ಅಪಹರಣ ಪ್ರಕರಣದ ಬೆನ್ನುಬಿದ್ದ ಪೊಲೀಸರಿಗೆ ಯುವತಿಯ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಯುವತಿಯ ಮೇಲೆ ಅತ್ಯಾಚಾರ ಎಸಗಿದ ಟೆಕ್ಕಿ ಹಾಗೂ ಆತನಿಗೆ ಸಹಾಯ ಮಾಡಿದವನಿಗೆ ಬುದ್ಧಿ ಕಲಿಸಲು ಅವರಿಬ್ಬರನ್ನು ಅಪಹರಿಸಿದ್ದ ಯುವತಿ ಸೇರಿದಂತೆ 11 ಮಂದಿ ಆರೋಪಿಗಳನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭವಾರ್ತೆ ಬೆಂಗಳೂರು
ಅಪಹರಣ ಪ್ರಕರಣದ ಬೆನ್ನುಬಿದ್ದ ಪೊಲೀಸರಿಗೆ ಯುವತಿಯ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಯುವತಿಯ ಮೇಲೆ ಅತ್ಯಾಚಾರ ಎಸಗಿದ ಟೆಕ್ಕಿ ಹಾಗೂ ಆತನಿಗೆ ಸಹಾಯ ಮಾಡಿದವನಿಗೆ ಬುದ್ಧಿ ಕಲಿಸಲು ಅವರಿಬ್ಬರನ್ನು ಅಪಹರಿಸಿದ್ದ ಯುವತಿ ಸೇರಿದಂತೆ 11 ಮಂದಿ ಆರೋಪಿಗಳನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಗಾಲೇಟಿ ರಾಜಕುಮಾರ್ (24), 21 ವರ್ಷದ ಯುವತಿ, ಮರ್ರಿ ಪಾಟಿ ಮಂಜುನಾಥ (23), ಚಿನಿಗೆಪಲ್ಲಿ ಲೋಕನಾಥ್ (22), ಬಂಡ್ಲಪಲ್ಲಿ ಸುಹೇಲ್ (22), ಗಂಗಾರೆಡ್ಡಿಗಾರಿ ನರೇಂದ್ರ ರೆಡ್ಡಿ (22), ಶಿವಸುಬ್ರಮಣ್ಯಂ (24), ಸಲೀಂ ಪಾಷಾ (30), ನಯೀಂ ಪಾಷಾ (31), ಶಬಾಜ್ (26), ಗಾಲಿ ರಾಜೇಶ್ (20) ಬಂಧಿತರು. ರಮಣ ಎಂಬುವರು ನೀಡಿದ ದೂರಿನನ್ವಯ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಇಬ್ಬರನ್ನು ರಕ್ಷಿಸಲಾಗಿದೆ.ಮಾರತ್ತಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿರುವ ಆಂಧ್ರದ ಮದನಪಲ್ಲಿಯ ನಿವಾಸಿ ಮಹೇಂದ್ರ (23) ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಈತನ ಜತೆ ಸ್ನೇಹಿತರಾದ ಕಡಪ ಮೂಲದವರಾದ ತರುಣ್ (23) ಹಾಗೂ ಮಂಜು ನೆಲೆಸಿದ್ದಾರೆ. ಕಳೆದ ಶನಿವಾರ ಮಂಜು ಆಂಧ್ರದ ಮದನಪಲ್ಲಿಗೆ ತೆರಳಿದ್ದನು. ಆ ವೇಳೆ ಮಂಜು ಸ್ನೇಹಿತನಾದ ರಾಜ್ಕುಮಾರ್ ಕರೆ ಮಾಡಿ ತನ್ನ ಪ್ರೇಯಸಿಯೊಂದಿಗೆ ಒಂದು ದಿನ ಉಳಿದುಕೊಳ್ಳಲು ರೂಮ್ ಬೇಕೆಂದು ಕೇಳಿದ್ದಾನೆ. ಆಗ ಮಂಜು ತಾನು ಊರಿಗೆ ಬಂದಿರುವುದಾಗಿ ತಿಳಿಸಿ ತನ್ನ ಸ್ನೇಹಿತರನ್ನು ಸಂಪರ್ಕಿಸಿ ರೂಮ್ನ ಕೀ ಪಡೆದುಕೊಳ್ಳುವಂತೆ ಹೇಳಿದ್ದಾನೆ. ಅದರಂತೆ ರಾಜ್ಕುಮಾರ್ ತನ್ನ ಪ್ರೇಯಸಿಯೊಂದಿಗೆ ಬಂದಿದ್ದ. ಒಂದು ರೂಮ್ನಲ್ಲಿ ತರುಣ್ ಮತ್ತು ಮಹೇಂದ್ರ ಇದ್ದರು.
ಆಗ ರಾಜ್ಕುಮಾರ್ ಮತ್ತು ಯುವತಿ ಮತ್ತೊಂದು ರೂಮ್ನಲ್ಲಿ ಉಳಿದುಕೊಂಡಿದ್ದರು. ಮಹೇಂದ್ರ ಮತ್ತು ತರುಣ್ ಆ ಯುವತಿಯನ್ನು ಕಾಲ್ಗರ್ಲ್ ಎಂದು ತಪ್ಪಾಗಿ ಭಾವಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಇಬ್ಬರು ತಡರಾತ್ರಿ ರಾಜ್ಕುಮಾರ್ನನ್ನು ಬಲವಂತವಾಗಿ ಮತ್ತೊಂದು ರೂಮ್ಗೆ ಎಳೆದುಕೊಂಡು ಹೋಗಿ ಕೂಡಿ ಹಾಕಿದ್ದಾರೆ. ಬಳಿಕ ಮತ್ತೊಂದು ಕೊಠಡಿಯಲ್ಲಿದ್ದ ಯುವತಿ ಮೇಲೆ ಮಹೇಂದ್ರ ಅತ್ಯಾಚಾರ ಎಸಗಿದ್ದಾನೆ. ಬೆಳಗಾಗುತ್ತಿದ್ದಂತೆ ಯುವತಿಗೆ ಬೆದರಿಸಿ ಮನೆಯಿಂದ ಕಳುಹಿಸಿದ್ದಾನೆ.ಬುದ್ದಿ ಕಲಿಸಲು ಅಪಹರಣ:
ಈ ಘಟನೆಯಿಂದ ಅಘಾತಕ್ಕೊಳಗಾದ ಯುವತಿ ಆರಂಭದಲ್ಲಿ ಯಾರಿಗೂ ವಿಷಯ ತಿಳಿಸಿರಲಿಲ್ಲ. ತದ ನಂತರದಲ್ಲಿ ತನಗಾದ ಅನ್ಯಾಯವನ್ನು ರಾಜ್ಕುಮಾರ್ ಜತೆ ಹೇಳಿಕೊಂಡಿದ್ದಾಳೆ. ಆಗ ಇವರ ಜತೆ ಸ್ನೇಹಿತರು ಸೇರಿಕೊಂಡು ಆರೋಪಿಗಳಿಗೆ ತಕ್ಕ ಪಾಠ ಕಲಿಸಬೇಕೆಂದು ಸಂಚು ರೂಪಿಸಿದ್ದಾರೆ. ಅದರಂತೆ ಅ.28 ರಂದು 5 ಬೈಕ್ಗಳಲ್ಲಿ ಬಂದಿದ್ದ ಆರೋಪಿಗಳು ಮನೆಯಲ್ಲಿದ್ದ ಮಹೇಂದ್ರ ಮತ್ತು ತರುಣ್ನನ್ನು ಅಪಹರಿಸಿದ್ದಾರೆ.ಈ ನಡುವೆ ಮಗ ನಾಪತ್ತೆಯಾಗಿದ್ದಾರೆಂದು ಮಹೇಂದ್ರನ ತಂದೆ ರಮಣ ಎಂಬುವವರು ಮಾರತ್ತಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅಪಹರಣ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ನಂತರ ವಿವಿಧ ಆಯಾಮಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ತನಿಖೆ ಮುಂದುವರಿಸಿದ್ದರು.ಅಪಹರಣಕಾರರು ಇರುವ ಸ್ಥಳವನ್ನು ಪತ್ತೆಹಚ್ಚಿದ ಪೊಲೀಸರು ದೂರು ದಾಖಲಾದ 6 ಗಂಟೆಯೊಳಗೆ 11 ಮಂದಿ ಆರೋಪಿಗಳನ್ನು ಬಂಧಿಸಿ ಅಪಹರಣಗೊಂಡಿದ್ದ ಇಬ್ಬರನ್ನು ರಕ್ಷಿಸಿದ್ದಾರೆ.ಅತ್ಯಾಚಾರ ಪ್ರಕರಣದಲ್ಲಿ ಇಬ್ಬರ ಸೆರೆ
ಅಪಹರಣ ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದ್ದಾಗ ಯುವತಿಯ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಈ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಬುರ್ಸು ಮಹೇಂದ್ರ(23) ಮತ್ತು ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಯೆರ್ರಿ ಬೋಯಿನ್ ತರುಣ್(23) ಎಂಬುವರನ್ನು ಬಂಧಿಸಲಾಗಿದೆ. 21 ವರ್ಷದ ಯುವತಿ ನೀಡಿದ ದೂರಿನನ್ವಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.