ನಾಳೆ ಪ್ರಜಾತಂತ್ರಕ್ಕಾಗಿ ನಿರ್ಭೀತ ನಡಿಗೆ

KannadaprabhaNewsNetwork |  
Published : Oct 28, 2026, 02:00 AM IST
ಡಿಸಿ | Kannada Prabha

ಸಾರಾಂಶ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ರದ್ದುಪಡಿಸಿ ಪ್ರಜಾಪ್ರಭುತ್ವ ಹಾಗೂ ಮತದಾನದ ಹಕ್ಕುಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ಅ. 28ರಂದು ಬೆಳಗ್ಗೆ 11ಕ್ಕೆ ಹುಬ್ಬಳ್ಳಿಯಲ್ಲಿ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ "ಪ್ರಜಾತಂತ್ರಕ್ಕಾಗಿ ನಿರ್ಭೀತ ನಡಿಗೆ " ಹಮ್ಮಿಕೊಳ್ಳಲಾಗಿದೆ.

ಹುಬ್ಬಳ್ಳಿ:

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ರದ್ದುಪಡಿಸಿ ಪ್ರಜಾಪ್ರಭುತ್ವ ಹಾಗೂ ಮತದಾನದ ಹಕ್ಕುಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ಅ. 28ರಂದು ಬೆಳಗ್ಗೆ 11ಕ್ಕೆ ನಗರದಲ್ಲಿ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ "ಪ್ರಜಾತಂತ್ರಕ್ಕಾಗಿ ನಿರ್ಭೀತ ನಡಿಗೆ " ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಸದಸ್ಯ ಬಸವರಾಜ ಸೂಳಿಬಾವಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುರ್ಗದ ಬೈಲ್ ವೃತ್ತದಿಂದ ನಡಿಗೆ ಆರಂಭವಾಗಿ ಮರಾಠಾ ಗಲ್ಲಿ, ಸ್ಟೇಶನ್ ರಸ್ತೆ ಮೂಲಕ ಸಾಗಿ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದ ವರೆಗೆ ನಡೆಯಲಿದೆ. ನಂತರ ಸ್ಥಳದಲ್ಲಿಯೇ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು ಎಂದರು.

ಎಸ್‌ಐಆರ್ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಕೋಟ್ಯಂತರ ಜನರ ಹೆಸರುಗಳನ್ನು ಕೈಬಿಡಲಾಗುತ್ತಿದೆ. ಇದರಿಂದ ದಾಖಲೆಗಳಿಲ್ಲದ ಆದಿವಾಸಿಗಳು, ದಲಿತರು, ಕೂಲಿ ಕಾರ್ಮಿಕರು, ಮಹಿಳೆಯರು, ಅಲೆಮಾರಿಗಳು, ಅಲ್ಪಸಂಖ್ಯಾತರು ಹಾಗೂ ಬಡವರು ಮತದಾನದ ಹಕ್ಕಿನಿಂದ ವಂಚಿತರಾಗುವ ಆತಂಕವಿದೆ. ಮನೆ ಬದಲಾವಣೆ, ದಾಖಲೆಗಳ ಕೊರತೆ ಹಾಗೂ ಪರಿಶೀಲನೆ ವೇಳೆ ಉಂಟಾಗುವ ಲೋಪಗಳ ನೆಪದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಅಳಿಸುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.

ಬೂತ್ ಮಟ್ಟದ ಅಧಿಕಾರಿಗಳಿಗೆ ಸಮರ್ಪಕ ತರಬೇತಿ ನೀಡದೆ, ಪೂರ್ವಸಿದ್ಧತೆ ಇಲ್ಲದೆ ತರಾತುರಿಯಲ್ಲಿ ಪ್ರಕ್ರಿಯೆ ನಡೆಸುತ್ತಿರುವುದರಿಂದ ಹಲವು ಲೋಪಗಳು ಸಂಭವಿಸುತ್ತಿವೆ. ಕರಡು ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟವರಿಗೆ ಸೂಕ್ತ ತಿದ್ದುಪಡಿ ಹಾಗೂ ಮರುನೋಂದಣಿಗೆ ಅವಕಾಶ ಕಲ್ಪಿಸಬೇಕು. ಅರ್ಹ ಮತದಾರರಿಗೆ ನೋಟಿಸ್ ನೀಡಿ ದೂರದ ಊರುಗಳಿಂದ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸುವುದರಿಂದ ಕಾರ್ಮಿಕರು ಹಾಗೂ ಬಡಜನರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.

ಪ್ರತಿಭಟನಾ ನಡಿಗೆಯಲ್ಲಿ ಜನಪರ, ಪ್ರಗತಿಪರ, ರೈತ, ಕಾರ್ಮಿಕ, ಮಹಿಳಾಪರ, ಅಹಿಂದ, ವಿದ್ಯಾರ್ಥಿ- ಯುವಜನ, ಅಲ್ಪಸಂಖ್ಯಾತ, ಸಾಹಿತ್ಯ-ಸಾಂಸ್ಕೃತಿಕ, ಕನ್ನಡಪರ ಹಾಗೂ ಬಸವ ಸಂಘಟನೆಗಳು ಸೇರಿದಂತೆ ನಗರದ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವದ ರಕ್ಷಣೆಯ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದರು.

ಗುರುನಾಥ ಉಳ್ಳಿಕಾಶಿ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣ ರದ್ದುಗೊಳಿಸಿ ಹಿಂದಿನ ಮತದಾರರ ಪಟ್ಟಿ ಪರಿಷ್ಕರಣೆ ಪದ್ಧತಿ ಮುಂದುವರಿಸಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರನ್ನು ವಜಾಗೊಳಿಸಬೇಕು. ಎಸ್‌ಐಆರ್ ಮೂಲಕ ಮತದಾರರನ್ನು ಹೊರಗಿಟ್ಟು ನಡೆಸಿದ ವಿಧಾನಸಭಾ ಚುನಾವಣೆಗಳನ್ನು ಅಸಿಂಧುಗೊಳಿಸಿ ಮರು ಚುನಾವಣೆ ನಡೆಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಅಂದು ಆಗ್ರಹಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಹೇಶ ಪತ್ತಾರ, ಅನ್ವರ ಮುಧೋಳ, ಶೋಭಾ ಕಮತರ, ದೀಪಾ, ಡಾ. ಲಿಂಗರಾಜ ಅಂಗಡಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೈನ್ ಬಸದಿಯ ಬಾಗಿಲು ತೆರೆಸುವಂತೆ ಮನವಿ
ಲೈಂಗಿಕ ದೌರ್ಜನ್ಯ ತಡೆ ಅಗತ್ಯ: ನ್ಯಾಯಾಧೀಶ ಭರತ್