ಐತಿಹಾಸಿಕ ರಾಮೋತ್ಸವಕ್ಕೆ ಸಂಭ್ರಮದ ತೆರೆ

KannadaprabhaNewsNetwork |  
Published : Jan 19, 2026, 01:45 AM IST
17 ಟಿವಿಕೆ 1 – ತುರುವೇಕೆರೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ:ತ್ರೇತಾಯುಗದಲ್ಲಿ ಶ್ರೀ ರಾಮ ಪಾದಸ್ಪರ್ಶ ಮಾಡಿದ ರಾಮನೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ರಾಮೋತ್ಸವಕ್ಕೆ ಭಾನುವಾರ ಸ್ಯಾಂಡಲ್ ವುಡ್ ತಾರೆಯರ ಮೆರಗಿನೊಂದಿಗೆ ಸಂಭ್ರಮದ ತೆರೆ ಬಿದ್ದಿತು

ರಾಮನಗರ:ತ್ರೇತಾಯುಗದಲ್ಲಿ ಶ್ರೀ ರಾಮ ಪಾದಸ್ಪರ್ಶ ಮಾಡಿದ ರಾಮನೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ರಾಮೋತ್ಸವಕ್ಕೆ ಭಾನುವಾರ ಸ್ಯಾಂಡಲ್ ವುಡ್ ತಾರೆಯರ ಮೆರಗಿನೊಂದಿಗೆ ಸಂಭ್ರಮದ ತೆರೆ ಬಿದ್ದಿತು.

ಸಪ್ತಗಿರಿಗಳ ನಾಡು ಮತ್ತು ರೇಷ್ಮೆ ನಗರಿ ಎಂದೇ ಕರೆಯಲ್ಪಡುವ ರಾಮನಗರದಲ್ಲಿ ಇದೇ ಮೊದಲ ಬಾರಿ ಅದ್ಧೂರಿಯಾಗಿ ನಡೆದ ರಾಮೋತ್ಸವದಲ್ಲಿ ಗ್ರಾಮ ದೇವತೆಗಳ ಮೆರವಣಿಗೆ ಹಾಗೂ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದಂತಹ ಧಾರ್ಮಿಕ ಕಾರ್ಯಗಳು ಮಾತ್ರವಲ್ಲದೆ ಸಾಂಸ್ಕೃತಿಕ-ಕ್ರೀಡಾ ಚಟುವಟಿಕೆಗಳಿಗೂ ವೇದಿಕೆಯಾಯಿತು.

ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಜಾತಿ ಧರ್ಮ, ವರ್ಗದ ಚಿಕ್ಕ ಮಕ್ಕಳ ಆದಿಯಾಗಿ ವಯೋವೃದ್ಧರು ರಾಮೋತ್ಸವದ ಪ್ರಯುಕ್ತ ನಡೆದ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕ್ಷೇತ್ರದಲ್ಲಿರುವ ಸುಮಾರು 80 ಸಾವಿರ ಕುಟುಂಬಗಳ ಪೈಕಿ 70ಸಾವಿರಕ್ಕೂ ಹೆಚ್ಚಿನ ಕುಟುಂಬದವರು ಧಾರ್ಮಿಕ, ಸಾಂಸ್ಕೃತಿಕ - ಕ್ರೀಡಾ ಹಬ್ಬದಲ್ಲಿ ಭಾಗಿಯಾಗಿ ರಾಮೋತ್ಸವಕ್ಕೆ ಸಾಕ್ಷಿಯಾದರು.

ಗಮನ ಸೆಳೆದ ದೀಪಾಲಂಕಾರ:

ರಾಮೋತ್ಸವದ ಅಂಗವಾಗಿ ನಗರದೆಲ್ಲೆಡೆ ಮಾಡಲಾಗಿದ್ದ ವಿಶೇಷ ದೀಪಾಲಂಕಾರಗಳು ಸಾರ್ವಜನಿಕರ ಗಮನ ಸೆಳೆದವು. ಎಲ್ಲ ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ, ಬಡಾವಣೆಗಳಲ್ಲಿ ಮತ್ತು ಪ್ರಮುಖ ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ಹಳೆಯ ಬೆಂಗಳೂರು- ಮೈಸೂರು ಹೆದ್ದಾರಿ, ರೈಲ್ವೆ ನಿಲ್ದಾಣ ರಸ್ತೆ, ಎಂ.ಜಿ ರಸ್ತೆ ಸೇರಿದಂತೆ ಎಲ್ಲ ರಸ್ತೆ , ಬೀದಿಗಳು ವಿದ್ಯುತ್ ಅಲಂಕಾರದಿಂದ ಜಗಮಗಿಸುತ್ತಿತ್ತು.

