ಘಾಟಿ ಸುಬ್ರಹ್ಮಣ್ಯದಲ್ಲಿ ಸಂಭ್ರಮದ ಬ್ರಹ್ಮರಥೋತ್ಸವ

KannadaprabhaNewsNetwork |  
Published : Dec 26, 2025, 01:15 AM IST
ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ಸುಪ್ರಸಿದ್ದ ಬ್ರಹ್ಮರಥೋತ್ಸವ ಗುರುವಾರ ಸಂಭ್ರಮದಿಂದ ನಡೆಯಿತು. ಸಾವಿರಾರು ಭಕ್ತಾರಿಗಳು ಪಾಲ್ಗೊಂಡರು | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ರಾಜ್ಯದ ಸುಪ್ರಸಿದ್ದ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ಗುರುವಾರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ರಾಜ್ಯದ ವಿವಿಧ ಜಿಲ್ಲೆಗಳೂ ಸೇರಿದಂತೆ ಹೊರರಾಜ್ಯಗಳಿಂದಲೂ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ಶ್ರೀಸ್ವಾಮಿಗೆ ಹಣ್ಣು-ದವನ ಅಪಿ೯ಸಿ ಭಕ್ತಿಭಾವ ಮೆರೆದರು.

ದೊಡ್ಡಬಳ್ಳಾಪುರ: ರಾಜ್ಯದ ಸುಪ್ರಸಿದ್ದ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ಗುರುವಾರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ರಾಜ್ಯದ ವಿವಿಧ ಜಿಲ್ಲೆಗಳೂ ಸೇರಿದಂತೆ ಹೊರರಾಜ್ಯಗಳಿಂದಲೂ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ಶ್ರೀಸ್ವಾಮಿಗೆ ಹಣ್ಣು-ದವನ ಅಪಿ೯ಸಿ ಭಕ್ತಿಭಾವ ಮೆರೆದರು.

ಪ್ರಸಿದ್ಧ ನಾಗದೇವತಾ ಆರಾಧನಾ ಕ್ಷೇತ್ರವಾಗಿರುವ ಘಾಟಿಯಲ್ಲಿ ಪ್ರತಿವಷ೯ ಸುಬ್ರಹ್ಮಣ್ಯ ಷಷ್ಠಿ(ಪುಷ್ಯ ಷಷ್ಠಿ)ಯ ಅಂಗವಾಗಿ ರಥೋತ್ಸವ ನಡೆದುಕೊಂಡು ಬರುತ್ತಿದೆ. ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ, ಮುಜರಾಯಿ ಇಲಾಖೆ ಮತ್ತು ಭಕ್ತಾದಿಗಳ ಸಹಯೋಗದಲ್ಲಿ ನಡೆದ ರಥೋತ್ಸವಕ್ಕೆ ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ರಥಾರೂಢ ಸುಬ್ರಹ್ಮಣ್ಯಸ್ವಾಮಿಗೆ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ಧೀರಜ್ ಮುನಿರಾಜು, ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀಸ್ವಾಮಿಯ ಪೂಜಾ ವಿಧಿವಿಧಾನಗಳು ಮತ್ತು ವೈಭವದ ಉತ್ಸವಗಳು ಭಕ್ತಾದಿಗಳ ಮನಸೂರೆಗೊಂಡವು. ದೇವಾಲಯದಲ್ಲಿ ಈ ಬಾರಿ ವ್ಯವಸ್ಥಿತವಾಗಿ ದಶ೯ನ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು 7 ಶತಮಾನಗಳ ಹಿಂದೆ ಸಂಡೂರು ಘೋಪ೯ಡೆ ಸಂಸ್ಥಾನದ ಮಹಾರಾಜರಿಂದ ಸ್ಥಾಪಿತವಾದ ಶ್ರೀಕ್ಷೇತ್ರದಲ್ಲಿ ಇಂದಿಗೂ ಭಕ್ತಿಪರಂಪರೆ ಉಳಿದುಕೊಂಡು ಬಂದಿದೆ. ಕಾಲ ಕಾಲಕ್ಕೆ ತಕ್ಕಂತೆ ಮಾಪಾ೯ಟುಗಳಾಗುತ್ತಿದ್ದರೂ ಭಕ್ತಿಭಾವಕ್ಕೆ ಮಾತ್ರ ಎಲ್ಲೆಯಿಲ್ಲ. ರಾಜ್ಯದ ವಿವಿಧ ಮೂಲೆಗಳಿಂದ ಮತ್ತು ಹೊರರಾಜ್ಯಗಳಿಂದ ಕೂಡ ಇಲ್ಲಿಗೆ ಭಕ್ತಾದಿಗಳು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಶ್ರೀಕ್ಷೇತ್ರದಲ್ಲಿ ಎಲ್ಲೆಡೆಯೂ ಜನಜಾತ್ರೆ ಕಂಡುಬರುತ್ತಿತ್ತು. ಗುರುವಾರ ಮಧ್ಯಾಹ್ನ 12 ಗಂಟೆ ಶುಭಮುಹೂತ೯ದಲ್ಲಿ ರಥೋತ್ಸವ ಜರುಗಿತು.

