ಮುಖ್ಯಮಂತ್ರಿ ಗ್ರಾಮೀಣ ನಿವೇಶನ ಯೋಜನೆಯಡಿ ನಿವೇಶನ ರಹಿತ ಅರ್ಹ 74 ಫಲಾನುಭವಿಗಳಿಗೆ ಕಾನೂನು ಬದ್ಧವಾಗಿ ನಿವೇಶನ ಹಕ್ಕುಪತ್ರ ನೀಡಲಾಗಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ಹೊಸಪೇಟೆ: ಮುಖ್ಯಮಂತ್ರಿ ಗ್ರಾಮೀಣ ನಿವೇಶನ ಯೋಜನೆಯಡಿ ನಿವೇಶನ ರಹಿತ ಅರ್ಹ 74 ಫಲಾನುಭವಿಗಳಿಗೆ ಕಾನೂನು ಬದ್ಧವಾಗಿ ನಿವೇಶನ ಹಕ್ಕುಪತ್ರ ನೀಡಲಾಗಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ತಾಲೂಕಿನ ಪಾಪಿನಾಯಕನಹಳ್ಳಿಯ ಚಿಂದುಲ ನಾಗಮ್ಮ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಪಾಪಿನಾಯಕನಹಳ್ಳಿ ಗ್ರಾಪಂ ವತಿಯಿಂದ ಮಂಗಳವಾರ ನಡೆದ ಮುಖ್ಯಮಂತ್ರಿ ಗ್ರಾಮೀಣ ನಿವೇಶನ ಯೋಜನೆಯಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.ಸುಪ್ರೀಂಕೋರ್ಟ್ ಆದೇಶದಂತೆ ನಿವೇಶನ ರಹಿತರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ದೃಷ್ಟಿಯಿಂದ, ನಿವೇಶನ ನೀಡುವುದಲ್ಲದೇ ಅದರ ಜತೆಗೆ ಮನೆ ನಿರ್ಮಿಸಿಕೊಡುವ ವ್ಯವಸ್ಥೆಯೂ ಮಾಡಲಾಗಿದೆ. ಹೊರ ರಾಜ್ಯಗಳಿಂದ ಬಂದವರಿಗೆ ಅಷ್ಟೇ ಅಲ್ಲದೇ ಸ್ಥಳೀಯರಿಗೂ ಅವಕಾಶ ನೀಡಲು ಪ್ರಸ್ತಾವನೆ ಸಲ್ಲಿಸಲಾಗುವುದು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಉತ್ತಮ ಸಂಸ್ಕಾರ ನೀಡುವ ಮೂಲಕ ಸಮಾಜದಲ್ಲಿ ಗೌರವಯುತ ವ್ಯಕ್ತಿಯನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.
ಪಾಪಿನಾಯಕನಹಳ್ಳಿ ಗ್ರಾಮಸಭೆಯಲ್ಲಿ 97 ಫಲಾನುಭವಿಗಳು ಆಯ್ಕೆಯಾಗಿದ್ದು, ಈ ಪೈಕಿ 74 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಇನ್ನುಳಿದ 23 ನಿವೇಶನಗಳಲ್ಲಿ 3 ನಿವೇಶನಗಳು ರೇಷನ್ ಕಾರ್ಡ್ ಇಲ್ಲದೆ, 6 ನಿವೇಶನಗಳು ಸಮರ್ಪಕ ದಾಖಲಾತಿ ಕೊರತೆ ಕಾರಣದಿಂದ ದಾಖಲಾತಿ ಬಾಕಿ ಮತ್ತು 3 ನಿವೇಶನಗಳಿಗೆ ವಿವಿಧ ಕಾರಣಗಳಿಂದ ತಾಲೂಕು ಪಂಚಾಯಿತಿಯಲ್ಲಿ ಬಾಕಿ ಇವೆ. ಅವೆಲ್ಲವುಗಳಿಗೂ ಮುಂದಿನ ದಿನಗಳಲ್ಲಿ ಹಕ್ಕುಪತ್ರ ನೀಡಲು ಕ್ರಮವಹಿಸಲಾಗುವುದು. ಇನ್ನುಳಿದ 11 ಅರ್ಜಿ ತಿರಸ್ಕರಿಸಲಾಗಿದೆ ಎಂದು ಮಾಹಿತಿ ನೀಡಿದರು.ತಾಪಂ ಕಾರ್ಯನಿರ್ವಹಕಾಧಿಕಾರಿ ಆಲಂ ಭಾಷ, ಭೀರಪ್ಪ, ವಸತಿ ಇಲಾಖೆ ನೂಡಲ್ ಅಧಿಕಾರಿ ಮಹೇಶ್, ಗ್ರಾಪಂ ಆಡಳಿತಾಧಿಕಾರಿ ಸಿಂಧು ಅಂಗಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಪಾಪಿನಾಯಕಹಳ್ಳಿ ಗ್ರಾಮಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು.