ಕಾರಟಗಿ:
ಇಲ್ಲಿನ ಡಾ. ರಾಜ್‌ಕಲಾ ಮಂದಿರದ ಬಳಿ ಸೇರಿದ ಧರ್ಮಸ್ಥಳ ಭಕ್ತರು ಮತ್ತು ಬಿಜೆಪಿಯ ವಿವಿಧ ಘಟಕಗಳ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆ ಹಳೆ ಬಸ್ ನಿಲ್ದಾಣ ಮೂಲಕ ಮುಖ್ಯ ರಸ್ತೆ ಮಾರ್ಗವಾಗಿ ಹೊಸ ಬಸ್‌ನಿಲ್ದಾಣದ ವರೆಗೆ ನಡೆಸಿ ಅಲ್ಲಿ ಪ್ರತಿಭಟನಾ ಸಭೆ ನಡೆಸಿದರು.ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ ಮಾತನಾಡಿ, ಧರ್ಮ ವಿರೋಧಿಗಳಿಗೆ ವಿದೇಶದಿಂದ ಹಣ ಬರುತ್ತಿದೆ. ಆ ಹಣವನ್ನೆ ಇಂಥ ಕೃತ್ಯಕ್ಕೆ ಬಳಸಿಕೊಂಡು ಸುಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಧರ್ಮಸ್ಥಳ ಕೇವಲ ರಾಜ್ಯವಲ್ಲದೇ ದೇಶಾದ್ಯಂತ ಕೋಟ್ಯಂತರ ಭಕ್ತರನ್ನು ಹೊಂದಿದೆ ಎಂದ ಅವರು, ಮಹೇಶ ಶೆಟ್ಟಿ ತಿಮ್ಮರೋಡಿ ಮತ್ತವರ ಬುರುಡೆ ಗ್ಯಾಂಗ್ ವ್ಯವಸ್ಥಿತವಾಗಿ ಸಂಚು ರೂಪಿಸಿಕೊಂಡು ಹಿಂದೂ ಧರ್ಮದ ದೇವಸ್ಥಾನ ಗುರಿಯಾಗಿಸಿಕೊಂಡು ಚಾರಿತ್ರಿವಧೆ ಮಾಡಲಾಗುತ್ತಿದೆ ಎಂದರು.
ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಸವರಾಜ ಎತ್ತಿನಮನಿ ಮಾತನಾಡಿ, ಶತಮಾನಗಳಿಂದ ಹಿಂದೂ ಧರ್ಮವನ್ನು ಹಾಳು ಮಾಡಲು ಸಂಚು ನಡೆಯುತ್ತಲಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಿಂದೂ ಧರ್ಮ ಎಂದಿಗೂ ನಾಶವಾಗುವುದಿಲ್ಲ ಎನ್ನುವುದನ್ನು ಹಿಂದೂ ವಿರೋಧಿಗಳು ಅರ್ಥ ಮಾಡಿಕೊಳ್ಳಬೇಕು ಎಂದ ಅವರು, ಹಿಂದೂಗಳ ಧಾರ್ಮಿಕ ಭಾವನೆ ಅವಮಾನಿಸುವ ದುರುದ್ದೇಶದಿಂದ ಕೆಲ ಕಿಡಿಗೇಡಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದೂ ಧರ್ಮದ ಜನರನ್ನು ದಿಕ್ಕು ತಪ್ಪಿಸುವ ಷಡ್ಯಂತ್ರ ನಿಲ್ಲಬೇಕು ಎಂದು ಆಗ್ರಹಿಸಿದರು.ಮಹಿಳಾ ಘಟಕದ ಪ್ರಿಯಾಂಕಾ ಪವಾರ ಮಾತನಾಡಿದರು. ನಂತರ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಕಂದಾಯ ಶಿರಸ್ತೇದಾರರಿಗೆ ಸಲ್ಲಿಸಲಾಯಿತು.
ಈ ವೇಳೆ ಬಿಜೆಪಿ ಜಿಲ್ಲಾ ಯುವ ಮೊರ್ಚಾ ಅಧ್ಯಕ್ಷ ಮೌನೇಶ ದಢೇಸೂಗೂರು, ತಾಪ ಮಾಜಿ ಸದಸ್ಯ ತಿಪ್ಪಣ್ಣ ನಾಯಕ, ಸೋಮನಾಥ ಉಡಮಕಲ್, ದೇವರಾಜ ನಾಯಕ, ಶರಣಬಸವ ದೇವರಮನಿ, ಮರಿಸ್ವಾಮಿ, ಹನುಮಂತಪ್ಪ ಕಬ್ಬೇರ, ಈಶಪ್ಪ ಅಂಗಡಿ, ಬಸವರಾಜ ಜುಟ್ಲದ, ನಿಂಗಪ್ಪ, ಕಬ್ಬೇರ, ಶಶಿ ಮೇದಾರ, ರಾಘವೇಂದ್ರ ಭೋವಿ, ಶೇಖರಪ್ಪ ಸಜ್ಜನ, ದುರುಗೇಶ ಗುಡೂರ, ರತ್ನಕುಮಾರಿ ಅಕ್ಕಮಹಾದೇವಿ ಸೇರಿದಂತೆ ಧರ್ಮಸ್ಥಳ ಮಂಜುನಾಥ ಸ್ವಾಮಿ ಭಕ್ತರು ಇದ್ದರು.