಆಸಕ್ತಿ ವಹಿಸಿ ಮಿಶ್ರ ಬೆಳೆಗಳನ್ನು ಬೆಳೆದು ಯಶಸ್ವಿ ಕೃಷಿಕನಾಗಿ ಹೊರಹೊಮ್ಮಿದ್ದಾರೆ.ಹಾರೋಹಳ್ಳಿ ಪಟೇಲ್ ನಂಜಪ್ಪ ಅವರ ಮೂವರು ಪುತ್ರರಲ್ಲಿ ಒಬ್ಬರಾಗಿರುವ ಮಧು, ಎಂಕಾಂ ಓದಿದ್ದಾರೆ. ಇವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಕತ್ತಿಮಲ್ಲೇನಹಳ್ಳಿ ಗ್ರಾಪಂ ಕರವಸೂಲಿದಾರರಾಗಿ ಕೆಲಸ ಮಾಡುತ್ತಿರುವ ಇವರು ತಮ್ಮ ವೃತ್ತಿಯೊಂದಿಗೆ ಕೃಷಿಯನ್ನು ಕೈಬಿಟ್ಟಿಲ್ಲ. ವ್ಯವಸಾಯದ ಮೇಲೆ ಇಚ್ಛಾಶಕ್ತಿ ವಹಿಸಿ ಕುಟುಂಬದವರ ನೆರವಿನೊಂದಿಗೆ ವಿವಿಧ ಬೆಳೆಗಳನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.ಕೃಷಿ ಕ್ಷೇತ್ರದ ಬೆಳವಣಿಗೆಗೆ ಹೈನುಗಾರಿಕೆ ಬೆನ್ನೆಲೆಬು ಎಂಬುದನ್ನು ಕೂಡ ಮನಗಂಡಿರುವ ಮಧು ಅವರ ಕುಟುಂಬ ಜಾನುವಾರುಗಳ ಸಾಕಾಣಿಕೆಯಲ್ಲೂ ಮುಂದಿದ್ದಾರೆ. ಎಮ್ಮೆ, ಹಸುಗಳನ್ನು ಸಾಕಿದ್ದಾರೆ. ಕೃಷಿ ಕಾಯಕಕ್ಕೆ ಹೆಗಲಿಗೆ ಹೆಗಲು ಕೊಟ್ಟು ದುಡಿಯಲು ಒಂದು ಜತೆ ಎತ್ತುಗಳನ್ನು ಸಾಕಿದ್ದಾರೆ. ಬೇಸಾಯದಲ್ಲಿ ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ತಿನ್ನುವ ಅನ್ನ ವಿಷಹಾರವಾಗಿ ಪರಿವರ್ತನೆಯಾಗುತ್ತಿದೆ. ಅಲ್ಲದೆ ಮಣ್ಣಿನ ಫಲವತ್ತತೆ ಸಹ ಕಳೆದುಕೊಂಡು ಅನ್ನ ಬೆಳೆಯುವ ಭೂಮಿಯೂ ಬರಡಾಗುತ್ತಿದೆ ಎನ್ನುವ ಪರಿಜ್ಞಾನವಿಲ್ಲದೆ ಅದೆಷ್ಟೋ ಅನ್ನದಾತರು ಸಾವಯವ ಕೃಷಿಗೆ ಎಳ್ಳುನೀರು ಬಿಟ್ಟಿರುವುದು ಸುಳ್ಳೇನಲ್ಲ, ಈ ನಡುವೆ ಮಧು ಜಾನುವಾರು ಸಾಕಾಣಿಕೆ ಜತೆಗೆ ಸಾವಯವ ಕೃಷಿ ಕಾಯಕ ಪದ್ಧತಿ ಅಳವಡಿಸಿಕೊಂಡು ಮಿಶ್ರ ಬೇಸಾಯದಲ್ಲಿ ತೊಡಗಿಕೊಂಡಿದ್ದಾರೆ.
ಹೊಗೆಸೊಪ್ಪು, ಶುಂಠಿ, ಭತ್ತದ ಬೆಳೆ ಬೆಳೆಯುತ್ತಾರೆ. 180 ತೆಂಗಿನ ಮರಗಳು, 500 ಅಡಿಕೆ ಮರಗಳನ್ನು ಬೆಳೆಸಿದ್ದು, ಕೃಷಿಭೂಮಿಯನ್ನು ಬಂಗಾರವಾಗಿಸಿದ್ದಾರೆ. ಇವರ ತಂದೆ ಅವರು ಬಾಲ್ಯದಿಂದಲೂ ಕೃಷಿಯಲ್ಲಿ ಆಸಕ್ತಿ ಮೂಡುವಂತೆ ಮಾಡಿದ್ದು ಹಾಗೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಕೃಷಿ ಬಗ್ಗೆ ಅಪಾರ ಪ್ರೀತಿಗೆ ಕಾರಣವಾಯ್ತು ಎನ್ನುತ್ತಾರೆ ಅವರು. ಕುಟುಂಬದವರೊಂದಿಗೆ ಕೂಡಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡ ಪರಿಣಾಮ ಕೃಷಿ ಹೆಚ್ಚು ಆಪ್ತವಾಯ್ತು ಎಂಬುದು ಅವರ ನಂಬಿಕೆ. ಯಾವುದೇ ವ್ಯಕ್ತಿ ನಿರಂತರವಾಗಿ ಖುಷಿಯಲ್ಲಿ ತೊಡಗಿಸಿಕೊಂಡಿದ್ದೇ ಆದಲ್ಲಿ ಕೃಷಿ ನಷ್ಟವಾಗುವಂತಹ ಕಸುಬಲ್ಲ ಎಂಬುದು ಅವರ ಅಚಲ ನಂಬಿಕೆ. ಕೃಷಿಕ ಒಂದೇ ಬೆಳೆಗೆ ಅಂಟಿಕೊಳ್ಳಬಾರದು ಕೃಷಿಯಲ್ಲಿಯೂ ವೈವಿಧ್ಯತೆಯನ್ನು ಕಾಪಾಡಿಕೊಂಡಾಗ ಕೃಷಿ ನಿರಂತರವಾಗುತ್ತದೆ ಹಾಗೂ ಲಾಭದಾಯಕವಾಗುತ್ತದೆ ಎಂಬುದು ಅವರ ಸ್ಪಷ್ಟ ನಂಬಿಕೆ ಇದರಿಂದ ಕೃಷಿಯಲ್ಲಿ ಏಳಿಗೆ ಸಾಧ್ಯ ಎನ್ನುತ್ತಾರೆ ಕಾಯಕಯೋಗಿ ಮಧು.ಕೃಷಿಕನ ಹೊಲಗದ್ದೆಗಳು ಕೂಡ ಪ್ರಯೋಗಾಲಯವಿದ್ದಂತೆ. ಇಲ್ಲಿ ನಿರಂತರವಾಗಿ ಚಟುವಟಿಕೆಗಳು ನಡೆಯುತ್ತಿರಬೇಕು ಎಂಬುದು ಅವರ ನಂಬಿಕೆ. ಇದಕ್ಕೆ ಪೂರಕವಾಗಿ ಆರಂಭದಿಂದಲೂ ಹೊಸ ಹೊಸ ಮಿಶ್ರ ಬೆಳೆಗಳನ್ನು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ, ಕೆಲವು ತರಕಾರಿ ಬೆಳೆಗಳಷ್ಟೇ ಅಲ್ಲದೆ ತೋಟಗಾರಿಕೆ ಬೆಳೆಗಳನ್ನು ಕೂಡ ಪ್ರಯೋಗಾತ್ಮಕವಾಗಿ ತಮ್ಮ ತಾಕಿನಲ್ಲಿ ಬೆಳೆದು ಯಶಸ್ವಿಯಾಗಿದ್ದಾರೆ. ರೈತನಿಗೆ ನಿರಂತರ ಆದಾಯ ತಂದು ಕೊಡುವ ಮೂಲಕ ನಿತ್ಯದ ಖರ್ಚುವೆಚ್ಚ ಹಾಗೂ ಕೃಷಿ ಭೂಮಿಯ ನಿರ್ವಹಣೆಗೂ ಅನುಕೂಲ. ಈಗ ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಅದರ ಪ್ರಮಾಣವನ್ನು ತಗ್ಗಿಸಿದ್ದೇನೆ ಎನ್ನುತ್ತಾರೆ ಅವರು. ಆಹಾರ ಬೆಳೆಗಳಿಗೆ ಆದ್ಯತೆ:
ಕೃಷಿ ಕ್ಷೇತ್ರವೂ ಸಾಕಷ್ಟು ಮಲಿನಗೊಂಡಿದ್ದು, ಆಹಾರ ವಿಷವಾಗುತ್ತಿದೆ. ಕಡೆ ಪಕ್ಷ ಕೃಷಿಕ ತನ್ನ ಕುಟುಂಬಕ್ಕೆ ಅಗತ್ಯವಿರುವ ಆಹಾರ ಪದಾರ್ಥಗಳನ್ನು ತಾನೇ ಬೆಳೆದುಕೊಳ್ಳುವುದು ಸೂಕ್ತ ಎಂಬುದು ಅವರ ಅಭಿಪ್ರಾಯ. ತಮ್ಮ ಕುಟುಂಬಕ್ಕೆ ಅಗತ್ಯವಿರುವ ಭತ್ತ, ರಾಗಿ ಹಾಗೂ ಕೆಲ ದ್ವಿದಳ ಧಾನ್ಯಗಳನ್ನು ಬೆಳೆದುಕೊಳ್ಳಲು ಅವಕಾಶ ಕಲ್ಪಿಸಿಕೊಂಡಿದ್ದಾರೆ.ಕೃಷಿ ಕಾರ್ಮಿಕರು ದುಬಾರಿಯಾಗಿರುವ ಈ ದಿನಮಾನದಲ್ಲಿ ಕೃಷಿ ಕಾರ್ಮಿಕರ ಮೇಲಿನ ಅವಲಂಬನೆಯನ್ನು ತಗ್ಗಿಸಿಕೊಂಡು ಕೃಷಿ ಮಾಡುವುದು ಜಾಣತನ. ಈ ನಿಟ್ಟಿನಲ್ಲಿ ವೃಕ್ಷಾಧಾರಿತ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆದುಕೊಳ್ಳುವುದು ಸೂಕ್ತ, ಕುಟುಂಬದ ಸದಸ್ಯರೂ ಸಹ ಕೃಷಿಗೆ ನಿಲುಕುವುದು ಕಷ್ಟವಾಗಿರುವ ಈ ಸಂದರ್ಭದಲ್ಲಿ ಒಬ್ಬರು ಅಥವಾ ಇಬ್ಬರು ನಿರ್ವಹಿಸಬಹುದಾದಂತಹ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚು ಉಪಯುಕ್ತ ಎನ್ನುತ್ತಾರೆ ಅವರು. ಕೃಷಿ ಕಾರ್ಮಿಕರಿಗೆ ನೀಡುವ ವೇತನ ಅತ್ಯಂತ ದುಬಾರಿಯಾಗಿದ್ದು ಹೀಗೆ ಕೃಷಿ ಕಾರ್ಮಿಕರಿಗೆ ನೀಡುವ ಆದಾಯವನ್ನು ಉಳಿಕೆ ಮಾಡಿಕೊಳ್ಳುವುದು ಕೂಡ ಕೃಷಿಕರಿಗೆ ಆದಾಯದ ಮೂಲವಾಗಿ ಕೆಲಸ ಮಾಡುತ್ತದೆ ಎನ್ನುತ್ತಾರೆ ಅವರು. ಈ ಕಾರಣದಿಂದಾಗಿಯೇ ಮಿಶ್ರ ಬೆಳೆಗಳಿಗೆ ಒಗ್ಗಿಕೊಂಡಿದ್ದು ಅತ್ಯಂತ ಅಗತ್ಯವಿದ್ದಾಗ ಮಾತ್ರ ಕೃಷಿ ಕಾರ್ಮಿಕರ ನೆರವನ್ನು ಪಡೆಯಲಾಗುತ್ತಿದೆ. ಇದು ಇತರರಿಗೂ ಪ್ರೇರಣೆ ಎನ್ನುತ್ತಾರೆ.ಹೇಳಿಕೆ ಸ್ವಾವಲಂಬಿ ಬದುಕಿಗಾಗಿ ಮೊದಲಿನಿಂದಲೂ ಕೃಷಿ ಪ್ರದಾನ ಕುಟುಂಬವಾಗಿದ್ದು ವ್ಯವಸಾಯದ ಮೇಲೆ ಒಲವಿದೆ. ಹೀಗಾಗಿ ಕೃಷಿ ಮೇಲೆ ಹೆಚ್ಚಿನ ಕಾಯಕ ನಿಷ್ಠೆ ಹೊಂದಿದ್ದು ಮಿಶ್ರ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಬಾಲ್ಯದಿಂದಲೂ ಆಸಕ್ತಿಯಿಂದ, ಪ್ರೀತಿಯಿಂದ ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕೃಷಿ ಕಾಯಕವನ್ನು ಇಂದಿಗೂ ರೂಡಿಸಿಕೊಂಡಿದ್ದು ಪ್ರಯೋಗಾತ್ಮಕವಾಗಿ ಮಿಶ್ರ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಅಚಲ ನಂಬಿಕೆಯೊಂದಿಗೆ ಪರ್ಯಾಯ ಬೆಳೆಗಳನ್ನು ಬೆಳೆದರೆ ಕೃಷಿ ಕೈಹಿಡಿಯಲಿದೆ. ನಮ್ಮ ಕೃಷಿ ಸಾಧನೆಗೆ ಹೆಚ್ಚಿನದಾಗಿ ಕುಟುಂಬದವರ ಸಹಕಾರವಿದೆ. - ಎಚ್.ಎನ್. ಮಧು, ಹಾರೋಹಳ್ಳಿ. (22ಎಚ್ಎಸ್ಎನ್4ಬಿ)