ಶ್ರೀಸ್ವಾಮಿಗೆ ವಿಶೇಷಾಲಂಕಾರ:

ರಥೋತ್ಸವದ ಅಂಗವಾಗಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ಸಹಿತ ಒಂದೇ ಶಿಲೆಯಲ್ಲಿ ಮೂಡಿರುವ ಅಪರೂಪದ ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ವಿಶೇಷಾಲಂಕಾರ ಮಾಡಲಾಗಿತ್ತು. ಮುಮ್ಮುಖವಾಗಿ ಶ್ರೀಸುಬ್ರಹ್ಮಣ್ಯನಾಗಿ ಅವತರಿಸಿರುವ ಶ್ರೀಸ್ವಾಮಿ ತನ್ನ ಬೆನ್ನ ಮೇಲೆ ನರಸಿಂಹಸ್ವಾಮಿಯನ್ನೂ ಹೊತ್ತಿರುವುದು ವಿಶೇಷ. ಪುಷ್ಪಾಲಂಕೖತ ಶ್ರೀಸ್ವಾಮಿಗೆ ಭಕ್ತಾದಿಗಳು ಭಕ್ತಿಭಾವದಿಂದ ಪೂಜಿಸಿ ಧನ್ಯತಾಭಾವ ಪ್ರದಶಿ೯ಸಿದರು.

ನಾಗಶಿಲೆಗಳಿಗೆ ವಿಶೇಷ ಪೂಜೆ:

ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗಿರುವ ಸಾವಿರಾರು ನಾಗರ ಕಲ್ಲುಗಳಿಗೆ ಭಕ್ತಾದಿಗಳು ತನಿ ಎರೆದು ಪೂಜಿಸಿದರು. ಹುತ್ತಗಳ ಪೂಜೆಯೂ ಸಾಂಪ್ರದಾಯಿಕವಾಗಿ ನಡೆಯಿತು. ಕುಜ ದೋಷ ಪರಿಹಾರ, ಸರ್ಪ ದೋಷ ನಿಗ್ರಹ, ಇಷ್ಟಾರ್ಥಸಿದ್ದಿ ಇತ್ಯಾದಿ ವಿಚಾರಗಳಿಗೆ ಕ್ಷೇತ್ರ ಪ್ರಸಿದ್ದಿಯಾಗಿದ್ದು, ಸಹಸ್ರಾರು ಭಕ್ತಾದಿಗಳು ತಮ್ಮ ಹರಕೆ ತೀರಿಸಿದರು.

ಬ್ರಹ್ಮರಥೋತ್ಸವವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ವತಿಯಿಂದ ಸಕಲ ಸಿದ್ಧತೆ ಕೈಗೊಂಡಿತ್ತು.

