ಸಂಭ್ರಮದ ಶೀಗೆ ಹುಣ್ಣಿಮೆ, ಭೂಮಿ ತಾಯಿಗೆ ಪೂಜೆ

KannadaprabhaNewsNetwork |  
Published : Oct 08, 2025, 01:01 AM IST
ಮುಂಡಗೋಡ: ಭೂಮಿಗೆ ಕೃತಜ್ಞತೆ ಪೂಜೆ ಸಲ್ಲಿಸಲು ಇರುವ ಏಕೈಕ ಹಬ್ಬ ಶೀಗೆ ಹುಣ್ಣಿಮೆಯನ್ನು ರೈತ ಕುಟುಂಬಸ್ಥರು ವಿಜೃಂಬಣೆಯಿಂದ ಆಚರಿಸಿದರು | Kannada Prabha

ಸಾರಾಂಶ

ಭೂಮಿಗೆ ಕೃತಜ್ಞತೆ ಪೂಜೆ ಸಲ್ಲಿಸಲು ಇರುವ ಏಕೈಕ ಹಬ್ಬ ಶೀಗೆ ಹುಣ್ಣಿಮೆಯನ್ನು ರೈತ ಕುಟುಂಬಸ್ಥರು ಮಂಗಳವಾರ ವಿಜೃಂಭಣೆಯಿಂದ ಆಚರಿಸಿದರು.

ಕನ್ನಡಪ್ರಭ ವಾರ್ತೆ ಮುಂಡಗೋಡ

ಭೂಮಿಗೆ ಕೃತಜ್ಞತೆ ಪೂಜೆ ಸಲ್ಲಿಸಲು ಇರುವ ಏಕೈಕ ಹಬ್ಬ ಶೀಗೆ ಹುಣ್ಣಿಮೆಯನ್ನು ರೈತ ಕುಟುಂಬಸ್ಥರು ಮಂಗಳವಾರ ವಿಜೃಂಭಣೆಯಿಂದ ಆಚರಿಸಿದರು. ವಿವಿಧ ತರಹದ ಬಗೆ ಬಗೆಯ ಖಾದ್ಯ ತಯಾರಿಸಿಕೊಂಡು ಕುಟುಂಬ ಸದಸ್ಯರೆಲ್ಲ ಹೊಲಕ್ಕೆ ತೆರಳಿ ಭೂಮಿ ತಾಯಿಗೆ ನೈವೇದ್ಯ ಮಾಡುವ ಮೂಲಕ ಶೀಗೆ ಹುಣ್ಣಿಮೆ(ಹಬ್ಬ)ವನ್ನು ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಮಂಗಳವಾರ ರೈತ ಸಮುದಾಯ ಶ್ರದ್ಧಾಭಕ್ತಿಗಳೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಿತು.ನವರಾತ್ರಿ ಉತ್ಸವ ದಸರಾ ಬಳಿಕ ಬರುವ ಶೀಗೆ ಹುಣ್ಣಿಮೆ ಗ್ರಾಮೀಣ ಭಾಗದಲ್ಲಿ ಭಾರಿ ವಿಶೇಷ ಮಹತ್ವ ಪಡೆದುಕೊಂಡಿದೆ. ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಇಲ್ಲಿಯ ರೈತರ ಪ್ರಧಾನ ಬೆಳೆ ಭತ್ತದ ಫಸಲು ಉತ್ತಮವಾಗಿದ್ದು, ಇನ್ನೇನು ಕಟಾವಿಗೆ ಬಂದಿದೆ. ಅನ್ನದಾತನ ಮೊಗದಲ್ಲಿ ಹರುಷ ಮೂಡಿಸಿದ್ದು, ಭೂಮಿ ತಾಯಿಯ ಪೂಜೆ ಮಾಡಲು ಪ್ರೇರಣೆ ನೀಡಿದೆ. ಕುಟುಂಬದ ಸದಸ್ಯರೆಲ್ಲಾ ಒಂದಾಗಿ ಹೊಲ ಗದ್ದೆಗೆ ತೆರಳಿ ಭೂಮಿ ಪೂಜೆಯಲ್ಲಿ ತೊಡಗಿದ್ದರು.ಬೆಳೆದು ನಿಂತ ಫಸಲಿಗೆ ಉಡಿಕಟ್ಟಿ ಸೀರೆ, ಕುಪ್ಪುಸ ತೊಡಿಸಿ ಪೂಜಿಸಿ ಆರಾಧಿಸಿದ ರೈತ ಸಮೂಹ ಅಲ್ಲಿಯೇ ಪಾಂಡವರ ಮೂರ್ತಿಗಳನ್ನು ನಿರ್ಮಿಸಿ ಅವುಗಳಿಗೆ ಪೂಜೆ ಸಲ್ಲಿಸಿತು. ಕುಟುಂಬದ ಸದಸ್ಯರೊಬ್ಬರು ಫಸಲಿಗೆ ಅರ್ಪಿಸಿದ ಎಡೆ (ಊಟ)ವನ್ನು ಸೇವಿಸುವ ಪದ್ಧತಿಯಿದೆ. ಎಡೆ ಸ್ವೀಕರಿಸುವ ಸಂಧರ್ಭದಲ್ಲಿ ಯಾರೊಂದಿಗೂ ಮಾತನಾಡದೇ ಮೌನವಾಗಿ ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ಪ್ರಸಾದ ಸ್ವೀಕರಿಸಿದರೆ ಮುಂದಿನ ವರ್ಷದವರೆಗೆ ಯಾವುದೇ ತೊಂದರೆ ಇಲ್ಲದಂತೆ ಫಸಲು ಕೈ ಹಿಡಿಯುತ್ತದೆ ಎಂಬ ನಂಬಿಕೆ ಇದೆ.ಸೀಗೆ ಹುಣ್ಣಿಮೆಯ ಸಡಗರಕ್ಕಾಗಿಯೇ ವಿವಿಧ ಬಗೆಯ ಬಗೆಯ ಅಡುಗೆ ತಯಾರಿಸಿಕೊಂಡು ಬಂಧು ಬಾಂಧವರೊಂದಿಗೆ ಚಕ್ಕಡಿ, ಟ್ರ್ಯಾಕ್ಟರ್, ಬೈಕ್ ಮತ್ತಿತರ ವಾಹನಗಳ ಮೂಲಕ ಗದ್ದೆಗಳಿಗೆ ತೆರಳಿ ಭೂಮಿ ತಾಯಿಗೆ ನೈವೇದ್ಯ ಅರ್ಪಿಸಲಾಯಿತು. ತದನಂತರ ಕುಟುಂಬದ ಸದಸ್ಯರು ಫಸಲು ಸಮೃದ್ಧವಾಗಿರಲೆಂದು ಹೊಲದ ಸುತ್ತಲೂ ಐದು ಬಗೆಯ ಪದಾರ್ಥಗಳನ್ನು ಚೆರಗದ ರೂಪದಲ್ಲಿ ಚಲ್ಲಿದರು. ಪೂಜಾ ಕಾರ್ಯ ಮುಗಿದ ಬಳಿಕ ಕುಟುಂಬದ ಸದಸ್ಯರು ಬಂಧು ಮಿತ್ರರೆಲ್ಲ ಒಟ್ಟಾಗಿ ಕುಳಿತು ಭೋಜನ ಸೆವಿಸಿದರು.ವೈವೇದ್ಯ ಅಡುಗೆ ವಿಶೇಷ:

