ಕೊಪ್ಪಳ:
ಲಕ್ಷಾಂತರ ರೈತರಿಗೆ ಬದುಕು ನೀಡಿರುವ ತುಂಗಭದ್ರಾ ನದಿಗೆ ಇದೇ ಮೊದಲ ಬಾರಿಗೆ ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿದ್ದ ತುಂಗಭದ್ರಾ ಆರತಿ ಮಹೋತ್ಸವ ಕಾರ್ಯಕ್ರಮ ಅಕ್ಷರಶಃ ಕಾಶಿಯಲ್ಲಿ ನಡೆಯುವ ಗಂಗಾ ಆರತಿ ಮಾದರಿಯಲ್ಲಿಯೇ ಮಂಗಳವಾರ ಸಂಜೆ ಹುಲಿಗಿ ಗ್ರಾಮದ ಬಳಿ ಹುಲಿಗೆಮ್ಮ ದೇವಸ್ಥಾನದ ಸನ್ನಿಧಾನದಲ್ಲಿ ತುಂಗಭದ್ರಾ ನದಿಯ ತಟದಲ್ಲಿ ಸಡಗರ-ಸಂಭ್ರಮದಿಂದ ನೆರವೇರಿತು.ನದಿಯುದ್ದಕ್ಕೂ ವಿದ್ಯುತ್ ದೀಪಾಲಂಕಾರದಿಂದ ತುಂಗಭದ್ರಾ ನದಿ ಕಂಗೊಳಿಸುವುದನ್ನು ನೆರೆದಿದ್ದ ಭಕ್ತರು ಕಣ್ತುಂಬಿಕೊಂಡರು. ಕಾಶಿಯಿಂದಲೇ ಬಂದಿದ್ದ ಅರ್ಚಕರು ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು. ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ನೇತೃತ್ವದಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸೇರಿದಂತೆ ಹರಗುರು ಚರ ಮೂರ್ತಿಗಳು ತುಂಗಭದ್ರಾ ಆರತಿ ಮಹೋತ್ಸವದ ಪೂಜೆ ನೆರವೇರಿಸಿದರು.
ಕಾಶಿಯಿಂದ ಬಂದಿದ್ದ ಅರ್ಚಕರು ವಿಶೇಷ ದೂಪದಾರತಿ, ಉದುಬತ್ತಿ ಆರತಿ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ತುಂಗಭದ್ರಾ ಆರತಿ ಮಹೋತ್ಸವದ ಪ್ರಯುಕ್ತ ಚಂಡಿಕಾ ಹೋಮ, ಭಕ್ತರಿಗೆ ವಿಶೇಷ ಅನ್ನ ಸಂತರ್ಪಣೆ, ಮಹಿಳೆಯರಿಂದ ವಿಶೇಷ ಕುಂಭ ಮೆರವಣಿಗೆ, ನದಿತೀರದಲ್ಲಿ ದೇವಸ್ಥಾನದ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಮತ್ತು ವಿಶೇಷ ಪೂಜೆ ನಡೆಯಿತು. ಇದಲ್ಲದೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಹೊಸಪೇಟೆಯ ಅಂಜಲಿ ಕಲಾತಂಡದಿಂದ ಭರತನಾಟ್ಯ ಹಾಗೂ ನದಿ ತಟದ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಕಾರ್ಯಕ್ರಮದಲ್ಲಿ ಮಾಜಿ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಮುನಿರಾಬಾದ್ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ತುಂಗಭದ್ರಾ ಯೋಜನೆ ಅಧ್ಯಕ್ಷ ಹಸನನಾಬ್ ದೋಟಿಹಾಳ, ಹುಲಿಗಿ ಗ್ರಾಪಂ ಅಧ್ಯಕ್ಷೆ ನೀಲಮ್ಮ ಗುಂಗಾಡಿ, ಎಸ್.ಆರ್. ಪಾಟೀಲ, ಜಿಪಂ ಸಿಇಒ ವರ್ಣಿತ್ ನೆಗೀ, ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ, ಎಡಿಸಿ ಸಿದ್ರಾಮೇಶ್ವರ, ಕ್ಯಾ. ಮಹೇಶ ಮಾಲಗಿತ್ತಿ, ತಹಸೀಲ್ದಾರ್ ವಿಠ್ಠಲ್ ಚೌಗಲಾ ಹಾಗೂ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್. ಪ್ರಕಾಶರಾವ್ ಸೇರಿದಂತೆ ಜನಪ್ರತಿನಿಧಿಗಳು, ಭಕ್ತರು ಉಪಸ್ಥಿತರಿದ್ದರು.
