ಕಾರಟಗಿ:
ಈ ಬಾರಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಒಂದೇ ಬೆಳೆಗೆ ನೀರು ಲಭ್ಯವಿದ್ದು, ಕ್ಲೋಸರ್‌ನಲ್ಲಿ ದುರಸ್ತಿಗೊಂಡ ಕ್ರಸ್ಟ್‌ಗೇಟ್‌ಗಳನ್ನು ಶೀಘ್ರವೇ ಹೊಸದಾಗಿ ಅಳವಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನೀರಾವರಿ, ಅಣೆಕಟ್ಟೆ ತಾಂತ್ರಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದು ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಕಾರ್ಯ 6ರಿಂದ 8 ತಿಂಗಳ ಕಾಲ ಆಗುವುದರಿಂದ ರೈತರು ಸಹಕಾರ ನೀಡಬೇಕು. ಜಲಾಶಯ ನಿರ್ವಹಣೆ ಮಾಡುವ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು. ಅವರು ಸೂಕ್ತ ಸಮಯದಲ್ಲಿ ಅನುದಾನ ನೀಡದ್ದರೇ ರಾಜ್ಯ ಸರ್ಕಾರವೇ ಈ ಕೆಲಸ ಮಾಡಿಸಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
19ನೇ ಕ್ರಸ್ಟ್‌ಗೇಟ್ ದುರಸ್ತಿ ಮಾಡಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಹ ಒಪ್ಪಿಕೊಂಡಿದ್ದಾರೆ. ಆದರೆ, ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಅವರ ಅಜ್ಞಾನ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಮಗೆ ಜಲಾಶಯದ ಸುರಕ್ಷತೆ ಮುಖ್ಯ. ತಿಳಿವಳಿಕೆ ಇಲ್ಲದವರನ್ನು ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದರೆ ಹೀಗೆ ಆಗುವುದು. ಬುದ್ಧಿ ಇದೀಯ್ಯಾ ಅವರಿಗೆ ಎಂದ ಸಚಿವರು, ಡ್ಯಾಂ ಯಾರ ನಿಯಂತ್ರಣದಲ್ಲಿ ಇದೆ, ಯಾರು ನಿರ್ವಹಿಸುತ್ತಾರೆ, ಗೇಟ್ ಮಾಡುವರ‍್ಯಾರು, ತುಂಗಭದ್ರಾ ಬೋರ್ಡ್ ಯಾರ ಕೈಯಲ್ಲಿದೆ ಎನ್ನುವ ಸಾಮಾನ್ಯ ಜ್ಞಾನ ಬಸವರಾಜ ದಢೇಸೂಗೂರ ಅವರಿಗಿಲ್ಲ ಎಂದು ತಿರುಗೇಟು ನೀಡಿ, ಅವರು ಮಾತನಾಡುವ ಭಾಷೆ ಸರಿಪಡಿಸಿಕೊಳ್ಳದಿದ್ದರೆ ನಾನು ಸಹ ಏಕ ವಚನದಲ್ಲಿ ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತರ ಕಾಳಜಿ ಇದೆ:ನಮಗೂ ಸಹ ರೈತರ ಬಗ್ಗೆ ಕಾಳಜಿ ಇದೆ. ಆದರೆ, ಜಲಾಶಯದ ಸುರಕ್ಷತೆ ಮುಖ್ಯವಾಗಿದೆ. ಆರು ಕ್ರಸ್ಟ್‌ಗೇಟ್‌ಗಳು ಕೆಟ್ಟಿದ್ದು ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ದುರಸ್ತಿಗೆ ಮುಂದಾಗಿದೆ ಎಂದರು.
ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿ ಕುರಿತು ಮಾತನಾಡಿದ ಸಚಿವರು, ನಮ್ಮ ಸರ್ಕಾರ ಸಾಮಾಜಿಕ ನ್ಯಾಯದಡಿ ಕೆಲಸ ಮಾಡುತ್ತಿದೆ. ಎಸ್‌ಸಿ-ಎಸ್‌ಟಿ ಜನಾಂಗದವರು ಮನುಷ್ಯರಲ್ಲವೇ. ನಾನು ಆ ಸಮುದಾಯದಿಂದ ಬಂದಿರುವೆ. ಅವರು ವೋಟ್ ನೀಡುತ್ತಿದ್ದು ಅವರಿಗೆ ನ್ಯಾಯ ಸಿಗಬೇಡವೇ ಎಂದರು.