ಅಧಿಕಾರಿಗಳ ಎಡವಟ್ಟು: ಬಿಜೆಪಿ ಕಾರ್ಯಕರ್ತರ ತರಾಟೆ

KannadaprabhaNewsNetwork | Published : Jan 14, 2025 1:00 AM

ಸಾರಾಂಶ

ಶೃಂಗೇರಿ , ಹಾಲಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಮತಪೆಟ್ಟಿಗೆಗಳನ್ನು ಮತದಾನ ಏಕಾಏಕಿ ಶೃಂಗೇರಿ ತಾಲೂಕು ಕಚೇರಿಯಲ್ಲಿನ ಟ್ರಜರಿ ಕೊಠಡಿಗೆ ಸ್ಥಳಾಂತರಿಸಿದ ಬಗ್ಗೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ಷಪಡಿಸಿ ಚುನಾವಣಾಧಿಕಾರಿ ಈಶ್ವರ್ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಹಾಲಂದೂರು ಸೊಸೈಟಿ ಚುನಾವಣೆ ಸಂಬಂದ ಉಂಟಾದ ಗೊಂದಲ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಹಾಲಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಮತಪೆಟ್ಟಿಗೆಗಳನ್ನು ಮತದಾನ ಏಕಾಏಕಿ ಶೃಂಗೇರಿ ತಾಲೂಕು ಕಚೇರಿಯಲ್ಲಿನ ಟ್ರಜರಿ ಕೊಠಡಿಗೆ ಸ್ಥಳಾಂತರಿಸಿದ ಬಗ್ಗೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ಷಪಡಿಸಿ ಚುನಾವಣಾಧಿಕಾರಿ ಈಶ್ವರ್ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ತಾಲೂಕಿನ ಮೆಣಸೆ ಪಂಚಾಯಿತಿ ಹಾಲಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ಕ್ಷೇತ್ರಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ನ್ಯಾಯಾಲಯದ ಆದೇಶದ ಮೇಲೆ ಮತದಾರರ ಪಟ್ಟಿಯಲ್ಲಿದ್ದ ಮತದಾರರು ಮತ ಚಲಾಯಿಸಿ ಮತಪೆಟ್ಟಿಗೆಗಳನ್ನು ಮತದಾನ ನಡೆದ ಹಾಲಂದೂರು ಸೊಸೈಟಿ ಕೊಠಡಿಯಲ್ಲಿ ಭದ್ರವಾಗಿ ಇಡಲಾಗಿತ್ತು.

ಆದರೆ, ಸೋಮವಾರ ಚುನಾವಣಾಧಿಕಾರಿಗಳು ಮತಪೆಟ್ಟಿಗೆಗಳನ್ನು ಏಕಾಏಕಿ ಶೃಂಗೇರಿ ತಾಲೂಕು ಕಚೇರಿಯಲ್ಲಿನ ಟ್ರಜರಿ ಕೊಠಡಿಗೆ ಕೊಂಡೊಯ್ಯುತ್ತಿದ್ದಾಗ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಸಹಿತ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಮತ ಪೆಟ್ಟಿಗೆಗಳಿದ್ದ ವಾಹನವನ್ನು ಬೆನ್ನಟ್ಟಿ ಬಂದು ತಾಲೂಕು ಕಚೇರಿ ಎದುರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮತಪೆಟ್ಟಿಗೆಗಳನ್ನು ವಾಹನದಿಂದ ಕೆಳಗಿಳಿಸಲು ಬಿಡಲಿಲ್ಲ.

ಕಾರ್ಯಕರ್ತರು ಚುನಾವಣಾಧಿಕಾರಿ ಈಶ್ವರ್ ರವರನ್ನು ತಡೆದು ಮತಪೆಟ್ಟಿಗೆ ಕೊಂಡೊಯ್ಯಲು ಆದೇಶವಿದೆಯೇ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಕಾರ್ಯಕರ್ತರು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬಂದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಪೋಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟರು.

ಕೊನೆಗೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದು ಮತಪೆಟ್ಟಿಗೆಗಳನ್ನು ಬಿಗಿ ಭದ್ರತೆಯಲ್ಲಿ ಕೆಳಗಿಳಿಸಿ ತಾಲೂಕು ಕಚೇರಿ ಟ್ರಜರಿ ಕೇಂದ್ರಕ್ಕೆ ಕೊಂಡೊಯ್ದು ಇಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ತಲಗಾರು ಉಮೇಶ್, ಬಿ. ಶಿವಶೆಂಕರ್, ಹರೀಶ್ ಶೆಟ್ಟಿ, ಪಪಂ ಅಧ್ಯಕ್ಷ ವೇಣುಗೋಪಾಲ್, ಡಿ.ಸಿ ಶಂಕ್ರಪ್ಪ ಮತ್ತಿತರರು ಇದ್ದರು.

13 ಶ್ರೀ ಚಿತ್ರ 1-

ಶೃಂಗೇರಿ ತಾಲೂಕು ಕಚೇರಿ ಎದರು ಸೋಮವಾರ ಹಾಲಂದೂರು ಸೊಸೈಟಿ ಮತಪೆಟ್ಟಿಗೆ ಕೊಂಡೊಯ್ದ ವಿಚಾರಕ್ಕೆ ಸಂಬಂದಿಸಿದಂತೆ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Share this article