2 ತಿಂಗಳ ಕಂದಮ್ಮನ ಹೊಟ್ಟೆಯೊಳಗೆ ಭ್ರೂಣ!

KannadaprabhaNewsNetwork |  
Published : Oct 30, 2026, 02:15 AM IST
ಎರಡು ತಿಂಗಳ ಮಗುವಿನ ಹೊಟ್ಟೆಯೊಳಗಿದ್ದ ಬೆಳವಣಿಗೆ ಹೊಂದದ ಭ್ರೂಣವನ್ನು ಸಂಕೀರ್ಣ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆಯುವಲ್ಲಿ ಬಳ್ಳಾರಿಯ ಬಿಎಂಸಿಆರ್‌ಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ. | Kannada Prabha

ಸಾರಾಂಶ

ಸಾಮಾನ್ಯವಾಗಿ ಗರ್ಭಿಣಿಯರಿಗೆ ನಡೆಸುವ ತಪಾಸಣೆಯಲ್ಲಿ ಮಗುವಿನ ಬೆಳವಣಿಗೆ, ಅಂಗಾಂಗಗಳ ರಚನೆ ಹಾಗೂ ಆರೋಗ್ಯದ ಸ್ಥಿತಿಗತಿ ಪರಿಶೀಲಿಸಲಾಗುತ್ತದೆ

ಬಳ್ಳಾರಿ: ಇನ್ನೂ ಸರಿಯಾಗಿ ಕಣ್ಣುಬಿಟ್ಟು ಜಗತ್ತನ್ನು ನೋಡದ 2 ತಿಂಗಳ ಕಂದಮ್ಮನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣ!

ಕೇಳಲು ಅಚ್ಚರಿ ಎನಿಸಿದರೂ ವೈದ್ಯಕೀಯ ಲೋಕದ ಅತ್ಯಂತ ಅಪರೂಪದ ಪ್ರಕರಣವೊಂದು ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. 2 ತಿಂಗಳ ಗಂಡು ಮಗುವಿನ ಹೊಟ್ಟೆಯೊಳಗಿದ್ದ ಬೆಳವಣಿಗೆ ಹೊಂದದ ಭ್ರೂಣವನ್ನು ಸಂಕೀರ್ಣ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆಯುವಲ್ಲಿ ನಗರದ ಬಿಎಂಸಿಆರ್‌ಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ.

ವೈದ್ಯಕೀಯ ಪರಿಭಾಷೆಯಲ್ಲಿ "ಫೀಟಸ್ ಇನ್ ಫೀಟು " ಎಂದು ಕರೆಯಲಾಗುವ ಈ ಅಪರೂಪದ ಜನ್ಮಜಾತ ಸಮಸ್ಯೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡುವ ಮೂಲಕ ಬಿಎಂಸಿಆರ್‌ಸಿ ವೈದ್ಯರು ಗಮನಾರ್ಹ ಸಾಧನೆ ಮಾಡಿದ್ದಾರೆ. ಸುಮಾರು ಐದು ಲಕ್ಷ ಜನನಗಳಲ್ಲಿ ಒಂದರಲ್ಲಿ ಮಾತ್ರ ಕಂಡುಬರುವ ಈ ಸಮಸ್ಯೆ ಗರ್ಭಾವಸ್ಥೆಯಲ್ಲಿಯೇ ಗುರುತಿಸಿ ಮಗು ಜನಿಸಿದ ಬಳಿಕ ಸೂಕ್ತ ಸಮಯದಲ್ಲಿ ಶಸ್ತ್ರಚಿಕಿತ್ಸೆ ನಡೆಸಿರುವುದು ವಿಶೇಷ.

ಗರ್ಭದಲ್ಲಿದ್ದಾಗಲೇ ಪತ್ತೆ: ಸಾಮಾನ್ಯವಾಗಿ ಗರ್ಭಿಣಿಯರಿಗೆ ನಡೆಸುವ ತಪಾಸಣೆಯಲ್ಲಿ ಮಗುವಿನ ಬೆಳವಣಿಗೆ, ಅಂಗಾಂಗಗಳ ರಚನೆ ಹಾಗೂ ಆರೋಗ್ಯದ ಸ್ಥಿತಿಗತಿ ಪರಿಶೀಲಿಸಲಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ತಾಯಿಯ ಗರ್ಭದಲ್ಲಿದ್ದ ಮಗುವಿನ ಹೊಟ್ಟೆಯೊಳಗೇ ಮತ್ತೊಂದು ಬೆಳವಣಿಗೆ ಹೊಂದಿದ ಭ್ರೂಣ ಇರುವುದನ್ನು ವೈದ್ಯರು ಗುರುತಿಸಿದ್ದರು.

ಬಿಎಂಸಿಆರ್‌ಸಿಯ ವಿಕಿರಣಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸದಾಶಿವಗೌಡ ನೇತೃತ್ವದ ವೈದ್ಯರ ತಂಡವು ಗರ್ಭಾವಸ್ಥೆಯಲ್ಲಿಯೇ ಈ ಅಪರೂಪದ ಸಮಸ್ಯೆ ಪತ್ತೆ ಹಚ್ಚಿತ್ತು. ಬಳಿಕ ಗರ್ಭದಲ್ಲಿದ್ದ ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸಲಾಗಿತ್ತು. ಎರಡು ತಿಂಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಜನನದ ಬಳಿಕ ಮಗುವಿಗೆ ಅಗತ್ಯ ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯರು, ಹೊಟ್ಟೆಯೊಳಗಿದ್ದ ಭ್ರೂಣ ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆಯಲು ನಿರ್ಧರಿಸಿದರು.

ಎರಡು ತಿಂಗಳ ಹಸುಗೂಸಿಗೆ ಶಸ್ತ್ರಚಿಕಿತ್ಸೆ ನಡೆಸುವುದು ಸವಾಲಿನ ಕೆಲಸ. ಅದರಲ್ಲೂ ಹೊಟ್ಟೆಯೊಳಗಿದ್ದ ಭ್ರೂಣ ಹೊರತೆಗೆಯುವಾಗ ಮಗುವಿನ ಇತರ ಅಂಗಾಂಗಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕಿತ್ತು. ಹೀಗಾಗಿ ವೈದ್ಯರ ತಂಡವು ಪೂರ್ವ ಸಿದ್ಧತೆ ಮಾಡಿಕೊಂಡು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಏನಿದು ಹೊಟ್ಟೆಯೊಳಗೆ ಭ್ರೂಣ?: ವೈದ್ಯಕೀಯ ವಿಜ್ಞಾನದಲ್ಲಿ ಫೀಟಸ್ ಇನ್ ಫೀಟು ಅತ್ಯಂತ ಅಪರೂಪದ ಜನ್ಮಜಾತ ಸ್ಥಿತಿಯಾಗಿದೆ. ತಾಯಿಯ ಗರ್ಭದಲ್ಲಿ ಅವಳಿ ಭ್ರೂಣಗಳ ಬೆಳವಣಿಗೆಯ ಆರಂಭಿಕ ಹಂತದಲ್ಲಿ ಉಂಟಾಗುವ ಅಸಹಜ ಪ್ರಕ್ರಿಯೆಯಿಂದ ಒಂದು ಭ್ರೂಣವು ಮತ್ತೊಂದು ಭ್ರೂಣದ ದೇಹದೊಳಗೆ ಸೇರಿಕೊಳ್ಳುತ್ತದೆ. ಹೀಗೆ ಸೇರಿಕೊಂಡ ಭ್ರೂಣವು ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆ ಹೊಂದದೆ ಉಳಿಯುತ್ತದೆ. ಸಾಮಾನ್ಯವಾಗಿ ಹೊಟ್ಟೆಯ ಭಾಗದಲ್ಲಿ ಇಂತಹ ಸ್ಥಿತಿ ಕಂಡುಬರುತ್ತದೆ. ಕೆಲವು ಪ್ರಕರಣಗಳಲ್ಲಿ ಬೆಳವಣಿಗೆ ಹೊಂದದ ಭ್ರೂಣದೊಳಗೆ ಮೂಳೆಗಳು ಹಾಗೂ ಅಂಗಾಂಗಗಳ ಭಾಗಗಳು ರೂಪುಗೊಂಡಿರಬಹುದು.

ವೈದ್ಯರ ಪ್ರಯತ್ನಕ್ಕೆ ಯಶಸ್ಸು: ಬಿಎಂಸಿಆರ್‌ಸಿಯ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಗಡ್ಡಿ ದಿವಾಕರ್ ನೇತೃತ್ವದಲ್ಲಿ ಈ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸಾ ತಂಡದಲ್ಲಿ ಡಾ. ಸಂಜೀವ್ ಜೋಶಿ, ಡಾ.ರಾಮ್ ಮೋಹನ್ ಹಾಗೂ ಡಾ. ಅಶ್ವಿತಾ ಭಾಗವಹಿಸಿದ್ದರು. ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ. ಬಾಲಸುಬ್ರಹ್ಮಣ್ಯ, ಡಾ. ಪರಿಮಳಾ, ಡಾ. ನಿಜಾಮುದ್ದೀನ್, ಡಾ. ರಘುನಾಥ್ ಹಾಗೂ ಡಾ. ಮಧುಶ್ರೀ ಶಸ್ತ್ರಚಿಕಿತ್ಸೆಯ ಯಶಸ್ಸಿಗೆ ಸಹಕರಿಸಿದರು. ಶುಶ್ರೂಷಕರಾದ ಪುಷ್ಪಲತಾ ಹಾಗೂ ಸಲೀಂ ಪಾಷಾ ವೈದ್ಯಕೀಯ ತಂಡಕ್ಕೆ ಅಗತ್ಯ ನೆರವು ನೀಡಿದರು. ವಿವಿಧ ವಿಭಾಗಗಳ ವೈದ್ಯರು ಹಾಗೂ ಶುಶ್ರೂಷಾ ಸಿಬ್ಬಂದಿಯ ಸಮನ್ವಯದ ಕಾರ್ಯಾಚರಣೆಯಿಂದ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

18 ವರ್ಷಗಳ ಹಿಂದೆ ಇಂತಹದ್ದೇ ಪ್ರಕರಣ!: ಬಳ್ಳಾರಿಯಲ್ಲಿ ಈ ರೀತಿಯ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿರುವುದು ಇದೇ ಮೊದಲಲ್ಲ, ಎರಡನೇ ಪ್ರಕರಣ.

ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞ ಡಾ.ಗಡ್ಡಿ ದಿವಾಕರ್ ಕಳೆದ 22 ವರ್ಷಗಳಿಂದ ಮಕ್ಕಳಿಗೆ ಸಂಬಂಧಿಸಿದ ಸಂಕೀರ್ಣ ಹಾಗೂ ಸುಧಾರಿತ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ. 2008ರಲ್ಲಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿಯೂ ಇದೇ ರೀತಿಯ ಫೀಟಸ್ ಇನ್ ಫೀಟು ಪ್ರಕರಣ ಯಶಸ್ವಿಯಾಗಿ ನಿಭಾಯಿಸಿದ್ದರು. ಇದೀಗ 18 ವರ್ಷಗಳ ಬಳಿಕ ಅಂಥದೇ ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು