ಸಮುದಾಯ ಒಡೆಯುವ ದುಷ್ಟಶಕ್ತಿಗಳಿಗೆ ತಕ್ಕ ಪಾಠ :ರೇಣುಕಾಚಾರ್ಯ ಎಚ್ಚರಿಕೆ

KannadaprabhaNewsNetwork | Published : Mar 1, 2025 1:04 AM

ಸಾರಾಂಶ

ವೀರಶೈವ ಲಿಂಗಾಯತ ಸಮುದಾಯವನ್ನು ಕೆಲ ದುಷ್ಟ ಶಕ್ತಿಗಳು ಒಡೆಯುವ ಕೆಲಸಕ್ಕೆ ಮುಂದಾಗಿವೆ. ಇಂತಹ ದುಷ್ಟಶಕ್ತಿಗಳಿಗೆ ಸಮುದಾಯದ ಬೃಹತ್ ಸಮಾವೇಶ ಕೈಗೊಂಡು ವಿರೋಧಿ ಶಕ್ತಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ವೀರಶೈವ ಲಿಂಗಾಯತ ಸಮುದಾಯವನ್ನು ಕೆಲ ದುಷ್ಟ ಶಕ್ತಿಗಳು ಒಡೆಯುವ ಕೆಲಸಕ್ಕೆ ಮುಂದಾಗಿವೆ. ಇಂತಹ ದುಷ್ಟಶಕ್ತಿಗಳಿಗೆ ಸಮುದಾಯದ ಬೃಹತ್ ಸಮಾವೇಶ ಕೈಗೊಂಡು ವಿರೋಧಿ ಶಕ್ತಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರು.

ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪೂರ್ವಭಾವಿ ಸಭೆ ನಡೆಸಿ, ಸಮುದಾಯವನ್ನು ಸಂಘಟಿಸುತ್ತೇವೆ. 2023ರ ಚುನಾವಣೆಯಲ್ಲಿ ಕಳೆದುಕೊಂಡಿರುವ ಸಮುದಾಯದ ಮತಗಳನ್ನು, ಮತ್ತೆ ವಾಪಸ್ ತರುವುದು, ಸಂಘಟನೆಯ ಉದ್ದೇಶವಾಗಿದೆ. ಈ ಹೋರಾಟ ಯಾರ ವಿರುದ್ಧವೂ ಅಲ್ಲ, ಕೆಲ ದುಷ್ಟ ಶಕ್ತಿಗಳು ವೀರಶೈವ ಲಿಂಗಾಯತ ಸಮಾಜವನ್ನ ಒಡೆಯುವ ಕೆಲಸ ಮಾಡುತ್ತಿವೆ. ಅದರ ವಿರುದ್ಧ ಹೋರಾಡಿ ಅವರಿಗೆ ತಕ್ಕಪಾಠ ಕಲಿಸುತ್ತೇವೆ ಎಂದು ಹೆಸರೇಳದೆ ಬಿಜೆಪಿ ಭಿನ್ನಮತೀಯರ ವಿರುದ್ಧ ಆಕ್ರೋಶ ಹೊರಹಾಕಿದರು.

ದೊಡ್ಡ ಸಮಾವೇಶ ಆಯೋಜನೆ:

ಕೆಲವೇ ದಿನಗಳಲ್ಲಿ ಒಂದೇ ವೇದಿಕೆಯಲ್ಲಿ ಸಮಾಜದ ಮುಖಂಡರು, ಮಠಾಧೀಶರು, ಶಾಸಕರು, ಮಾಜಿ ಶಾಸಕರು ರಾಜಕೀಯ ಗಣ್ಯರನ್ನು ಸೇರಿಸಿ ಬೃಹತ್‌ ಸಮಾವೇಶ ಆಯೋಜಿಸುತ್ತೇವೆ. ವೀರಶೈವ ಲಿಂಗಾಯತ ಸಮುದಾಯವನ್ನ ಒಗ್ಗೂಡಿಸುವ ಸಮಾವೇಶಕ್ಕೆ ಸಿದ್ದತೆ ನಡೆಸುತ್ತಿದ್ದೇವೆ. ಮಾಜಿ ಸಿಎಂ ಯಡಿಯೂರಪ್ಪ ಸಮುದಾಯಕ್ಕೆ ಕೊಟ್ಟ ಕೊಡುಗೆ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತೇವೆ. ಯಾರಿಗೂ ಟಾಂಗ್ ಕೊಡುವ ಬಗ್ಗೆ ಮಾತಿಲ್ಲಾ, ಯತ್ನಾಳ್ ಅಂಡ್ ಟೀಮ್ ವಿರುದ್ಧ ವಿಚಾರ ಇಲ್ಲಾ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.

ದಿಢೀರ್ ಸಭೆ:

ವೀರಶೈವ ಲಿಂಗಾಯತ ಮುಖಂಡರ ದಿಢೀರ್ ಸಭೆ ಯಾಕೆ? ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪರ ಶಕ್ತಿ ಪ್ರದರ್ಶನಕ್ಕೆ ಸಿದ್ದತೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ, ವೀರಶೈವ ಲಿಂಗಾಯತ ಮುಖಂಡರ ಸಭೆ ಕರೆದು ಮುಂದಿನ ನಡವಳಿಕೆ ಬಗ್ಗೆ ಚರ್ಚೆ ಪ್ರಾರಂಭಿಸಿದ್ದೇವೆ. ಶೀಘ್ರದಲ್ಲೇ ಯಡಿಯೂರಪ್ಪ ವಿಜಯೇಂದ್ರ ನೇತೃತ್ವದಲ್ಲಿ ಶಕ್ತಿ ಪ್ರದರ್ಶನ ಹಾಗೂ ಬೃಹತ್ ಸಮಾವೇಶಕ್ಕೆ ಸಿದ್ಧತೆ ನಡೆಯಲಿದೆ. ಶಕ್ತಿ ಪ್ರದರ್ಶನ ಮೂಲಕ ವೀರಶೈವ ಲಿಂಗಾಯತರು ಸೇರಿದಂತೆ ವಿವಿಧ ಮಠಗಳ ಶ್ರೀಗಳು ಸಮಾವೇಶದಲ್ಲಿ ಪಾಲ್ಗೊಳಲ್ಲಿದ್ದಾರೆ, ಸಮುದಾಯ ಒಂದಾಗಲಿದೆ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಮುಂದುವರಿಯಲಿದ್ದಾರೆ ಎಂದು ಹೇಳಿದರು.

ಬಿಎಸ್‌ವೈ ಸಹಾಯ ಪಡೆದವರೇ ಬೆನ್ನಿಗೆ ಚೂರಿ:

ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ ಮಾತನಾಡಿ, ಸಮುದಾಯ ಸಂಘಟಿತವಾಗುವುದು ಅನಿವಾರ್ಯ. ಯಡಿಯೂರಪ್ಪನವರ ಕುಟುಂಬದಿಂದ ಸಹಾಯ ಪಡೆದವರೇ ಇಂದು ಅವರಿಗೆ, ವಿಜಯೇಂದ್ರ ಬೆನ್ನಿಗೆ ಚೂರಿ ಹಾಕಲು ಹೊರಟಿದ್ದಾರೆ. ಯತ್ನಾಳ್ ಅಂಡ್ ಅವರ ಟೀಮ್ ಗೆ ಅವರ ಜಿಲ್ಲೆಗಳಲ್ಲೇ ಪಕ್ಷವನ್ನು ಗೆಲ್ಲಿಸುವ ಸಾಮರ್ಥ್ಯ ಇಲ್ಲ. ಇನ್ನೆಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಲು ಅವರನ್ನು ಯಾರೂ ಒಪ್ಪುವುದಿಲ್ಲ ಎಂದರು.

ಇದೇ ವೇಳೆ ಕೇಕ್ ಕತ್ತರಿಸುವ ಮೂಲಕ ಮಾಜಿ ಸಚಿವ ರೇಣುಕಾಚಾರ್ಯ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಕಾರ್ಯಕರ್ತರು ಹೂ ಮಾಲೆ ಹಾಕಿ ಮಾಜಿ ಸಚಿವರನ್ನು ಅಭಿನಂದಿಸಿದರು.

ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷರಾದ ತಿಮ್ಮನಾಯ್ಕನಹಳ್ಳಿ ಉಮಾಶಂಕರ್, ಪಂಚಾಕ್ಷರಿ, ಕೆಂಚನಪುರ ಚನ್ನಬಸವಪ್ಪ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಕೆ.ಪಿ.ಬೃಂಗೇಶ್, ಗಟ್ಟಿಬೈರಪ್ಪ, ನೀಲಕಂಠಪ್ಪ, ಜಿಪಂ ಮಾಜಿ ಸದಸ್ಯ ಶಿವರುದ್ರಪ್ಪ, ಜಯದೇವ್, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಲ್ಲಯ್ಯ, ಜಗನ್ನಾಥ್, ಹೊನ್ನರಾಯನಹಳ್ಳಿ ಲೋಕೇಶ್, ಶಿವಕುಮಾರ್, ರೇಣುಕಾ ಪ್ರಸಾದ್, ಬರಗೇನಹಳ್ಳಿ ಪರಮೇಶ್, ಶಿವರುದ್ರಪ್ಪ, ಚನ್ನಬಸವಣ್ಣ, ಮಹಿಳಾ ಪ್ರತಿನಿಧಿಗಳಾದ ರಾಜಮ್ಮ, ವೇದಾವತಿ, ಶೀಲಾ, ಕರುನಾಡ ವಿಜಯಸೇನೆ ರಾಜ್ಯಾಧ್ಯಕ್ಷ ದೀಪಕ್, ಸಚ್ಚಿದಾನಂದಮೂರ್ತಿ, ಕಂಬಾಳು ಪ್ರಭುದೇವ್, ಉಮೇಶ್, ರಾಯರಪಾಳ್ಯ ಮಹೇಶ್, ಮಾದೇನಹಳ್ಳಿ ಗಂಗಾಧರ್, ಲೋಕೇಶ್, ನೂರಾರು ಸಮುದಾಯದ ಪ್ರತಿನಿಗಳು, ಮಹಿಳೆಯರು ಇತರರಿದ್ದರು.

Share this article