ಕೀಟಗಳ ಕಾಟಕ್ಕೆ ಕಂಗೆಟ್ಟ ಅನ್ನದಾತ

KannadaprabhaNewsNetwork |  
Published : Jul 06, 2025, 01:48 AM IST
ಸೋಯಾಬೀನ್‌ ಎಲೆಯನ್ನು ಕೀಟ ತಿಂದಿರುವುದು. | Kannada Prabha

ಸಾರಾಂಶ

ಸೋಯಾಬೀನ್‌ ಸೇರಿ ಎಲ್ಲ ಬೆಳೆಯನ್ನು ಕೀಟ (ಕೀಡೆ) ತಿಂದಿದ್ದು, ಕೇವಲ ದೇಟು ಮಾತ್ರ ಕಾಣುತ್ತಿವೆ. ಒಂದು ಸಸಿಗೆ ನಾಲ್ಕೈದು ಕೀಟಗಳು (ಕೀಡೆ) ಕಂಡುಬರುತ್ತಿವೆ.

ಸದಾನಂದ ಮಜತಿ

ಕನ್ನಡಪ್ರಭ ವಾರ್ತೆ ಬೆಳಗಾವಿ

ಈ ಬಾರಿ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದರಿಂದ ರೈತರ ಖುಷಿಗೆ ಪಾರವೇ ಇರಲಿಲ್ಲ. ಬಹಳ ವರ್ಷಗಳ ನಂತರ ರೋಹಿಣಿ ಮಳೆಗೆ ಬಿತ್ತನೆ ಮಾಡಿದ್ದ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ಅನ್ನದಾತನ ಈ ನಿರೀಕ್ಷೆಗೆ ಕೀಟಗಳು ಕೊಳ್ಳೆ ಇಟ್ಟಿದ್ದು, ರೈತರ ಬಾಳಲ್ಲಿ ಬಿರುಗಾಳಿ ಎಬ್ಬಿಸಿವೆ.

ಬೈಲಹೊಂಗಲ ತಾಲೂಕು ಬಹುತೇಕ ಮಳೆ ಆಶ್ರಿತ ಪ್ರದೇಶ ಹೊಂದಿದೆ. ಸೋಯಾಬೀನ್‌ ಈ ಭಾಗದ ಪ್ರಮುಖ ಬೆಳೆ. ಶೇ.70ರಷ್ಟು ಪ್ರದೇಶದಲ್ಲಿ ಸೋಯಾಬೀನ್‌ ಬಿತ್ತನೆ ಮಾಡಲಾಗುತ್ತದೆ. ಇನ್ನುಳಿದಂತೆ ಹತ್ತಿ, ಬಟಾಣಿ, ಹೆಸರು ಬೆಳೆಯಲಾಗುತ್ತದೆ.

ಕೀಟಬಾಧೆಗೆ ಕಂಗಾಲಾದ ರೈತರು:

ಬಿತ್ತನೆ ಮಾಡಿ ಒಂದು ತಿಂಗಳಾಗಿದೆ. ಎರಡು ಬಾರಿ ಎಡೆಪಟ್ಟಿ ಹೊಡೆದಿದ್ದು ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಬೆಳೆ ಸಾಲುಗಳಲ್ಲಿ ಆವರಿಸಿ ಹಸಿರಿನಿಂದ ನಳನಳಿಸಬೇಕಿತ್ತು. ಆದರೆ, ರೈತರು ತಮ್ಮ ಜೀವಮಾನದಲ್ಲೇ ಎಂದೂ ಕಂಡರಿಯದ ಕೀಟಬಾಧೆಗೆ ಬೆಳೆಗಳು ತತ್ತರಿಸಿದೆ. ಎಲೆಗಳನ್ನೆಲ್ಲ ಕೀಟಗಳು ತಿಂದಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ನಡೆಸಿದ್ದಾರೆ. ಎಲ್ಲ ರೀತಿಯ ಕೀಟನಾಶಕ ಪ್ರಯೋಗ ಮಾಡಿದರೂ ಕೀಟಗಳು ಹತೋಟಿಗೆ ಬರುತ್ತಿಲ್ಲ.

ಬರಡಾದ ಜಮೀನು; ರೈತ ಕಂಗಾಲು:

ಸೋಯಾಬೀನ್‌ ಸೇರಿ ಎಲ್ಲ ಬೆಳೆಯನ್ನು ಕೀಟ (ಕೀಡೆ) ತಿಂದಿದ್ದು, ಕೇವಲ ದೇಟು ಮಾತ್ರ ಕಾಣುತ್ತಿವೆ. ಒಂದು ಸಸಿಗೆ ನಾಲ್ಕೈದು ಕೀಟಗಳು (ಕೀಡೆ) ಕಂಡುಬರುತ್ತಿವೆ. ಯಾವುದೇ ಕಂಪನಿಯ ಕೀಟನಾಶಕ ಸಿಂಪಡಿಸಿದರೂ ಹತೋಟಿಗೆ ಬರುತ್ತಿಲ್ಲ. ಪ್ರತಿವರ್ಷ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತಿದ್ದ ಈ ಕೀಟಬಾಧೆ ಒಂದೆರಡು ಬಾರಿ ಕೀಟನಾಶಕ ಸಿಂಪಡಣೆ ಮಾಡಿದರೆ ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ, ಈ ಬಾರಿ ಬೆಳೆ ಎಲೆ ಬಿಡುತ್ತಲೇ ಶುರುವಾದ ಕೀಟಬಾಧೆ ಎಷ್ಟೇ ಕೀಟನಾಶಕ ಸಿಂಪಡಿಸಿದರೂ ಹತೋಟಿಗೆ ಬರುತ್ತಿಲ್ಲ. ಬೆಳೆಯ ಎಲ್ಲೆಯನ್ನೆಲ್ಲ ತಿಂದುಹಾಕಿದ್ದು, ಬೆಳವಣಿಗೆ ಕುಂಠಿತವಾಗಿ ಫಸಲು ಕೈಸೇರುವ ನಿರೀಕ್ಷೆಯೇ ಇಲ್ಲ. ಅನೇಕ ರೈತರು ಬೆಳೆಯನ್ನು ಹರಗಿ ಹೊಸದಾಗಿ ಬಿತ್ತನೆ ಮಾಡಲು ತಯಾರಿ ನಡೆಸಿದ್ದಾರೆ.

ತಿನ್ನಲೂ ಸಿಗಲ್ಲ ಬಟಾಣಿ:

ಹಣ್ಣಿಕೇರಿ, ಭೈರನಟ್ಟಿ, ಹಿರೇಮೇಳೆ, ಸುತಗಟ್ಟಿ, ಮತ್ತಿಕೊಪ್ಪ ಸೇರಿದಂತೆ ನೇಸರಗಿ ಹೋಬಳಿಯ ಸುಮಾರು 15ಕ್ಕೂ ಅಧಿಕ ಗ್ರಾಮಗಳಲ್ಲಿ ಬಟಾಣಿಯನ್ನು ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತದೆ. ಇದು ಅಲ್ಪಾವಧಿ ಬೆಳೆಯಾಗಿದ್ದು, ಬಿತ್ತನೆ ಮಾಡಿದ 45 ದಿನಕ್ಕೆ ಕಾಯಿ ಕೊಯ್ಲಿಗೆ ಬರುತ್ತದೆ. ಅಲ್ಪಾವಧಿಯ ಬಟಾಣಿ ರೈತರ ಪಾಲಿಗೆ ಆಪದ್ಭಾಂಧವ ಆಗಿದೆ. ಮುಂಗಾರು ಬಿತ್ತನೆಗೆ ಇದ್ದ ಹಣವನ್ನೆಲ್ಲ ಬರಿದು ಮಾಡಿಕೊಂಡು ರೈತರ ಜೇಬು ಖಾಲಿಯಾಗುತ್ತದೆ. ಮುಂದೆ ಸೋಯಾಬೀನ್ ಬೆಳೆ ಬರುವವರೆಗೆ ಅಂದರೆ ಸೆಪ್ಟೆಂಬರ್‌-ಅಕ್ಟೋಬರ್ ವರೆಗೆ ರೈತರಿಗೆ ಯಾವುದೇ ಆದಾಯ ಇರಲ್ಲ. ಇಂತಹ ಸಮಯದಲ್ಲಿ 45 ದಿನಕ್ಕೆ ಬರುವ ಬಟಾಣಿ ರೈತರ ಜೀವನ ಬಂಡಿ ಸಾಗಲು ಸಹಾಯಕವಾಗುತ್ತಿತ್ತು. ಉತ್ತಮ ಫಸಲು ಹಾಗೂ ದರ ಸಿಕ್ಕರೆ ಎಕರೆಗೆ ₹ 25-30 ಸಾವಿರ ಉತ್ಪನ್ನ ಬರುತ್ತದೆ. ದಲ್ಲಾಳಿಗಳು ಗ್ರಾಮಕ್ಕೆ ಬಂದು ಬಟಾಣಿ ಕಾಯಿ ಖರೀದಿಸಿ ಇಲ್ಲಿಂದ ಮುಂಬಯಿ, ಗೋವಾ, ಪುಣೆ ಸೇರಿದಂತೆ ಪ್ರಮುಖ ನಗರಗಳಿಗೆ ಸಾಗಣೆ ಮಾಡುತ್ತಾರೆ. ಆದರೆ, ಈ ಬಾರಿ ಕಂಡೂ ಕೇಳರಿಯದ ರೀತಿಯಲ್ಲಿ ಕೀಟಗಳು ದಾಳಿ ಇಟ್ಟಿದ್ದು, ಎಲೆಯನ್ನೆಲ್ಲ ಕೀಟಗಳು ತಿಂದುಹಾಕಿವೆ. ಇಷ್ಟೊತ್ತಿಗಾಗಲೇ ಹೂವು ಬಿಡಬೇಕಿದ್ದ ಬಟಾಣಿ ಬೆಳೆ ಬರಡಾಗಿದ್ದು, ರೈತರಿಗೆ ತಿನ್ನಲೂ ಸಿಗದಂತಹ ಸ್ಥಿತಿಯಲ್ಲಿದೆ. ಎಕರೆಗೆ ₹10-15 ಸಾವಿರ ಖರ್ಚು ಮಾಡಿರುವ ರೈತರು ಈಗ ಸಂಪೂರ್ಣ ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ.

