ಹೊಳೆ ಗಂಗಮ್ಮನ ಹಬ್ಬ ಮಾಡಿ ಸಂಭ್ರಮಿಸಿದ ಮಹಿಳೆಯರು
ಸಮೀಪದ ಗಜಾಪುರ ಗ್ರಾಮದಲ್ಲಿ ಗಂಗಾಮತಸ್ಥರು ಕಾರಹುಣ್ಣಿಮೆ ಪ್ರಯುಕ್ತ ಹೊಳೆ ಗಂಗಮ್ಮನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಗ್ರಾಮದ ಶ್ರೀ ಗಂಗಾಮಾತೆ ದೇವಸ್ಥಾನದಿಂದ ಮಹಿಳೆಯರು ಆರತಿ ಹಿಡಿದು ಕುಂಭ ಹೊತ್ತು ಕೂಡ್ಲಿಗಿ ರಸ್ತೆಯ ಗಂಗಮಾತೆಯ ಪಾದಗಟ್ಟೆ ಇರುವ ಕಲ್ಲುಬಾವಿ ವರೆಗೂ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಹೋಗಿ ಗಂಗಾಮಾತೆಗೆ ವಿಶೇಷ ಪೂಜೆ ಮಾಡಿ, ಗಂಗಮ್ಮನ ಉತ್ಸವ ಆಚರಿಸಿದರು.ಪ್ರತಿವರ್ಷದಂತೆ ಈ ವರ್ಷವೂ ಗಜಾಪುರ ಸುತ್ತಮುತ್ತಲ ಭಾಗದಲ್ಲಿ ಹಾಗೂ ನಾಡಿನೆಲ್ಲೆಡೆ ಮಳೆ-ಬೆಳೆ ಚೆನ್ನಾಗಿ ಆಗಲಿ, ರೈತರ ಬದುಕು ಹಸನಾಗಲಿ ಎಂದು ಮಹಿಳೆಯರು, ಮಕ್ಕಳು, ಗ್ರಾಮಸ್ಥರು ಶ್ರೀ ಗಂಗಾಮಾತೆಯ ಉತ್ಸವ ಆಚರಿಸುತ್ತಾರೆ. ಗಂಗಾಮಾತೆಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು. ಗಂಗಾಮಾತೆಗೆ ಮಹಿಳೆಯರು ಆರತಿ ಬೆಳಗಿದರು. ಇದಲ್ಲದೇ ಹೊಳೆಗಂಗಮ್ಮನ ಪೂಜೆ ನೆರವೇರಿಸಿದರು. ಗಂಗಮ್ಮ ಹೊಳೆಗೆ ಹೋಗಿ ಬಂದ ತಕ್ಷಣ ಗ್ರಾಮದ ಎಲ್ಲ ಸಮಾಜದ ಮಹಿಳೆಯರು ಶ್ರೀ ಗಂಗಾಮಾತೆ ದೇವಸ್ಥಾನಕ್ಕೆ ತೆರಳಿ, ಗಂಗಾಮಾತೆಗೆ ಎಡೆ ಹಿಡಿದು ಪೂಜೆ ಸಲ್ಲಿಸಿದರು.