ಶಿಗ್ಗಾಂವಿ: ಕರ್ನಾಟಕದ ಕಬೀರ, ಭಾವೈಕ್ಯದ ಹರಿಕಾರ ಎಂದೇ ಖ್ಯಾತಿ ಪಡೆದ ತಾಲೂಕಿನ ಶಿಶುವಿನಹಾಳ ಗ್ರಾಮದ ಶರೀಫ ಶಿವಯೋಗಿಗಳ ಹಾಗೂ ಗುರು ಗೋವಿಂದ ಭಟ್ಟರ ತೆಪ್ಪೋತ್ಸವ ಇತ್ತೀಚೆಗೆ ಶರೀಫಗಿರಿಯಲ್ಲಿ ಭಕ್ತ ಸಮೂಹದ ಜಯಘೋಷಗಳ ಮಧ್ಯೆ ಸಂಭ್ರಮದಿಂದ ಜರುಗಿತು.ಶ್ರಾವಣ ಮಾಸದ ಕಡೆಯ ಸೋಮವಾರ ಸಂಜೆ ನಡೆದ ತೆಪ್ಪೋತ್ಸವಕ್ಕೆ ಭಜನೆ, ಝಾಂಜ್ ಮೇಳ ಸೇರಿದಂತೆ ನಾನಾ ವಾದ್ಯದವರು ಮೆರುಗು ನೀಡಿದರು.ತೆಪ್ಪೋತ್ಸವದ ಪೂರ್ವದಲ್ಲಿ ಗ್ರಾಮದ ಪ್ರಮುಖ ಬೀದಿಯಲ್ಲಿ ಶರೀಫರ ಹಾಗೂ ಗುರುಗೋವಿಂದ ಭಟ್ಟರ ಮೆರವಣಿಗೆ ಹಾಗೂ ಪಲ್ಲಕ್ಕಿ ಮಹೋತ್ಸವ ಜರುಗಿತು.ಶರೀಫರ ತೆಪ್ಪದ ರಥೋತ್ಸವಕ್ಕೆ ಧಾರವಾಡ, ಹುಬ್ಬಳ್ಳಿ, ಬಳ್ಳಾರಿ, ದಾವಣಗೆರೆ, ಗದಗ, ಹಾವೇರಿ, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದಲ್ಲದೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಹಲವೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಹಿಂದು- ಮುಸ್ಲಿಂ ಭಕ್ತ ಸಮೂಹ ಹಣ್ಣು, ಕಾಯಿ ಹಾಗೂ ಹೂಮಾಲೆಯಿಂದ ಶರೀಫರ ಗದ್ಗುಗೆ ಹಾಗೂ ತೆಪ್ಪೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿದರು.ಶರೀಫ ಶಿವಯೋಗಿಗಳ ಮತ್ತು ಗುರುಗೋವಿಂದ ಶಿವಯೋಗಿ ಪಂಚಾಗ್ನಿಮಠ ಟ್ರಸ್ಟ್ ಸಹಯೋಗದಲ್ಲಿ ಶರಣ ವೀರಭದ್ರಪ್ಪ ಶಿವರುದ್ರಣ್ಣನವರ ದಾಸೋಹ ನಿಧಿಯಿಂದ ಭಕ್ತ ಸಮೂಹಕ್ಕೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಪಂಚಾಗ್ನಿಮಠದ ಟ್ರಸ್ಟ್‌ನ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ರಾಜಕೀಯ ಮುಖಂಡರು, ಸಾಹಿತಿಗಳು, ಜಾನಪದ ಕಲಾವಿದರು ಹಾಗೂ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ದುರ್ಗಾದೇವಿಗೆ ಉಡಿ ತುಂಬುವ ಕಾರ್ಯಕ್ರಮಹಿರೇಕೆರೂರು: ಪಟ್ಟಣದ ದುರ್ಗಾದೇವಿಯ ತವರುಮನೆಯಾದ ತಾಲೂಕಿನ ಬಾಳಂಬೀಡ ಗ್ರಾಮದ ಭಕ್ತರಿಂದ ಶ್ರಾವಣ ಮಾಸದ ಕೊನೆಯ ಮಂಗಳವಾರದ ಹಿನ್ನೆಲೆ ಗ್ರಾಮದಿಂದ ದೇವಿಯ ಭಾವಚಿತ್ರದೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು.
ಗ್ರಾಮದಲ್ಲಿನ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ದೇವಿಯ ಭಾವಚಿತ್ರ ಮೆರವಣಿಗೆ ವಿವಿಧ ರಸ್ತೆಗಳಲ್ಲಿ ವಿವಿಧ ವಾದ್ಯಗಳೊಂದಿಗೆ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಭಕ್ತರು ಇದ್ದರು.