ಅಬ್ಬರಿಸಿದ ಮಳೆ, ಬರದ ಭಕ್ತರುತುಂಗಭದ್ರಾ ಆರತಿ ಪ್ರಾರಂಭವಾಗುವ ಮುನ್ನವೇ ಸುರಿದ ಮಳೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಭಕ್ತರು ಆಗಮಿಸಲಿಲ್ಲ. ಇದು ಸಂಘಟಕರಿಗೆ ಬೇಸರ ಮೂಡಿಸಿತು. ಆದರೂ ಸಹ ಸೇರಿದ್ದ ಭಕ್ತರ ಸಂಭ್ರಮಕ್ಕೇನು ಕೊರತೆ ಇರಲಿಲ್ಲ. ಆರತಿ ಕಾರ್ಯಕ್ರಮಕ್ಕೂ ಮುನ್ನ ಹುಲಿಗೆಲ್ಲಮ್ಮ ದೇವಸ್ಥಾನದ ರಥದ ಪಾದಗಟ್ಟೆಯಿಂದ ಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದರು. ಇದೇ ವೇಳೆ ಭಾರಿ ಮಳೆ ಸುರಿದಿದ್ದರಿಂದ ನೆನೆದುಕೊಂಡೆ ನದಿಯ ದಡದ ವರೆಗೂ ಸಾಗಿದರು.
ನದಿಯೊಳಗೆ ಸಿಡಿತಲೆ, ಪಟಾಕಿಗಳ ಅಬ್ಬರನೀರು ನಾಯಿ ಸಂರಕ್ಷಿತ ತುಂಗಭದ್ರಾ ನದಿಯಲ್ಲಿ ತುಂಗಭದ್ರಾ ಆರತಿ ಮಹೋತ್ಸವ ನಿಮಿತ್ತ ಪಟಾಕಿ ಸಿಡಿಸಲಾಯಿತು. ಇದರಿಂದ ನೀರು ನಾಯಿಗಳು ಸೇರಿದಂತೆ ಚಲಚರಗಳು ಚಡಪಡಿಸಿರಬೇಕು. ಎಡಿಸಿ ಸಿದ್ರಾಮೇಶ್ವರ, ಜಿಪಂ ಸಿಇಒ ವರ್ಣೀತ್ ನೇಗಿ. ಎಸ್ಪಿ ಇದ್ದರೂ ಸೊಲ್ಲೆತ್ತಲೇ ಇಲ್ಲ. ಪ್ರಾಣಿಪ್ರಿಯರು ಮಾತ್ರ ಜೀವ ಹಿಂಡಿಕೊಳ್ಳುತ್ತಿದ್ದರು. ನದಿಯೊಳಗೆ ನಿಂತು ಬಂಡೆಗಳ ಮೇಲೆ ಪಟಾಕಿ ಸಿಡಿಸಲಾಯಿತು.ಇದೇ ಮೊದಲ ಬಾರಿಗೆ ಹಮ್ಮಿಕೊಂಡ ತುಂಗಭದ್ರಾ ಆರತಿ ಮಹೋತ್ಸವ ನಿರೀಕ್ಷೆ ಮೀರಿ ಯಶಸ್ವಿಯಾಗಿದೆ. ಮಳೆ ಬಂದಿದ್ದರಿಂದ ಒಂಚೂರು ಸಮಸ್ಯೆಯಾಯಿತು. ಇಲ್ಲದಿದ್ದರೆ ಇನ್ನೂ ಅಪಾರ ಭಕ್ತರು ಸೇರುತ್ತಿದ್ದರು ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.