ದೇವಾಲಯಕ್ಕೆ ವಿಶೇಷ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಇಡೀ ಕ್ಷೇತ್ರ ಝಗಮಗಿಸುತ್ತಿತ್ತು. ಈ ಬಾರಿ ಬ್ರಹ್ಮರಥೋತ್ಸವವು ಕ್ರಿಸ್‌ಮಸ್‌ ರಜೆ ದಿನ ಬಂದಿರುವುದರಿಂದ ಸುಮಾರು ಭಕ್ತಾದಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿತ್ತು. ಟ್ರಾಫಿಕ್ ಸಮಸ್ಯೆ, ಜನಸಂದಣಿ ನಿಯಂತ್ರಿಸಲು ಹಲವು ಕ್ರಮ ಕೈಗೊಳ್ಳಲಾಗಿತ್ತು.

ಘಾಟಿ ಕ್ಷೇತ್ರಕ್ಕೆ ಆಗಮಿಸಲು ಪ್ರಮುಖವಾಗಿ ಎರಡು ರಸ್ತೆ ಸಂಪರ್ಕಗಳಿದ್ದು ಮಾಕಳಿ ಹಾಗೂ ಕಂಟನಕುಂಟೆ ರಸ್ತೆಗಳಲ್ಲಿ ಸ್ವಚ್ಛತೆ ಕಾರ್ಯ, ಫುಟ್ ಪಾತ್ ಒತ್ತುವರಿ ತೆರವು ಮಾಡಲಾಗಿತ್ತು. ದೇವಾಲಯ ಸುತ್ತಮುತ್ತಲಿನ ಫುಟ್ ಪಾತ್ ಮೇಲಿನ ಅಂಗಡಿಗಳನ್ನು ತೆರವುಮಾಡಲಾಗಿತ್ತು. ಭಕ್ತರ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದಂತೆ ಕ್ರಮವಹಿಸಲಾಗಿತ್ತು.

ಭಕ್ತರಿಗೆ ಉಚಿತ ಬಸ್ ವ್ಯವಸ್ಥೆ:

ರಥೋತ್ಸವಕ್ಕೆ ಬರುವ ಭಕ್ತಾದಿಗಳ ವಾಹನಗಳಿಗೆ ಕಂಟನಕುಂಟೆ ಮಾರ್ಗ ಹಾಗು ಮಾಕಳಿ ಮಾರ್ಗ ಬಳಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಯೇ ಭಕ್ತಾದಿಗಳು ತಮ್ಮ ವಾಹನಗಳನ್ನು ನಿಲ್ಲಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ದೇವಾಲಯದ ಬಳಿಗೆ ತೆರಳಲು ಜಿಲ್ಲಾಡಳಿತದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಭಕ್ತಾದಿಗಳು ಆ ಬಸ್ ಗಳ ಮೂಲಕವೇ ಬಂದು ದರ್ಶನ ಪಡೆದು ಮತ್ತೇ ಅದೇ ಬಸ್ ಗಳ ಮೂಲಕ ಮರಳುವ ವ್ಯವಸ್ಥೆ ಮೆಚ್ಚುಗೆಗೆ ಪಾತ್ರವಾಯಿತು.

ಶ್ರೀ ಕ್ಷೇತ್ರಕ್ಕೆ ಬರುವ ವಾಹನಗಳಿಗೆ ಸುಂಕ ವಿನಾಯಿತಿ ನೀಡಲಾಗಿತ್ತು. ಭಕ್ತರಿಗೆ ಸುಗಮ ದರ್ಶನ ವ್ಯವಸ್ಥೆಗಾಗಿ ಧರ್ಮ ದರ್ಶನ ಮತ್ತು 50 ರೂಪಾಯಿಯ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಡಿಸೆಂಬರ್ 28 ರವರೆಗೆ ಕ್ಷೇತ್ರದಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದ್ದು, ಬ್ರಹ್ಮರಥೋತ್ಸವಕ್ಕೆ ಬರುವ ಭಕ್ತರಿಗೆ ಉತ್ತಮ ಅನುಭವ ನೀಡುವ ನಿಟ್ಟಿನಲ್ಲಿ ಅಗತ್ಯಸಿದ್ದತೆ ಮಾಡಿಕೊಳ್ಳಲಾಗಿದೆ.

1000 ಪೊಲೀಸ್‌ ಸಿಬ್ಬಂದಿ ನಿಯೋಜನೆ:

ಭಕ್ತರಿಗೆ ಪಾರ್ಕಿಂಗ್ ಸಮಸ್ಯೆ ಬಗೆ ಹರಿಸಲು ಕ್ರಮ ವಹಿಸಲಾಗಿದ್ದು, ಕಾರು ಸೇರಿದಂತೆ ಇತರೆ ವಾಹನಗಳಿಗೆ 14 ಪಾರ್ಕಿಂಗ್ ಸ್ಥಳ, ದ್ವಿಚಕ್ರ ವಾಹನಗಳಿಗೆ 4 ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿತ್ತು. ಭದ್ರತೆಗಾಗಿ ಈ ವರ್ಷ 1000 ಮಂದಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ, ಅಗ್ನಿಶಾಮಕ ವಾಹನ ವ್ಯವಸ್ಥೆ ಮಾಡಲಾಗಿದೆ. ಜತೆಗೆ 100 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಅದರ ವೀಕ್ಷಣೆಗೆ ಕಂಟ್ರೋಲ್ ರೂಂ ಕೂಡ ಸ್ಥಾಪಿಸಲಾಗಿತ್ತು.

2 ದಿನ ಸಾಂಸ್ಕೃತಿಕ ಕಾರ್ಯಕ್ರಮ:

ಬ್ರಹ್ಮರಥೋತ್ಸವದ ಹಿನ್ನಲೆ ಘಾಟಿಯ ರಂಗಮಂದಿರದಲ್ಲಿ ಬುಧವಾರ ಮತ್ತು ಗುರುವಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿವಿಧ ಇಲಾಖೆಗಳಿಂದ ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿತ್ತು.

25ಕೆಡಿಬಿಪಿ1- ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ಸುಪ್ರಸಿದ್ದ ಬ್ರಹ್ಮರಥೋತ್ಸವ ಗುರುವಾರ ಸಂಭ್ರಮದಿಂದ ನಡೆಯಿತು. ಸಾವಿರಾರು ಭಕ್ತಾರಿಗಳು ಪಾಲ್ಗೊಂಡರು.

--

25ಕೆಡಿಬಿಪಿ2-

ಬ್ರಹ್ಮರಥೋತ್ಸವ ಅಂಗವಾಗಿ ಘಾಟಿ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷಾಲಂಕಾರ ಮಾಡಲಾಗಿತ್ತು.

--

25ಕೆಡಿಬಿಪಿ3-

ಘಾಟಿ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವವಕ್ಕೆ ಸಚಿವರಾದ ರಾಮಲಿಂಗಾರೆಡ್ಡಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ಧೀರಜ್‌ ಇದ್ದಾರೆ.

--

25ಕೆಡಿಬಿಪಿ4-

ಬ್ರಹ್ಮರಥೋತ್ಸವ ಅಂಗವಾಗಿ ಘಾಟಿ ದೇವಾಲಯ ಆವರಣದಲ್ಲಿ ವಿಶೇಷ ಹೂವಿನ ಅಲಂಕಾರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿ ಹಣ ಹೊಂದಿಸಲು ಕಾಂಗ್ರೆಸ್ ಸರ್ಕಾರ ಸುಲಿಗೆ
ಭಾರತ ಅಭಿವೃದ್ಧಿ ರಥಕ್ಕೆ ರಾಜಮಾರ್ಗ ನಿರ್ಮಿಸಿದ ವಾಜಪೇಯಿ