ಬಿಟ್ಟಿ ಗ್ಯಾರಂಟಿ ಭರವಸೆಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಉಡುಪಿ ಜಿಲ್ಲೆಯ ಪ್ರಜ್ಞಾವಂತ ಮತದಾರರು ಬಿಟ್ಟಿ ಭಾಗ್ಯಗಳ ಆಮಿಷಕ್ಕೆ ಮಣಿಯದೆ ಜಿಲ್ಲೆಯ ಎಲ್ಲ 5 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಭರ್ಜರಿಯಾಗಿ ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ಯಾವುದೇ ನೆಲೆಯಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿರುವುದನ್ನು ಸೌಮ್ಯ ರೆಡ್ಡಿ ತಿಳಿದುಕೊಳ್ಳಲಿ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯನಗರ ಕ್ಷೇತ್ರದಲ್ಲಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಹೀನಾಯ ಸೋಲುಂಡು ಜನತೆಯಿಂದ ತಿರಸ್ಕೃತರಾದ ಸೌಮ್ಯ ರೆಡ್ಡಿ ಅವರಿಂದ ಉಡುಪಿಯ ಜನತೆಗೆ ಕೋಮು ಸಾಮರಸ್ಯ ಮತ್ತು ಅಭಿವೃದ್ಧಿಯ ಕುರಿತು ಬಿಟ್ಟಿ ಉಪದೇಶ ಅಗತ್ಯವಿಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್ ಹೇಳಿದ್ದಾರೆ.ಬಿಟ್ಟಿ ಗ್ಯಾರಂಟಿ ಭರವಸೆಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಉಡುಪಿ ಜಿಲ್ಲೆಯ ಪ್ರಜ್ಞಾವಂತ ಮತದಾರರು ಬಿಟ್ಟಿ ಭಾಗ್ಯಗಳ ಆಮಿಷಕ್ಕೆ ಮಣಿಯದೆ ಜಿಲ್ಲೆಯ ಎಲ್ಲ 5 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಭರ್ಜರಿಯಾಗಿ ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ಯಾವುದೇ ನೆಲೆಯಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿರುವುದನ್ನು ಸೌಮ್ಯ ರೆಡ್ಡಿ ಮೊದಲು ತಿಳಿದುಕೊಳ್ಳಲಿ.ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆಯ ಕಂತುಗಳನ್ನು ರಾಜ್ಯದ ಮಹಿಳೆಯರಿಗೆ ಸರಿಯಾಗಿ ನೀಡಲಾಗುತ್ತಿಲ್ಲ. ತಮ್ಮ ತಂದೆ ಸಚಿವರಾಗಿರುವ ಸಾರಿಗೆ ಇಲಾಖೆಯ ಉಚಿತ ಬಸ್ ಪ್ರಯಾಣ ಉಡುಪಿ ಜಿಲ್ಲೆಯಲ್ಲಿ ಅನುಷ್ಠಾನವಾಗಲು ಜಿಲ್ಲೆಯಲ್ಲಿ ಸರ್ಕಾರಿ ಬಸ್ಸುಗಳೇ ಓಡುತ್ತಿಲ್ಲ. ನರ್ಮ್ ಬಸ್ ವ್ಯವಸ್ಥೆ ಇದ್ದೂ ಇಲ್ಲದಂತಾಗಿದ್ದು, ಬಸ್ ಇದ್ದರೆ ಡೀಸೆಲ್ ಇಲ್ಲ, ಡ್ರೈವರ್ ಇಲ್ಲ, ಡ್ರೈವರ್ ಇದ್ದರೆ ಬಸ್ಸೇ ಇಲ್ಲ ಎಂಬ ದುಸ್ಥಿತಿ ಜಿಲ್ಲೆಯಲ್ಲಿದೆ.