ನನ್ನ ಜೀವಮಾನದಲ್ಲೇ ಇಂತಹ ಸ್ಥಿತಿ ಬಂದಿರಲಿಲ್ಲ. ಬರಗಾಲ ಹಾಗೂ ಅತಿಯಾದ ಮಳೆಯಾದ ಅನೇಕ ಸಂದರ್ಭದಲ್ಲೂ ತಕ್ಕಮಟ್ಟಿಗೆ ಬೆಳೆ ಕೈಗೆ ಬಂದಿತ್ತು. ಈಗಿನ ಸ್ಥಿತಿ ನೋಡಿದರೆ ಮುಂಗಾರು ಬೆಳೆ ಕೈಗೆ ಬರೋ ಲಕ್ಷಣ ಇಲ್ಲ. ಮೂರ್ನಾಲ್ಕು ಬಾರಿ ಕೀಟನಾಶಕ ಸಿಂಪಡಣೆ ಮಾಡಿದರೂ ಹತೋಟಿಗೆ ಬರುತ್ತಿಲ್ಲ. ಈಗಿರುವ ಬೆಳೆ ತೆಗೆದು ಹೊಸದಾಗಿ ಬಿತ್ತನೆ ಮಾಡುವ ಆಲೋಚನೆ ಮಾಡುತ್ತಿದ್ದೇವೆ.

ಆನಂದ ಮುನೆನ್ನಿ ಪ್ರಗತಿಪರ ರೈತ ಹಣ್ಣಿಕೇರಿ

ಈ ಬಾರಿ ಮುಂಚಿತವಾಗಿ ಬಿತ್ತನೆ ಮಾಡಿರುವುದು ಹಾಗೂ ತುಂತುರು ಮಳೆ, ಮೋಡ ಮುಸುಕಿದ ವಾತಾವರಣ ಕಾರಣದಿಂದ ಕೀಟಬಾಧೆ ಕಾಣಿಸಿಕೊಂಡಿದೆ. ಮತ್ತಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃಷಿ ಇಲಾಖೆಯಿಂದಲೂ ರಿಯಾಯತಿ ದರದಲ್ಲಿ ಕೀಟನಾಶಕ ಕೊಡಲಾಗುತ್ತಿದೆ. ಬೆಳೆ ಈಗ ಬೆಳವಣಿಗೆ ಹಂತದಲ್ಲಿದ್ದು, ಮುಂದೆ ಬೆಳೆವಣಿಗೆ ಆಗಲಿದೆ. ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ.

ಬಸವರಾಜ ದಳವಾಯಿ ಕೃಷಿ ಅಧಿಕಾರಿ ಬೈಲಹೊಂಗಲ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