- ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಪ್ರಭಾಕರ್
- - - ಕನ್ನಡಪ್ರಭ ವಾರ್ತೆ ದಾವಣಗೆರೆಜನಪದ ಸಾಹಿತ್ಯವು ಜನರಿಂದ, ಜನರಿಗಾಗಿ, ಜನರಿಗೋಸ್ಕರ ರಚನೆಯಾಗಿರುವ ಸಾಹಿತ್ಯ. ಜನಪದರು ಮೂಡಣ ಕೆಂಪೇರಿದಾಗ ಮುಂಗೋಳಿ ಕೂಗಿದಾಗ ಎದ್ದು ಎಳ್ಳುಜೀರಿಗೆ ಬೆಳೆಯುವ ಭೂಮಿಯೇ ತಾಯಿ ಎಂದು ಶ್ರದ್ಧಾ-ಭಕ್ತಿಯಿಂದ ಕೆಲಸ ಆರಂಭಿಸುತ್ತಿದ್ದರು. ಮಂದಿ ಮಂದಿ ಎಂದು ನಂಬಲು ಹೋದರೆ ನಡುನೀರಿನಲ್ಲಿಯೇ ನಮ್ಮನ್ನ ಕೈ ಬಿಡುತ್ತಾರೆ. ಆದರೆ ಭಗವಂತ ನಮ್ಮನ್ನ ಕಡೆತನಕ ಕಾಯುತ್ತಾನೆ ಎಂದು ಹಾಡಿನ ಮೂಲಕ ಬೇಡಿಕೊಳ್ಳುತ್ತಿದ್ದರು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಡಾ.ಪ್ರಭಾಕರ್ ಹೇಳಿದರು.
ನಗರದ ಬಿ.ಇ.ಎ. ಶಿಕ್ಷಣ ಮಹಾವಿದ್ಯಾಲಯ ಆವರಣದಲ್ಲಿ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಬಿ.ಇ.ಎ. ಶಿಕ್ಷಣ ಮಹಾವಿದ್ಯಾಲಯ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಸಹಯೋಗದಲ್ಲಿ ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಅಂಗವಾಗಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ವಿಷಯ ಕುರಿತು ಅವರು ಮಾತನಾಡಿದರು.ತಾಯಿ-ತಂದೆ, ಸತಿ-ಪತಿ, ಅಣ್ಣ-ತಮ್ಮ, ಅಕ್ಕ-ತಂಗಿ, ಅತ್ತೆ-ಮಾವ, ಭಾವ-ಮೈದುನ, ಮಡದಿ-ಮಕ್ಕಳು ಎಂಬ ಭಾವನಾತ್ಮಕ ಸಂಬಂಧಗಳಿಂದ ಎಲ್ಲ ವರ್ಗದವರೊಂದಿಗೆ ಕೂಡಿ ಬಾಳುತ್ತಿದ್ದರು. ಜನಪದರ ಜೀವನಶೈಲಿಯು ಆಧುನಿಕ ಯುವಜನಾಂಗಕ್ಕೆ ಮಾದರಿಯಾಗಿದೆ. ಯುವ ವಿದ್ಯಾರ್ಥಿ ಸಮೂಹ ಆಧುನಿಕ ಮೊಬೈಲ್ ಲ್ಯಾಪ್‌ಟಾಪ್ ಕಂಪ್ಯೂಟರ್ ನಂತ ತಂತ್ರಾಂಶಗಳನ್ನ ಮಾತ್ರ ಬಳಸಿಕೊಂಡು ಪುಸ್ತಕ ಓದದೇ ಜನಪದರ ಜೀವನ ಗಮನಿಸದೇ ಹಲವು ರೀತಿಯ ಗೊಂದಲ ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಕೇವಲ ಪದವಿ ಹಾಗೂ ಅಂಕಶ್ರೇಣಿಗಳಿಗೆ ಸೀಮಿತರಾಗಿ ಖಾಸಗಿ ಬದುಕನ್ನ ಮೂಲೆಗುಂಪು ಮಾಡಿಕೊಂಡಿದ್ದಾರೆ. ಅದಕ್ಕಾಗಿ ಜನಪದ ಹಾಡುಗಳು ಕಥೆ, ಒಗಟು, ಒಡಪು, ಕಥನ ಕವನ, ಗಾದೆ, ನಾಟಕ ಮುಂತಾದ ಜನಪದ ಕಲೆಗಳ ಮೂಲಕ ತಮ್ಮ ಜೀವನವನ್ನು ಆನಂದಮಯವಾಗಿ ಕಳೆಯಲು ಮುಂದಾಗಬೇಕು ಎಂದರು.
ಮಹಾವಿದ್ಯಾಲಯದ ಉಪನ್ಯಾಸಕಿ ಆರ್.ಆರ್. ಶೈಲಜಾ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಬಿ. ದಿಳ್ಯಪ್ಪ, ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ, ನಿರ್ದೇಶಕರಾದ ಷಡಕ್ಷರಪ್ಪ ಎಂ.ಬೇತೂರು, ಎ.ಎಂ. ಸಿದ್ದೇಶ ಕುರ್ಕಿ ಇತರರು ಭಾಗವಹಿಸಿದ್ದರು. ಪ್ರಶಿಕ್ಷಣಾರ್ಥಿಗಳಾದ ಕೆ.ಚಂದ್ರಿಕಾ ಪ್ರಾರ್ಥಿಸಿ, ದೀಪಾ ದೇವಗೇರಿ ಸ್ವಾಗತಿಸಿದರು. ಕರಿಬಸಯ್ಯ ಪೂಜಾರ ನಿರೂಪಿಸಿ, ಎಂ.ಶೀಲಾ ವಂದಿಸಿದರು.- - -
-25ಕೆಡಿವಿಜಿ33: ದಾವಣಗೆರೆಯಲ್ಲಿ ತಾಲೂಕು ಕಸಾಪದಿಂದ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.