ವೈಭವದ ಶಿವಮೊಗ್ಗ ದಸರಾಗೆ ಸಂಭ್ರಮದ ತೆರೆ

KannadaprabhaNewsNetwork |  
Published : Oct 03, 2025, 01:07 AM IST

ಸಾರಾಂಶ

ಮೈಸೂರು ದಸರಾ ಮಾದರಿಯಲ್ಲೇ ಕಳೆದ 11 ದಿನ ಸಂಭ್ರಮದ ಹೊನಲು ಹರಿಸಿದ ನಾಡಹಬ್ಬ, ಶಿವಮೊಗ್ಗ ದಸರಾ ಚಾಮುಂಡೇಶ್ವರಿ ದೇವಿಯ ಅಂಬಾರಿ ಮೆರವಣಿಗೆಯೊಂದಿಗೆ ಗುರುವಾರ ಸಂಪನ್ನಗೊಂಡಿತು

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮೈಸೂರು ದಸರಾ ಮಾದರಿಯಲ್ಲೇ ಕಳೆದ 11 ದಿನ ಸಂಭ್ರಮದ ಹೊನಲು ಹರಿಸಿದ ನಾಡಹಬ್ಬ, ಶಿವಮೊಗ್ಗ ದಸರಾ ಚಾಮುಂಡೇಶ್ವರಿ ದೇವಿಯ ಅಂಬಾರಿ ಮೆರವಣಿಗೆಯೊಂದಿಗೆ ಗುರುವಾರ ಸಂಪನ್ನಗೊಂಡಿತು.

ನಾಡದೇವಿ ಚಾಮುಂಡೇಶ್ವರಿಯ ಅಂಬಾರಿ ಹೊತ್ತ ಜಂಬೂ ಸವಾರಿ ಶಿವಮೊಗ್ಗದ ಕೋಟೆ ದೇವಾಲಯದಿಂದ ಫ್ರೀಡಂ ಪಾರ್ಕ್​ವರೆಗೆ ಯಶಸ್ವಿಯಾಗಿ ಸಾಗಿತು.

ಮೈಸೂರು ದಸರಾದಂತೆಯೇ ವಿಜೃಂಭಣೆಯಿಂದ ಆಚರಿಸಲ್ಪಡುವ ಶಿವಮೊಗ್ಗ ದಸರಾದಲ್ಲಿ ಚಾಮುಂಡೇಶ್ವರಿಯನ್ನು ಹೊತ್ತು ಪ್ರಮುಖ ಮಾರ್ಗದಲ್ಲಿ ಸಾಗುವ ಅಂಬಾರಿ ಮೆರವಣಿಗೆಯನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಉತ್ಸುಕರಾಗಿದ್ದರು. ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಸಂಪ್ರದಾಯ ಬಿಂಬಿಸುವ ಮೆರವಣಿಗೆಯಲ್ಲಿ ಸಾವಿರಾರು ಜನರು ಹೆಜ್ಜೆ ಹಾಕಿದರು.

ಕಳೆದೊಂದು ವಾರದಿಂದ ನಗರದಲ್ಲಿ ತಾಲೀಮು ಪಡೆದಿದ್ದ ಸಕ್ರೆಬೈಲು ಆನೆ ಬಿಡಾರದ ಗಜ ಪಡೆ ಮೆರವಣಿಗೆಯ ಮೆರುಗು ಹೆಚ್ಚಿಸಿದವು.

ನಂದಿಕೋಲಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ :

ಜಿಟಿ ಜಿಟಿ ಮಳೆಯ ನಡುವೆ ರಾಜ್ಯದ ಎರಡನೇ ದಸರಾ ಖ್ಯಾತಿಯ ಶಿವಮೊಗ್ಗ ದಸರಾ ಜಂಬೂ ಸವಾರಿ, ವಿಜಯದಶಮಿ ದಿನ ಗುರುವಾರ ಅದ್ಧೂರಿ ಚಾಲನೆ ದೊರೆಯಿತು.

ಇಲ್ಲಿನ ಕೋಟೆ ರಸ್ತೆಯ ಶಿವಪ್ಪ ನಾಯಕ ಅರಮನೆ ಮುಂಭಾಗ ನಂದಿ ಪೂಜೆಯ ನಂತರ ಮೆರವಣಿಗೆ ಆರಂಭವಾಯಿತು.

