ಕನ್ನಡಪ್ರಭ ವಾರ್ತೆ ಮೈಸೂರು
ಬಹುರೂಪಿಗೆ ಮುನ್ನಡಿ ಬರೆದಂತಿದ್ದ ಈ ಉತ್ಸವಕ್ಕೆ ನರಕಾಸುರ ವಧೆ ಪ್ರಸಂಗ ನಾಂದಿ ಆಯಿತು. ಯಕ್ಷಗಾನ ಕಲಾವಿದರು ತಮ್ಮದೇ ಶೈಲಿಯ ನೃತ್ಯದ ಮೂಲಕ ಈ ಪ್ರಸಂಗವನ್ನು ಪ್ರಸ್ತುತಪಡಿಸಿದರು.
ಜಾನಪದ ಕಲಾವಿದೆ ಸವಿತಾ ಚೀರುಕುನ್ನಯ್ಯ ಅವರು, ಹೊಂಬಾಳೆ ಬಿಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದ ಕಲೆ ನಶಿಸುತ್ತಿದೆ ಎಂಬುದನ್ನು ನಂಬಲಾರೆ. ಏಕೆಂದರೆ ಜಾನಪದ ಸಮೃದ್ಧಿಯಾಗಿದೆ. ಸಾವಿರಾರು ಕಲಾವಿದರು ಜನಪದ ಕಲೆಗಳನ್ನು ಉಳಿಸಿ ಬೆಳೆಸಿದ್ದಾರೆ. ಮಾಧ್ಯಮದವರು ಜಾನಪದ ಕಲೆ ಮತ್ತು ಕಲಾವಿದರ ಬಗ್ಗೆ ವಿಸ್ತಾರವಾಗಿ ಪ್ರಚಾರ ಕೊಡಬೇಕು ಎಂದರು.ಜಾನಪದ ಕಲೆಗೆ ಪ್ರೋತ್ಸಾಹ ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಾವಿದರಿಗೆ ಸೌಲಭ್ಯ ಕಲ್ಪಿಸಬೇಕು. ಅಪಘಾತ ಸಂಭವಿಸಿದರೆ ಯಾವುದೇ ಭದ್ರತೆ ಇಲ್ಲ. ಅನೇಕ ಕಲಾವಿದರು ಕಷ್ಟದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಹೆಚ್ಚು ನೆರವಾಗಬೇಕು ಎಂದರು.
ಜಾನಪದ ಗಂಡು ಕಲೆ. ಹೆಣ್ಣು ಮಗಳಾಗಿ ಈ ಕಲೆಯನ್ನು ನಡೆಸಿಕೊಂಡು ಬಂದಿದ್ದೇನೆ. ನಮ್ಮ ಕುಟುಂಬಕ್ಕೂ ಜಾನಪದಕ್ಕೂ ಅವಿನಾಭಾವ ಸಂಬಂಧ ಇದೆ. ಜಾನಪದ ಕಲೆಯಿಂದ ಬದುಕು ಕಟ್ಟಿಕೊಂಡಿದ್ದೇವೆ ಎಂದು ಹೇಳಿದರು.ರಂಗಾಯಣ ನಿರ್ದೇಶಕ ಸತೀಶ್ ತಿಪಟೂರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಕ್ರಾಂತಿ ಹಬ್ಬದ ಮೂಲಕ ಬಹುರೂಪಿ ನಾಟಕೋತ್ಸವ ಆಚರಿಸುತ್ತಿದ್ದೇವೆ. ಬಹುರೂಪಿ ಬೆಳ್ಳಿಹಬ್ಬ ಆಚರಣೆಗೆ ಮುನ್ನುಡಿಯ ವರ್ಷವಾಗಲಿದೆ. ಮಕ್ಕಳ ಬಹುರೂಪಿ ಸೇರ್ಪಡೆ ವಿಶೇಷವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಜಾನಪದ ಬಾಯಿಯಿಂದ ಬಾಯಿಗೆ, ಹೃದಯದಿಂದ ಹೃದಯಕ್ಕೆ ಹರಿದು ಬಂದಿದೆ. ಜನಪದಕ್ಕೆ ಯಾವುದೇ ರೂಪುರೇಷೆ ಇಲ್ಲ. ಲೇಖಕರೂ ಇಲ್ಲ. ಯಾವ ರಾಜರನ್ನು ಓಲೈಸಿಲ್ಲ. ರಾಜಕಾರಣವನ್ನೂ ಮಾಡಿಲ್ಲ. ಕಲಾವಿದರು ಭಜನೆ ಮಾಡುತ್ತ ಬಂದರು. ಎದೆಯಿಂದ ಎದೆಗೆ ನೋವು, ಸಂಭ್ರಮವನ್ನು ತೂರಿಬಿಟ್ಟರು ಎಂದರು.ರಂಗ ಸಮಾಜ ಸದಸ್ಯ ಮಹಾಂತೇಶ್ ಗಜೇಂದ್ರಗಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಜನಪದ ಉತ್ಸವದ ಸಂಚಾಲಕಿ ಗೀತಾ ಮೋಂಟಡ್ಕ ಇದ್ದರು.
ಫೋಟೋ- 13ಎಂವೈಎಸ್ 11- ಮೈಸೂರಿನ ರಂಗಾಯಣ ಆವರಣದ ಕಿಂದರಿಜೋಗಿಯಲ್ಲಿ ಸೋಮವಾರ ಜಾನಪದ ಉತ್ಸವಕ್ಕೆ ಕಲಾವಿದೆ ಸವಿತಾ ಚೀರುಕುನ್ನಯ್ಯ ಚಾಲನೆ ನೀಡಿದರು. ರಂಗಾಯಣ ನಿರ್ದೇಶಕ ಸತೀಶ್ ತಿಪಟೂರ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ್, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ಮೊದಲಾದವರು ಇದ್ದಾರೆ.