ಮುಂಡರಗಿ: ಪ್ರತಿವರ್ಷದಂತೆ ಎಳ್ಳ ಅಮವಾಸ್ಯೆ ಅಂಗವಾಗಿ ಗುರುವಾರ ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ರೈತರು ಕುಟುಂಬ ಸಮೇತರಾಗಿ ತಮ್ಮ ಜೋಳ, ಕಡಲೆ, ಗೋದಿ ಜಮೀನುಗಳಿಗೆ ತೆರಳಿ ಭೂಮಿ ತಾಯಿಗೆ ಎಡೆ ಮಾಡಿ ಚರಗ ಚೆಲ್ಲಿದರು.
ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಎಣ್ಣೆ ಹೋಳಿಗೆ, ಕರಿಗೆಡಬು, ಜೋಳದ ಕಡಬು, ಪುಂಡಿಪಲ್ಯ, ಕುಚ್ಚಿದ ಮೆಣಸಿನಕಾಯಿ ಪಲ್ಯ, ಜೋಳದ ರೊಟ್ಟಿ, ಸಜ್ಜಿರೊಟ್ಟಿ, ಚಪಾತಿ, ಎಣ್ಣೆ ಬದನೇಕಾಯಿ ಪಲ್ಯೆ, ಹೆಸರು ಕಾಳು, ಮಡಿಕೆ ಕಾಳು ಸೇರಿದಂತೆ ಅನೇಕ ಉತ್ತರ ಕರ್ನಾಟಕದ ವಿವಿಧ ತೆರನಾದ ಆಹಾರ ಪದಾರ್ಥಗಳು ಮಾಡಿಕೊಂಡು ಭೂಮಿ ತಾಯಿಗೆ ಎಡೆ ಮಾಡಿ ಹುಲ್ಲುಲ್ಲಿಗೋ ಸಲಾಂಬ್ರಿಗೋ ಎನ್ನುತ್ತಾ ಚರಗ ಚೆಲ್ಲಿದರು.
ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನಾಧ್ಯಂತ ಗುರುವಾರ ರೈತರು ತಮ್ಮ ಜಮೀನುಗಳಿಗೆ ಕೇವಲ ತಮ್ಮ ಮನೆಯವರಷ್ಟೇ ಹೋಗಿ ಚರಗ ಚೆಲ್ಲುವ ಬದಲು, ಬಂಧು ಬಾಂಧವರನ್ನು, ಗೆಳೆಯರನ್ನು, ನರೆ ಹೊರೆಯವರನ್ನು ಕರೆದುಕೊಂಡು ಹೋಗಿ ಪ್ರೀತಿಯಿಂದ ಊಟ ಮಾಡಿಸುವುದು ಉತ್ತರ ಕರ್ನಾಟಕದ ಈ ಎಳ್ಳು ಅಮವಾಸ್ಯೆ ವಿಶೇಷವಾಗಿದೆ.