- ಧಾರ್ಮಿಕ ಆಚರಣೆಗಳಿಗೆ ಭಕ್ತರ ಸಾಥ್, ಅನ್ನ ಸಂತರ್ಪಣೆ - - - ಕನ್ನಡಪ್ರಭ ವಾರ್ತೆ ನ್ಯಾಮತಿ
ಪಟ್ಟಣದಲ್ಲಿ ಬನದ ಹುಣ್ಣಿಮೆಯ ನಿಮಿತ್ತ ಶ್ರೀ ಬನಶಂಕರಿ ರಥೋತ್ಸವ, ಶ್ರೀ ವೀರಭದ್ರೇಶ್ವರ ಸ್ವಾಮಿ ಷರಭೀ ಗುಗ್ಗಳ, ಶ್ರೀ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಸೋಮವಾರ ಬೆಳಗ್ಗೆ ಸಂಭ್ರಮ ಜರುಗಿತು.ಬೆಳ್ಳಂಬೆಳಗ್ಗೆಯೇ ಶ್ರೀ ಬನಶಂಕರಿ ಶಿಲಾಮೂರ್ತಿಗೆ ಗಂಗಾಪೂಜೆ, ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಸಹಸ್ರ ಬಿಲ್ವಾರ್ಚನೆ, ಲಲಿತ ಸಹಸ್ರನಾಮವಳಿ, ಮಹಾಮಂಗಳಾರತಿ, , ತೀರ್ಥಪ್ರಸಾದ, ಪುಷ್ಪಾಲಂಕಾರ ಪೂಜಾ ಕಾರ್ಯಕ್ರಮಗಳು ನಡೆದವು.
ಭಕ್ತರು ದೇವರ ದರ್ಶನ ಪಡೆದು, ಹಣ್ಣು-ಕಾಯಿ ಅರ್ಪಿಸಿ ಪೂಜಿಸಿದರು. ಪೂಜಾ ಕಾರ್ಯಕ್ರಮಗಳು ಮುಗಿದ ನಂತರ ಶ್ರೀ ಬನಶಂಕರಿ ದೇವಿ, ಶ್ರೀ ವೀರಭದ್ರೇಶ್ವರಸ್ವಾಮಿ, ಶ್ರೀ ಆಂಜನೇಯಸ್ವಾಮಿ ಉತ್ಸವ ಮೂರ್ತಿಗಳನ್ನು ದೇಗುಲದ ಆವರಣದಲ್ಲಿ ಸಾಂಪ್ರಾದಯಿಕ ಪೂಜೆ ಸಲ್ಲಿಸಲಾಯಿತು.ಬಳಿಕ ಸಿಂಗರಿಸಿದ ರಥದ ಗಾಲಿಗಳಿಗೆ ಎಡೆಬಾನ ಅರ್ಪಿಸಿ, ಶ್ರೀ ಬನಶಂಕರಿ ದೇವಿ, ಶ್ರೀ ವೀರಭದ್ರಸ್ವಾಮಿ, ಶ್ರೀ ಆಂಜನೇಯಸ್ವಾಮಿ ದೇವರ ಉತ್ಸವ ಮೂರ್ತಿಗಳು ಒಂದೊಂದಾಗಿ ರಥಾರೋಹಣ ಮಾಡಿದವು. ಭಕ್ತರು ಜೈಕಾರ ಹಾಕುತ್ತಾ, ರಥವನ್ನು ಎಳೆದರು.
ಡೊಳ್ಳು, ಭಜನೆ, ಮಂಗಳವಾದ್ಯಗಳೊಂದಿಗೆ ನೆಹರೂ ರಸ್ತೆ ಮೂಲಕ ರಥೋತ್ಸವ ಸಾಗಿತು. ಶ್ರೀ ಮಹಂತೇಶ್ವರ ರಸ್ತೆ, ಗಾಂಧಿ ರಸ್ತೆ, ಶ್ರೀ ಆಂಜನೇಯ ರಸ್ತೆಯಲ್ಲಿ ರಥೋತ್ಸವ ಸಂಚರಿಸಿ ಪುನಃ ದೇಗುಲಕ್ಕೆ ಬಂದು ತಲುಪಿತು. ದೇಗುಲದಲ್ಲಿ ಅನ್ನದಾಸೋಹ, ಪಾನಕ ವ್ಯವಸ್ಥೆ ಮಾಡಲಾಗಿತ್ತು.ಸುರಹೊನ್ನೆಯಲ್ಲಿ ರಥೋತ್ಸವ:
ಸುರಹೊನ್ನೆ ಗ್ರಾಮದಲ್ಲಿಯೂ ಶ್ರೀ ಬನಶಂಕರಿ ದೇವಿ ರಥೋತ್ಸವ ಹಾಗೂ ಕರಿಯಮ್ಮ ದೇವಿ, ರಾಮದೇವರ ರಥೋತ್ಸವ ಜರುಗಿತು. ಪಂಚಾಮೃತಾಭಿಷೇಕ, ರುದ್ರಾಭಿಷೇಕ ನಡೆದು ದುರ್ಗಾಹೋಮ ಪೂಜಾ ಕಾರ್ಯಗಳು ನೆರವೇರಿದವು. ಸಂಜೆ 4-30ಕ್ಕೆ ಶ್ರೀ ಬನಶಂಕರಿ ದೇವಿ ರಥೋತ್ಸವ ಹಾಗೂ ಕರಿಯಮ್ಮ ದೇವಿ, ಶ್ರೀ ರಾಮದೇವರುಗಳ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಮಂಗಳವಾದ್ಯಗಳೊಂದಿಗೆ ಸಂಚರಿಸಿ, ಪುನಃ ದೇಗುಲ ತಲುಪಿತು. ಅನ್ನಸಂತರ್ಪಣೆ ಮಾಡಲಾಯಿತು.- - - (-ಫೋಟೋ:)