ಜಿಲ್ಲಾ ಕ್ರೀಡಾಂಗಣದ ಬಳಿ ಶ್ರೀ ರಾಮ, ಲಕ್ಷ್ಮಣ, ಸೀತೆ , ಆಂಜನೇಯ ಪ್ರಮುಖ ವೃತ್ತಗಳಲ್ಲಿ ವೆಂಕಟೇಶ್ವರ ಸ್ವಾಮಿ, ಹನುಮಂತ, ಚಾಮುಂಡೇಶ್ವರಿ, ಗಣಪತಿ ಸೇರಿದಂತೆ ವಿವಿಧ ದೇವತೆಗಳ ಆಕೃತಿಗಳಲ್ಲಿ ವಿದ್ಯುತ್ ದೀಪಾಲಂಕಾರಗಳು ವಿಶೇಷವಾಗಿ ಕಂಗೊಳಿಸುತ್ತಿದ್ದವು.

ನಾಲ್ಕು ದಿನಗಳ ಅದ್ಧೂರಿ ರಾಮೋತ್ಸವ ಜನರ ಮೆಚ್ಚುಗೆ ಗಳಿಸಿತಲ್ಲದೆ, ಮನೆ ಮತ್ತು ಮನದ ಮಾತಾಗಿ ಇತಿಹಾಸದ ಪುಟದಲ್ಲಿ ದಾಖಲಾಯಿತು.

ಬಾಕ್ಸ್ ....

ಜನರ ಮನ ರಂಜಿಸಿದ ರಸಸಂಜೆ ಕಾರ್ಯಕ್ರಮ

ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಮೋತ್ಸವದ ಬೃಹತ್ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ರಸಸಂಜೆ ಕಾರ್ಯಕ್ರಮ ಜನರ ಮನ ರಂಜಿಸಿತು. ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಡಿಂಪಲ್ ಕ್ವೀನ್ ರಚಿನಾ ರಾಮ್ ಹಾಗೂ ರಾಗಿಣಿ ದ್ವಿವೇದಿ ಅವರು ಸಾಂಸ್ಕೃತಿಕ ರಸಸಂಜೆ ಕಾರ್ಯಕ್ರಮಗಲ್ಲಿ ಭಾಗಿಯಾಗಿ ರಾಮೋತ್ಸವಕ್ಕೆ ಮೆರಗು ತುಂಬಿದರು.

ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನೇತೃತ್ವದಲ್ಲಿ ಸಂಗೀತ ರಸಸಂಜೆ ಜತೆಗೆ ಹೆಸರಾಂತ ಗಾಯಕ-ಗಾಯಕಿಯರು ಗಾನ ಸುಧೆ ಹರಿಸಿದರು. ಗಾಯನ, ನೃತ್ಯ ಕಾರ್ಯಕ್ರಮಗಳು ತಡ ರಾತ್ರಿವರೆಗೂ ಜರುಗಿದವು.

ಹಿನ್ನೆಲೆ ಗಾಯಕರಾದ ಗಾಯತ್ರಿ ಐಶ್ವರ್ಯ ರಂಗರಾಜನ್ , ಪೃಥ್ವಿಭಟ್ , ನಿಶಾನ್ ರೈ, ಲಹರಿ ಮಹೇಶ್ , ಸುನೀಲ್ ಗುಜಗೊಂಡ ಮತ್ತಿತರರ ಗಾಯನದ ಮೋಡಿಗೆ ಜನರು ಒಳಗಾದರು. ಸಿನಿಮಾ ಗೀತೆಗಳ ಗಾಯನ, ನೃತ್ಯಗಳನ್ನು ಜನರು ಆಸ್ವಾದಿಸಿದರು. ಕಲಾವಿದರ ನೃತ್ಯ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ನಿರೂಪಕಿ ಅನುಶ್ರೀ ನಿರೂಪಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭಿವೃದ್ಧಿ ಕಾಮಗಾರಿಗೆ ಸಿಎಂ ಚಾಲನೆ
ನರೇಗಾದಲ್ಲಿ ಏನು ಬದಲಾಗಿದೆಂದು ತಿಳಿದು ಹೋರಾಟ ಮಾಡಿ