ಪುರಾಣ ಪ್ರಸಿದ್ಧ ಬೂಕನಬೆಟ್ಟದ 93ನೇ ಜಾತ್ರಾ ಮಹೋತ್ಸವ । ಕಳೆದ ವರ್ಷಕ್ಕಿಂತ ನಿರೀಕ್ಷೆಗೂ ಮೀರಿದ ದನಗಳ ಪ್ರಮಾಣ । 11 ದಿನ ಉತ್ಸವ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಹಿರೀಸಾವೆ ಹೋಬಳಿಯ ಪುರಾಣ ಪ್ರಸಿದ್ಧ ಬೂಕನಬೆಟ್ಟದ ಶ್ರೀ ರಂಗನಾಥಸ್ವಾಮಿ ಸನ್ನಿಧಿಯಲ್ಲಿ ಪ್ರಾರಂಭಗೊಂಡಿರುವ ೯೩ ನೇ ವರ್ಷದ ಬೃಹತ್ ದನಗಳ ಜಾತ್ರಾ ಮಹೋತ್ಸನಕ್ಕೆ ಕಳೆದ ವರ್ಷಕ್ಕಿಂತ ನಿರೀಕ್ಷೆಗೂ ಮೀರಿ ಜಾನುವಾರು ಆಗಮಿಸಿವೆ.ಬೂಕನಬೆಟ್ಟದ ತಪ್ಪಲಿನಲ್ಲಿ ಪ್ರತೀ ವರ್ಷವೂ ಜನವರಿ ತಿಂಗಳಲ್ಲಿ ಸುಮಾರು ೧೧ ದಿನಗಳ ಕಾಲ ಬೃಹತ್ ದನಗಳ ಜಾತ್ರಾ ಮಹೋತ್ಸವ ಅದ್ಧೂರಿಯಿಂದ ನಡೆಯುತ್ತದೆ. ಕಳೆದ ೩-೪ ವರ್ಷಗಳಿಂದ ಕೊರೋನಾ ಹಿನ್ನೆಲೆ ಸರ್ಕಾರದ ಆದೇಶದಂತೆ ಸರಳವಾಗಿ ಆಚರಿಸಲಾಗುತ್ತಿತ್ತು.
ಎರಡು ಸಾವಿರಕ್ಕೂ ಹೆಚ್ಚು ಜಾನುವಾರು ಆಗಮಿಸುವ ನಿರೀಕ್ಷೆ ಇದ್ದು ಜಾತ್ರೆ ಮತ್ತಷ್ಟು ಕಳೆಗಟ್ಟಲಿದೆ. ಉತ್ತಮ ಮೈಕಟ್ಟು ಹೊಂದಿರುವ ಹೋರಿ ಹಾಗೂ ದನಗಳು ಆಗಮಿಸಿದ್ದು ಹಳ್ಳಿಕಾರ ತಳಿಯ ಎತ್ತುಗಳಿಗೆ ಇಲ್ಲಿ ಹೆಚ್ಚು ಬೇಡಿಕೆ ಇದೆ.
ಇಲ್ಲಿ ೧೧ ದಿನಗಳ ಕಾಲ ನಡೆಯುವ ಜಾನುವಾರು ಜಾತ್ರಾ ಮಹೋತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜಾನುವಾರು ಪಾಲ್ಗೊಳ್ಳುವುದರಿಂದ ಪಶುಪಾಲನಾ ಇಲಾಖೆ ವತಿಯಿಂದ ಪಶು ವೈದ್ಯರು ಮುನ್ನೆಚ್ಚರಿಕೆ ವಹಿಸಲಿದ್ದು ಜಾತ್ರಾ ಆವರಣದಲ್ಲಿ ಜಾನುವಾರಿಗೆ ಸೂಕ್ತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.
ಹಾಸನ ಜಿಲ್ಲಾ ವ್ಯಾಪ್ತಿ ಸೇರಿದಂತೆ ಮಂಡ್ಯ, ತುಮಕೂರು ಹಾಗೂ ಮೈಸೂರು ಜಿಲ್ಲೆಯ ರೈತರು ಜಾನುವಾರು (ಎತ್ತುಗಳನ್ನು) ಮಾರಾಟ ಮಾಡಲು ಆಗಮಿಸಿದ್ದರೆ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಮಹಾರಾಷ್ಟ್ರದ ಗಡಿ ಭಾಗದ ಜಿಲ್ಲೆಗಳ ರೈತರು ಸಹ ಇಲ್ಲಿ ಜಾನುವಾರು ಖರೀದಿಸಲು ಆಗಮಿಸಿದ್ದು, ಜಾನುವಾರು ವ್ಯಾಪಾರ ಜೋರಾಗಿಯೇ ಪ್ರಾರಂಭಗೊಂಡಿದೆ.
‘ಹೋರಿಗಳನ್ನು ಮಾರುವ ಹಾಗೂ ಖರಿದಿಸುವ ಸಲುವಾಗಿ ಪ್ರತಿ ವರ್ಷವೂ ಈ ಬೃಹತ್ ಜಾತ್ರೆಗೆ ನಾನು ಆಗಮಿಸುತ್ತೇನೆ. ಪ್ರತಿ ವರ್ಷದಂತೆಯೇ ಈ ಬಾರಿಯೂ ಉತ್ತಮ ಮೈಗಟ್ಟಿನ ಹಾಗೂ ಹೆಚ್ಚು ಬೆಲೆಯ ಜಾನುವಾರು ಸೇರಿವೆ. ಈ ಜಾತ್ರೆಯ ಹೋರಿಗಳೆಂದರೆ ರೈತರಿಗೆ ಬಲು ಇಷ್ಟ. ರೈತರ ನಿರೀಕ್ಷೆಯ ಹೋರಿಗಳು ಇಲ್ಲಿ ಸಿಗಲಿವೆ’.
ಶ್ರೀ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಜಾತ್ರೆಯನ್ನು ವೈಭವದಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು ಯಾವುದೇ ಸಮಸ್ಯೆ ಎದುರಾಗದಂತೆ ನಡೆಯುತ್ತಿದೆ. ಅಗತ್ಯ ವಿದ್ಯುತ್ ಪೂರೈಕೆ ಹಾಗೂ ಜನ-ಜಾನುವಾರು ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗಿದೆ.
ಹಿರೀಸಾವೆ ಹೋಬಳಿ ಬೂಕನಬೆಟ್ಟದಲ್ಲಿ ನಡೆಯುತ್ತಿರುವ ಶ್ರೀ ರಂಗನಾಥಸ್ವಾಮಿಯ ಜಾತ್ರೆಗೆ ಹೋರಿಗಳನ್ನು ಮೆರವಣಿಗೆಯೊಂದಿಗೆ ಕರೆತರುತ್ತಿರುವ ರೈತರು.