ಕೋಟೆ ಆಂಜನೇಯ ದೇವಸ್ಥಾನದ ಎದುರಿನ ಕಮಾನು ಪಕ್ಕದ ಅಟ್ಟಣಿಗೆಯ ಮೇಲೆ ನಿಂತು ಅಂಬಾರಿ ಮೇಲಿದ್ದ ಚಾಮುಂಡೇಶ್ವರಿ ದೇವಿಗೆ ಹೂವು ಅರ್ಪಿಸಿದ ಸಚಿವ ಮಧು ಬಂಗಾರಪ್ಪ ಜಿಲ್ಲೆಯ ಜನರ ಪರವಾಗಿ ದೇವರಿಗೆ ಗೌರವ ಸಮರ್ಪಿಸಿದರು.

ಈ ವೇಳೆ ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಸಿಇಒ ಎನ್.ಹೇಮಂತ್, ಮಹಾ ನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಚಾಮುಂಡೇಶ್ವರಿಗೆ ಹೂ ಸಮರ್ಪಿಸಿದರು.

ಮಧ್ಯಾಹ್ನ 2.30ಕ್ಕೆ ಜಂಬೂ ಸವಾರಿ ಹೊರಡಬೇಕಿತ್ತು. ಆದರೆ, ಮಳೆಯ ಕಾರಣ ತಡವಾಯಿತು. 3 ಗಂಟೆಗೆ ಆರಂಭವಾಯಿತು. 450 ಕೆ.ಜಿ ತೂಕದ ಬೆಳ್ಳಿಯ ಮಂಟಪ ಹಾಗೂ ಚಾಮುಂಡೇಶ್ವರಿಯ ಪುತ್ಥಳಿಯನ್ನು ಬೃಹತ್ ಕ್ರೇನ್ ಬಳಸಿ ಆನೆ ಸಾಗರನ ಬೆನ್ನಿನ ಮೇಲೆ ಪ್ರತಿಷ್ಠಾಪಿಸಲಾಯಿತು.

ಸಾಗರನ ಜೊತೆ ಆನೆಗಳಾದ ಬಹದ್ದೂರ್ ಹಾಗೂ ಬಾಲಣ್ಣ ಹೆಜ್ಜೆ ಹಾಕಿದವು. ಸ್ವತಃ ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ ನೇತೃತ್ವದಲ್ಲಿ ಆನೆಗಳನ್ನು ಮೆರವಣಿಗೆಗೆ ಸಿದ್ದಗೊಳಿಸಲಾಯಿತು.

200ಕ್ಕೂ ಉತ್ಸವ ಮೂರ್ತಿಗಳು:

ಮೆರವಣಿಗೆಯಲ್ಲಿ 200ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ಶಿವಮೊಗ್ಗದ ವಿವಿಧ ದೇವಸ್ಥಾನಗಳಿಂದ ಉತ್ಸವ ಮೂರ್ತಿಗಳು ಭಾಗಿಯಾದವು. ಮೆರವಣಿಗೆ ಕೋಟೆ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮದ್ ವೃತ್ತ, ನೆಹರೂ ರಸ್ತೆ, ಸೀನಪ್ಪ ಶೆಟ್ಟಿ ಸರ್ಕಲ್, ದುರ್ಗಿಗುಡಿ, ಜೈಲು ಸರ್ಕಲ್ ಮಾರ್ಗವಾಗಿ ಅಲ್ಲಮಪ್ರಭು ಬಯಲನ್ನು (ಫ್ರೀಡಂ ಪಾರ್ಕ್) ತಲುಪಿತು.

ಅಂಬು ಛೇದನ: ಹತ್ತು ದಿನಗಳ ಕಾಲ ನಡೆದ ‘ಶಿವಮೊಗ್ಗ ದಸರಾ’ಗೆ ಅಲ್ಲಮಪ್ರಭು ಮೈದಾನದಲ್ಲಿ ತಹಸೀಲ್ದಾರ್ ರಾಜೀವ್ ಅಂಬು ಕಡಿಯುವ ಮೂಲಕ ಸಮಾರೋಪಗೊಳಿಸಿದರು.

ಪರಸ್ಪರ ಬನ್ನಿ ಹಂಚಿಕೊಳ್ಳುವ ಮೂಲಕ ಜನರು ಶುಭಾಶಯ ವಿನಿಮಯ ಮಾಡಿಕೊಂಡರು. ರಾವಣ ದಹನ, ಮದ್ದುಗಳು ಹಾಗೂ ಬಾಣ ಬಿರುಸುಗಳ ಚಿತ್ತಾರ ನೆರೆದಿದ್ದ ಜನರನ್ನು ಮಂತ್ರಮುಗ್ಧರನ್ನಾಗಿಸಿತು.

ಸಂಸತ್‌ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಸಿಇಒ ಎನ್.ಹೇಮಂತ್, ಮಹಾ ನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಹಾಗೂ ಮಾಜಿ ಸದಸ್ಯರು ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

----------------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