ಸಂಭ್ರಮದ ಶಾಲಾ ಪ್ರಾರಂಭೋತ್ಸವ, ತಳಿರು ತೋರಣದಿಂದ ಸಿಂಗಾರಗೊಂಡ ಶಾಲೆಗಳು

KannadaprabhaNewsNetwork |  
Published : May 30, 2025, 11:49 PM IST
30ಎಚ್‌ವಿಆರ್1 | Kannada Prabha

ಸಾರಾಂಶ

ಎರಡು ದಿನಗಳಿಂದ ಶಾಲೆಗಳಲ್ಲಿ ಶೌಚಾಲಯ, ಆಟದ ಮೈದಾನ, ಕೊಠಡಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಶಾಲಾರಂಭದ ಮೊದಲ ದಿನ ಶುಕ್ರವಾರ ಬೆಳಗ್ಗೆ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳ ಆವರಣದಲ್ಲಿ ರಂಗೋಲಿಗಳು ಕಂಗೊಳಿಸಿದವು.

ಹಾವೇರಿ: ಶಾಲಾ ಪ್ರಾರಂಭೋತ್ಸವದ ನಿಮಿತ್ತ ಶುಕ್ರವಾರ ಜಿಲ್ಲೆಯ ಶಾಲೆಗಳಲ್ಲಿ ಹಬ್ಬದ ವಾತಾವರಣ ಕಂಡುಬಂದಿತು. ತಳಿರು- ತೋರಣಗಳಿಂದ ಸಿಂಗರಿಸಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ, ಹೋಳಿಗೆ ಮಾವಿನ ಹಣ್ಣಿನ ಸೀಕರಣೆ, ಸಿಹಿ ವಿತರಿಸುವ ಮೂಲಕ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು.

