ಪರಶಿವಮೂರ್ತಿ ಮಾಟಲದಿನ್ನಿ
ಇದು ಕುಷ್ಟಗಿ ತಾಲೂಕಿನ ಟಕ್ಕಳಕಿ ಗ್ರಾಮದ ರೈತ ಮುತ್ತಪ್ಪ ಹಗೇದಾಳ ಅವರ ಸಂಕಷ್ಟದ ಚಿತ್ರಣ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬಿಳಿಜೋಳ ಮಳೆಯಿಲ್ಲದೆ ಒಣಗುತ್ತಿರುವುದನ್ನು ಕಂಡು ಸಹಿಸಲಾಗದೆ ದುಬಾರಿ ಹಣ ಕೊಟ್ಟು ಟ್ಯಾಂಕರ್ ನೀರು ಖರೀದಿಸಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಮಳೆಯಾಶ್ರಿತ ಕೃಷಿಯನ್ನೇ ನಂಬಿರುವ ತಾಲೂಕಿನ ರೈತರಿಗೆ ಮಳೆ ಕೈಕೊಟ್ಟಿದ್ದರಿಂದ ಜಮೀನುಗಳಲ್ಲಿನ ಬೆಳೆಗಳು ಒಣಗುತ್ತಿವೆ. ಬಿತ್ತನೆ ಬೀಜ, ಗೊಬ್ಬರ, ಕೂಲಿ ಸೇರಿದಂತೆ ಕೃಷಿಗಾಗಿ ಈಗಾಗಲೇ ಸಾವಿರಾರು ರುಪಾಯಿ ಹೂಡಿಕೆ ಮಾಡಿರುವ ರೈತರಿಗೆ ಟ್ಯಾಂಕರ್ ನೀರಿನ ಖರ್ಚು ಮತ್ತೊಂದು ಹೊರೆಯಾಗಿದೆ. ಹಿಂದೆ ₹600ಕ್ಕೆ ಸಿಗುತ್ತಿದ್ದ ಟ್ಯಾಂಕರ್ ನೀರಿನ ದರ ಈಗ ₹1,000ಕ್ಕೆ ಏರಿಕೆಯಾಗಿದೆ. ಆದರೂ ಕೈಗೆ ಬಂದ ಬೆಳೆಯನ್ನು ಕಳೆದುಕೊಳ್ಳಬಾರದೆಂಬ ಹಂಬಲದಿಂದ ರೈತರು ಸಾಲ ಮಾಡಿ ನೀರು ಖರೀದಿಸುತ್ತಿದ್ದಾರೆ.ಉತ್ತಮ ಬೆಲೆ; ಬೆಳೆಯುವವರೇ ಕಡಿಮೆ!: ಬಿಳಿಜೋಳಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿದ್ದರೂ ಅದರ ಕೃಷಿ ಕ್ಷೇತ್ರ ಮಾತ್ರ ಕುಸಿಯುತ್ತಿದೆ. ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿ ರೈತರು ವಾಣಿಜ್ಯ ಬೆಳೆಗಳತ್ತ ಮುಖ ಮಾಡುತ್ತಿರುವುದರಿಂದ ಬಿಳಿಜೋಳ, ಸಜ್ಜೆಯಂತಹ ಸಾಂಪ್ರದಾಯಿಕ ಆಹಾರ ಧಾನ್ಯಗಳ ಕೃಷಿಗೆ ಹಿನ್ನಡೆಯಾಗುತ್ತಿದೆ.
2,350 ಹೆಕ್ಟೇರ್ ಬಿತ್ತನೆ: ಕುಷ್ಟಗಿ ತಾಲೂಕಿನಲ್ಲಿ ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ 13,200 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ, ಈ ವರೆಗೆ ಕೇವಲ 2,350 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಮಳೆಯ ಕೊರತೆ ಹಾಗೂ ವಾಣಿಜ್ಯ ಬೆಳೆಗಳತ್ತ ರೈತರ ಒಲವು ಹೆಚ್ಚುತ್ತಿರುವುದು ಆಹಾರ ಧಾನ್ಯಗಳ ಕೃಷಿಯ ಮೇಲೆ ಪರಿಣಾಮ ಬೀರಿದೆ.
ಹೊಟ್ಟೆಗೆ ಜೋಳ ಇರಲಿ ಎಂಬ ಹಂಬಲ!: ಟಕ್ಕಳಕಿ ಗ್ರಾಮದ ರೈತ ಮುತ್ತಪ್ಪ ಹಗೇದಾಳ ಅವರು ಬೆಳೆದ ಬಿಳಿಜೋಳ ಮಳೆಯಿಲ್ಲದೆ ಒಣಗುತ್ತಿದೆ. ಇದನ್ನು ನೋಡಲಾಗದೆ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಕೇವಲ ಲಾಭದ ಉದ್ದೇಶದಿಂದಲ್ಲ, ಮುಂದಿನ ದಿನಗಳಲ್ಲಿ ಮನೆಯ ಆಹಾರದ ಅಗತ್ಯಕ್ಕೆ ಜೋಳ ಇರಬೇಕು ಎಂಬ ಕಾರಣಕ್ಕೆ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಸಹಾಯಧನ ನೀಡಬೇಕು: ಬರಗಾಲದಲ್ಲಿ ರೈತರು ಸ್ವಂತ ಹಣ ಖರ್ಚು ಮಾಡಿ ಟ್ಯಾಂಕರ್ ನೀರು ಖರೀದಿಸುವುದು ಕಷ್ಟಕರವಾಗಿದೆ. ₹600 ಇದ್ದ ಟ್ಯಾಂಕರ್ ನೀರಿನ ದರ ₹1,000ಕ್ಕೆ ಏರಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಸರ್ಕಾರ ರೈತರ ಜಮೀನುಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ನೀರು ಖರೀದಿಸುವ ರೈತರಿಗೆ ಸೂಕ್ತ ಸಹಾಯಧನ ನೀಡಿ ಬೆಳೆ ಉಳಿಸಿಕೊಳ್ಳಲು ನೆರವಾಗಬೇಕು ಎಂದು ಕುಷ್ಟಗಿ ರೈತ ಮುಖಂಡ ನಜೀರಸಾಬ ಮೂಲಿಮನಿ ಹೇಳಿದರು.