ಹಬ್ಬದ ದಿನ ಹೋಳಿಗೆ ತುಪ್ಪ, ಹಾಲು ಪಾಯಸ, ಅನ್ನ, ಸಾರು, ಕುಂಬಳಕಾಯಿ ಕಡಬು ಹೀಗೆ ವಿವಿಧ ತರಹದ ಅಡುಗೆ ಪದಾರ್ಥಗಳನ್ನು ತಯಾರಿಸುತ್ತಾರೆ. ಪುಂಡಿ ಪಲ್ಲೆ, ಚವಳಿಕಾಯಿ, ಎಣ್ಣೆಗಾಯಿ (ಬದನೆಕಾಯಿ), ಎಲ್ಲ ಕಾಯಿಪಲ್ಲೆಗಳನ್ನು ನೈವೇದ್ಯಕ್ಕೆ ಇಡಲಾಗುತ್ತದೆ.ಗ್ರಾಮೀಣ ಭಾಗದ ವಿಶೇಷ:

ಭೂತಾಯಿಗೆ ಕೃತಜ್ಞತೆ ಸಲ್ಲಿಸುವ ಮಣ್ಣಿನ ಮಕ್ಕಳು ಹಾಕಿಕೊಂಡ ಈ ಆಚರಣೆ ಎಷ್ಟೊಂದು ಶ್ರದ್ಧೆ, ನಂಬಿಕೆ, ಭಕ್ತಿಯಿಂದ ಕೂಡಿರುತ್ತದೆ ಎಂಬುದನ್ನು ಗ್ರಾಮೀಣ ಪ್ರದೇಶಕ್ಕೆ ಹಬ್ಬದ ಸಂಭ್ರಮದಲ್ಲಿ ಭೇಟಿ ನೀಡಿ ಅನುಭವಿಸಿದಾಗಲೇ ಅದರ ಸಂಪೂರ್ಣ ಸೊಬಗನ್ನು ಕಾಣಬಹುದಾಗಿದೆ.

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