ಎರಡು ದಿನಗಳಿಂದ ಶಾಲೆಗಳಲ್ಲಿ ಶೌಚಾಲಯ, ಆಟದ ಮೈದಾನ, ಕೊಠಡಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಶಾಲಾರಂಭದ ಮೊದಲ ದಿನ ಶುಕ್ರವಾರ ಬೆಳಗ್ಗೆ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳ ಆವರಣದಲ್ಲಿ ರಂಗೋಲಿಗಳು ಕಂಗೊಳಿಸಿದವು. ಪ್ರವೇಶದ್ವಾರ ಹಾಗೂ ಕೊಠಡಿಗಳಲ್ಲಿ ರಂಗುರಂಗಿನ ಬಲೂನ್‌ಗಳು, ಬಾಳೆಕಂಬ, ತೆಂಗಿನ ಗರಿ ಹಾಗೂ ಮಾವಿನ ತಳಿರು- ತೋರಣಗಳನ್ನು ಕಟ್ಟಿ ಶೃಂಗರಿಸಲಾಗಿತ್ತು. ಹೂವು ನೀಡಿ ಸ್ವಾಗತ: ಶಾಲಾ ಪ್ರಾರಂಭೋತ್ಸವದ ಮೊದಲ ದಿನ ತರಗತಿಗಳಿಗೆ ಹಾಜರಾಗಲು ಬಂದಿದ್ದ 1ರಿಂದ 10ನೇ ತರಗತಿ ಮಕ್ಕಳಿಗೆ ಶಾಲಾ ಶಿಕ್ಷಕರು ಗುಲಾಬಿ ಹೂವು, ಚಾಕಲೇಟ್, ಸಿಹಿ, ಪೆನ್ನು, ಪುಸ್ತಕ, ಕಲಿಕಾ ಸಾಮಗ್ರಿಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಪಠ್ಯಪುಸ್ತಕ ವಿತರಣೆ: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಈಗಾಗಲೇ ಜಿಲ್ಲೆಯ ಎಲ್ಲ ಶಾಲೆಗಳಿಗೂ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಪೂರೈಕೆ ಮಾಡಿದ್ದ ಹಿನ್ನೆಲೆಯಲ್ಲಿ ಕೆಲ ಶಾಲೆಗಳಲ್ಲಿ ಶಾಲಾ ಪ್ರಾರಂಭದ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಇನ್ನೂ ಹಲವೆಡೆ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಹಂತ- ಹಂತವಾಗಿ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲು ಸಿದ್ಧತೆಯನ್ನು ಕೈಗೊಂಡಿದ್ದಾರೆ. ಶಾಲೆಗಳಿಗೆ ಅಧಿಕಾರಿಗಳ ಭೇಟಿ: ಜಿಲ್ಲಾದ್ಯಂತ ಶುಕ್ರವಾರ ಆರಂಭಗೊಂಡ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಶಿಕ್ಷಣ ಇಲಾಖೆ ವಿವಿಧ ಅಧಿಕಾರಿಗಳ ತಂಡ ಭೇಟಿ ನೀಡಿ ಮಕ್ಕಳಿಗೆ ಶುಭ ಹಾರೈಸಿದರು. ಇನ್ನು ಮಿಂಚಿನ ಸಂಚಾರ ಕಾರ್ಯಕ್ರಮದಡಿ ಡಿಡಿಪಿಐ ಸುರೇಶ ಹುಗ್ಗಿ ಹಾಗೂ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅಕ್ಷರ ದಾಸೋಹದ ವಿಸ್ತರಣಾಧಿಕಾರಿಗಳು ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಪ್ರಾರಂಭ, ಸ್ವಚ್ಛತೆ ಕುರಿತಾಗಿ ಪರೀಶಿಲನೆ ನಡೆಸಿದರು.ಹೋಳಿಗೆ ಸೀಕರಣೆ ವಿತರಣೆಶಾಲಾ ಪ್ರಾರಂಭೋತ್ಸವದ ಮೊದಲ ದಿನವಾದ ಶುಕ್ರವಾರ ಶಿಕ್ಷಣ ಇಲಾಖೆ ನಿರ್ದೇಶನದಂತೆ ಜಿಲ್ಲೆಯ ಎಲ್ಲ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಜತೆಗೆ ಸಿಹಿಯೂಟವನ್ನು ಬಡಿಸಲಾಯಿತು. ಪ್ರಮುಖವಾಗಿ ಹೋಳಿಗೆ ಸೀಕರಣಿ, ಗೋದಿ ಹುಗ್ಗಿ, ಶ್ಯಾವಿಗೆ ಪಾಯಸ, ಕಡುಬು, ಸಿರಾ, ಅನ್ನ, ಸಾಂಬಾರ, ಚಿತ್ರಾನ್ನ, ಪಲಾವ್ ಸೇರಿದಂತೆ ಮತ್ತಿತರ ವಿಶೇಷ ಅಡುಗೆಯನ್ನು ತಯಾರಿಸಿ ಶಾಲಾ ಮಕ್ಕಳಿಗೆ ಬಡಿಸಲಾಯಿತು. ಇನ್ನು ಬೆಳಗಿನ ಅವಧಿಯಲ್ಲಿ ಹಾಲು, ಬಿಸ್ಕತ್‌, ಬಾದಾಮಿ ಹಾಲು ವಿತರಿಸಲಾಯಿತು.

ಸಂಭ್ರಮ: ಶಾಲಾ ಪ್ರಾರಂಭೋತ್ಸವ ಹಿನ್ನೆಲೆ ಜಿಲ್ಲಾದ್ಯಂತ ಶುಕ್ರವಾರ ಪ್ರಾರಂಭವಾದ ಶಾಲೆಗಳಿಗೆ ಮಕ್ಕಳು ಲವಲವಿಕೆಯಿಂದ ಆಗಮಿಸಿದರು. ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಮಕ್ಕಳಿಗೆ ಗುಲಾಬಿ ಹೂವು, ಸಿಹಿ ವಿತರಿಸುವ ಮೂಲಕ ಸಂಭ್ರಮದಿಂದ ಸ್ವಾಗತಿಸಿದ್ದಾರೆ. ವಿಶೇಷವಾಗಿ ಜಿಲ್ಲಾದ್ಯಂತ ಮಕ್ಕಳಿಗೆ ಮಧ್ಯಾಹ್ನ ಸಿಹಿ ಖಾದ್ಯಗಳನ್ನು ತಯಾರಿಸಿ ಉಣಬಡಿಸಲಾಯಿತು. ಶಾಲಾ ಪ್ರಾರಂಭೋತ್ಸವದ ಸಂದರ್ಭದಲ್ಲಿಯೇ ಮಕ್ಕಳಿಗೆ ಪುಸ್ತಕ, ಸಮವಸ್ತ್ರ ವಿತರಿಸಲಾಯಿತು ಎಂದು ಡಿಡಿಪಿಐ ಸುರೇಶ ಹುಗ್ಗಿ ತಿಳಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