ತಮ್ಮ ತಂದೆ ರಾಮಲಿಂಗ ರೆಡ್ಡಿಯವರು ಸಚಿವರಾಗಿರುವ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಕರಾವಳಿ ಸಹಿತ ರಾಜ್ಯದ ಯಾವುದೇ ಜಿಲ್ಲೆಗಳ ದೇವಸ್ಥಾನಗಳ ಅಭಿವೃದ್ಧಿಗೆ ಚಿಕ್ಕಾಸು ಅನುದಾನ ನೀಡಿಲ್ಲ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಹಂಚಿಕೆ ಮಾಡಿದ ಅನುದಾನದ 10 % ಅನುದಾನವೂ ಇದುವರೆಗೆ ಬಿಡುಗಡೆಯಾಗಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಉಡುಪಿಯ ಪ್ರಜ್ಞಾವಂತ ಜನತೆಗೆ ಬಿಟ್ಟಿ ಉಪದೇಶ ನೀಡುವ ಬದಲು ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿದ ಅನುದಾನದ ವಿವರಗಳನ್ನು ನೀಡಲಿ ಹಾಗೂ ರಾಜ್ಯ ಸರಕಾರದ ಮಲತಾಯಿ ಧೋರಣೆಯ ನೀತಿಯನ್ನು ಸೌಮ್ಯ ರೆಡ್ಡಿ ಪ್ರಶ್ನಿಸಲಿ ಎಂದು ಅವರು ತಿಳಿಸಿದ್ದಾರೆ.ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿರುವ ಜ್ಯೋತಿ ಹೆಬ್ಬಾರ್ ಕಾಂಗ್ರೆಸ್ ಸರ್ಕಾರದ ವೈಫಲ್ಯ ಮರೆಮಾಚಲು ಬಿಜೆಪಿ ನಾಯಕರನ್ನು ಟೀಕಿಸುವ ಮುನ್ನ ಉಡುಪಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ಸಹಕಾರ ನೀಡದ ತಮ್ಮದೇ ಸರ್ಕಾರದ ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಪ್ರಶ್ನಿಸಲಿ. ಸ್ವತಃ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರಾಗಿರುವ ಹೆಬ್ಬಾರ್ ಅವರು ನಿತ್ಯ ನೂರಾರು ಮಂದಿ ಕಚೇರಿಗೆ ಅಲೆದಾಡುತ್ತಿದ್ದರೂ ಅರ್ಜಿಗಳನ್ನು ವಿಲೇವಾರಿ ಮಾಡಲು ಅಧಿಕಾರಿಗಳು ನಿರಂತರ ಅಲೆದಾಡಿಸುತ್ತಿದ್ದರೂ ಯಾಕೆ ಮೂಕ ಪ್ರೇಕ್ಷಕರಾಗಿದ್ದೀರಿ ಎಂದು ಅವರು ಪ್ರಶ್ನಿಸಿದ್ದಾರೆ.ಬಡನಿಡಿಯೂರು ಗ್ರಾಮದಲ್ಲಿ ಮಾಜಿ ಶಾಸಕರ ಒಡೆತನದ ಅಕ್ರಮ ರೆಸಾರ್ಟ್ ನಿರ್ಮಾಣದ ಬಗ್ಗೆ ಅನುಮತಿ ನೀಡಿದ ಪ್ರಾಧಿಕಾರದ ಹಿಂದಿನ ಕಮಿಷನರ್ ಅಮಾನತುಗೊಂಡಿದ್ದರೂ ಪ್ರಾಧಿಕಾರದ ಸದಸ್ಯರಾಗಿ ನಿಮ್ಮ ಜಾಣ ಮೌನ ಸಂಶಯ ಮೂಡಿಸುತ್ತಿದೆ.ಅಂದು ಉಡುಪಿ ರೇವ್ ಪಾರ್ಟಿ, ಸಿ.ಡಿ., ಪದ್ಮಪ್ರಿಯಾ ಪ್ರಕರಣ ಸಂದರ್ಭದಲ್ಲಿ ಬೀದಿ ಬೀದಿಯಲ್ಲಿ ಅಬ್ಬರದ ಭಾಷಣ ಮಾಡಿದ್ದ ನೀವು ಅದೇ ವ್ಯಕ್ತಿಯ ಅಕ್ರಮ ರೆಸಾರ್ಟ್ ನಿರ್ಮಾಣಕ್ಕೆ ಪರೋಕ್ಷ ಸಹಕಾರ ನೀಡುವ ಮೂಲಕ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ನಿಮ್ಮ ಪಕ್ಷದ ಕಾರ್ಯಕರ್ತರೇ ಹೇಳುತ್ತಿದ್ದಾರೆ.ಇನ್ನಾದರೂ ಕ್ಷುಲ್ಲಕ ರಾಜಕೀಯ ಪ್ರಚಾರಕ್ಕಾಗಿ ಇಂತಹ ಅಪ್ರಬುದ್ಧ ಹೇಳಿಕೆ ನೀಡುವ ಬದಲು ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಸಿ ಎಂದು ಸಂಧ್ಯಾ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.