ರೋಗನಿರೋಧಕ ಶಕ್ತಿ ವೃದ್ಧಿಗೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

KannadaprabhaNewsNetwork |  
Published : Jul 06, 2025, 01:48 AM IST
4ಎಚ್‌ವಿಆರ್1 | Kannada Prabha

ಸಾರಾಂಶ

ಹಣ್ಣು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆದು ಉಪಯೋಗಿಸಬೇಕು. ಬೀದಿಬದಿಯ ಆಹಾರವನ್ನು ತಿನ್ನುವುದನ್ನು ಆದಷ್ಟು ಕಡಿಮೆ ಮಾಡಬೇಕು.

ಹಾವೇರಿ: ಮಳೆಗಾಲ ಆರಂಭವಾಗಿದ್ದು, ಸಾರ್ವಜನಿಕರು ಮಳೆಗಾಲದಲ್ಲಿ ಆರೋಗ್ಯ ರಕ್ಷಣೆಗಾಗಿ ನೀರು ಕಾಯಿಸಿ ಕುಡಿಯಬೇಕು, ಹಣ್ಣು-ತರಕಾರಿಗಳನ್ನು ಚೆನ್ನಾಗಿ ತೊಳೆದು ಉಪಯೋಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸಲಹೆ ನೀಡಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮಳೆಗಾಲದಲ್ಲಿ ನೀರು ಕಲುಷಿತಗೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕುಡಿಯುವ ನೀರನ್ನು ಕಾಯಿಸಿ ಆರಿಸಿ ಕುಡಿಯುಬೇಕು ಅಥವಾ ಫಿಲ್ಟರ್ ಮಾಡಿದ ನೀರನ್ನು ಬಳಸಬೇಕು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮುಖ್ಯವಾಗಿದೆ.

ಹಣ್ಣು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆದು ಉಪಯೋಗಿಸಬೇಕು. ಬೀದಿಬದಿಯ ಆಹಾರವನ್ನು ತಿನ್ನುವುದನ್ನು ಆದಷ್ಟು ಕಡಿಮೆ ಮಾಡಬೇಕು. ಮನೆಯಲ್ಲಿ ತಯಾರಿಸಿದ ಶುಚಿಯಾದ ಆಹಾರವನ್ನು ತಿನ್ನುವುದು ಒಳ್ಳೆಯದು. ಕೈಗಳನ್ನು ಆಗಾಗ ಸೋಪಿನಿಂದ ತೊಳೆಯಬೇಕು. ವಿಶೇಷವಾಗಿ ಊಟ ಮಾಡುವ ಮೊದಲು ಕೈಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ನಿಂತರೆ ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡುವ ಸಾಧ್ಯತೆ ಇರುತ್ತದೆ. ಸೊಳ್ಳೆ ಪರದೆ ಬಳಸುವುದು, ಸೊಳ್ಳೆ ಓಡಿಸುವ ಸ್ಪ್ರೇಗಳನ್ನು ಬಳಸುವುದು ಮತ್ತು ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಸಮತೋಲಿತ ಆಹಾರ ಸೇವಿಸುವುದು, ನಿಯಮಿತ ವ್ಯಾಯಾಮ ಮಾಡುವುದು ಮತ್ತು ಸಾಕಷ್ಟು ನಿದ್ರೆ ಮಾಡುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಜ್ವರ, ಅತಿಸಾರ ಅಥವಾ ಇತರ ಅನಾರೋಗ್ಯ ಕಾಣಿಸಿಕೊಂಡರೆ, ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.ವೃದ್ಧಾಶ್ರಮಗಳ ನೋಂದಣಿಗೆ ಸೂಚನೆ

ಹಾವೇರಿ: ಸರ್ಕಾರೇತರ ಸಂಸ್ಥೆಗಳು ಅನುದಾನ ರಹಿತವಾಗಿ ನಡೆಸುತ್ತಿರುವ ವೃದ್ಧಾಶ್ರಮವನ್ನು ಹಿರಿಯ ನಾಗರಿಕರ ಕಾಯ್ದೆ- 2007ರಡಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ನೋಂದಾಯಸಿಕೊಳ್ಳಬೇಕು. ನೋಂದಣಿಗೆ ಸಲ್ಲಿಸಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ- 04, ನೆಲಮಹಡಿ, ದೇವಗಿರಿ- ಹಾವೇರಿ ಈ ವಿಳಾಸದಲ್ಲಿ ಸಂಪರ್ಕಿಬಹುದೆಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV