ಕುಮಟಾ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿದ ಅಂತಾರಾಷ್ಟ್ರೀಯ ಶಿಕ್ಷಣ ಸಮ್ಮೇಳನದಲ್ಲಿ ಪದವಿ ಶಿಕ್ಷಣ ಹಂತದಲ್ಲಿಯೇ ಸಂಶೋಧನಾ ಪ್ರವೃತ್ತಿಯ ಅಗತ್ಯತೆಯ ಕುರಿತು ದೇಶ ವಿದೇಶದ ವಿದ್ವಾಂಸರಿಂದ, ವಿದ್ಯಾರ್ಥಿಗಳಿಂದ ನೂರಕ್ಕೂ ಹೆಚ್ಚು ಪ್ರಬಂಧಗಳ ಮಂಡನೆಯಾಗುವ ಮೂಲಕ ಗಮನ ಸೆಳೆದಿದೆ.
ಕಾಲೇಜಿನ ಶಿಕ್ಷಣ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಾಸಕ ದಿನಕರ ಶೆಟ್ಟಿ, ಕಾಲೇಜು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು,ಮುಖ್ಯವಾಗಿ ಪದವಿ ಕಾಲೇಜಿನಲ್ಲಿ ಕಲಿಸಲ್ಪಡುವ ಎಲ್ಲ ವಿಷಯಗಳ ಸಂಪನ್ಮೂಲ ವ್ಯಕ್ತಿಗಳನ್ನು ಒಂದೇ ಕಡೆ ಕಲೆ ಹಾಕಿದ್ದು ವಿಶೇಷವಾಗಿತ್ತು. ೧೦೦ಕ್ಕೂ ಹೆಚ್ಚು ಲೇಖನಗಳು ಮಂಡನೆಯಾದ ಸಮ್ಮೇಳನದಲ್ಲಿ ವಿದ್ಯಾರ್ಥಿಗಳೇ ೭೦ಕ್ಕೂ ಹೆಚ್ಚು ಲೇಖನ ಮಂಡಿಸಿದ್ದರು.
ಸಮಾರೋಪ ಸಮಾರಂಭ:ಸಮ್ಮೇಳನದ ಸಮಾರೋಪದ ಸಂದರ್ಭದಲ್ಲಿ ಗಣ್ಯರು ಮಾತನಾಡಿ,ಅಪರೂಪಕ್ಕೆಂಬಂತೆ ನಡೆದ ಈ ಸಮ್ಮೇಳನ ಉನ್ನತ ಮಟ್ಟದ ವಿಚಾರ ಸಂಕಿರಣವಾಗಿ ಹೊರಹೊಮ್ಮಿದೆ.ಕುಮಟಾ ಸರ್ಕಾರಿ ಕಾಲೇಜಿಗೆ ಐತಿಹಾಸಿಕ ಕೀರ್ತಿ ಹಾಗೂ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತಂದಿದೆ.ಪದವಿ ವ್ಯಾಸಂಗದಲ್ಲಿ ಉನ್ನತ ಅಂಕ ಪಡೆದು ಕೇವಲ ಜೀವನೋಪಾಯಕ್ಕಾಗಿ ನೌಕರಿ ಸೇರುವುದನ್ನು ಬಿಟ್ಟು,ಸಂಶೋಧನೆ, ಹೆಚ್ಚಿನ ವ್ಯಾಸಂಗದ ಕಡೆ ಗಮನಹರಿಸಿ ಒಳ್ಳೆಯ ಅಕಾಡೆಮಿಶಿಯನ್ ಆಗಿ ಹೊರಹೊಮ್ಮುವ ಪರಿಕಲ್ಪನೆ ವಿದ್ಯಾರ್ಥಿಗಳಲ್ಲಿ ಮೂಡಿಸಬೇಕೆಂಬ ಉದ್ದೇಶದಿಂದ ಹಮ್ಮಿಕೊಂಡ ಈ ಸಮ್ಮೇಳನ ಫಲಪ್ರದವಾಗಿದೆ ಎಂದು ಅನಿಸಿಕೆ ಹಂಚಿಕೊಂಡಿದ್ದಾರೆ.
ಕಾಲೇಜಿನ ಪ್ರಾಚಾರ್ಯೆ ವಿಜಯಾ ಡಿ.ನಾಯ್ಕತಮ್ಮ ಕಾಲೇಜಿನ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದರು. ಸಮ್ಮೇಳನದ ಸಂಚಾಲಕ ಐ.ಕೆ.ನಾಯ್ಕ,ಡಾ.ವಿನಾಯಕ ನಾಯ್ಕ, ಕೃಷ್ಣ ನಾಯಕ, ಕಾರ್ಯದರ್ಶಿ ಡಾ.ಗೀತಾ ನಾಯಕ, ಸಂದೇಶ ಎಚ್., ಪಲ್ಲವಿ ಎಚ್. ಸಿ.,ಖಜಾಂಚಿ ಚಂದ್ರಶೇಖರ, ನಮೃತಾ, ಶ್ರೀಕಾಂತ ಭಟ್ ಇತರರು ಇದ್ದರು.