ಶಿರಹಟ್ಟಿ: ಮಹರ್ಷಿ ವಾಲ್ಮೀಕಿ ಜೀವನದ ತತ್ವಾದರ್ಶಗಳನ್ನು ಜೀವನದಲ್ಲಿ ಅಳಡಿಸಿಕೊಳ್ಳಬೇಕು. ದೇಶದಲ್ಲಿ ನಮ್ಮ ಸಂಸ್ಕೃತಿ, ಧಾರ್ಮಿಕತೆ, ಆಚಾರ ವಿಚಾರಗಳು ಇನ್ನೂ ಗಟ್ಟಿಯಾಗಿ ಉಳಿದುಕೊಳ್ಳಲು ವಾಲ್ಮೀಕಿಯಂಥ ಮಹನೀಯರ ಕೊಡುಗೆ ಅಪಾರವಾಗಿದೆ ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ತಿಳಿಸಿದರು.ವಾಲ್ಮೀಕಿ ಜಯಂತಿ ಪ್ರಯುಕ್ತ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಸಮಾಜವು ಸದೃಢತೆಯನ್ನು ಹೊಂದಬೇಕಾದರೆ ಗುರುವಿನ ಮಾರ್ಗದರ್ಶನ, ಉತ್ತಮ ಸಂಸ್ಕಾರ, ಒಳ್ಳೆಯ ಪರಿಸರ ಹಾಗೂ ವಿದ್ಯೆ ಅತಿ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ವಾಲ್ಮೀಕಿಯವರ ಜೀವನ ಶೈಲಿ, ತತ್ವ, ಆದರ್ಶ ಪರಿಪಾಲನೆ ಅಗತ್ಯ ಎಂದರು.ಜೀವನದಲ್ಲಿ ವಾಲ್ಮೀಕಿ ಆದರ್ಶಗಳನ್ನು ಪಾಲಿಸಬೇಕು. ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ಮುನ್ನಡೆಯಬೇಕು. ಕೆಟ್ಟ ಗುಣಗಳನ್ನು ಬಿಟ್ಟು ಜೀವನದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಬೇಕು. ಕಟುಕನಾದ ಮಹರ್ಷಿ ವಾಲ್ಮೀಕಿಯವರು ಭಾರತದ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣ ರಚನೆಗೆ ಕಾರಣೀಭೂತರಾದರು. ಅವರಂತೆ ಎಲ್ಲರೂ ಬದಲಾಗಬೇಕು. ಸಮಾಜದಲ್ಲಿ ಅಜರಾಮರವಾಗಿ ನೆಲೆಸಬೇಕು ಎಂದರು.ಮುಖಂಡ ಎಂ.ಕೆ. ಲಮಾಣಿ ಮಾತನಾಡಿ, ಪರಿವರ್ತನೆ ಜಗದ ನಿಯಮ ಎಂಬಂತೆ ಶೋಷಿತ ವರ್ಗದಲ್ಲಿ ಜನಿಸಿ ಕಾಡಿನಲ್ಲಿ ನೆಲೆಸಿ ದರೋಡೆಯನ್ನು ತನ್ನ ಕಾಯಕ ಮಾಡಿಕೊಂಡಿದ್ದ ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಕಾವ್ಯವನ್ನು ಬರೆಯುವ ಮಟ್ಟಿಗೆ ಬದಲಾದ. ಹೀಗೆ ಬದಲಾವಣೆ ಮನುಷ್ಯನ ಸ್ಥಾನವನ್ನು ಎತ್ತರಕ್ಕೇರಿಸುತ್ತದೆ. ಅವರ ಅನುಯಾಯಿಗಳಾದ ನಾವು ಅವರ ತತ್ವ, ಆದರ್ಶಗಳನ್ನು ಹಾಗೂ ವಿಚಾರಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಹಿಂದು ಧರ್ಮಕ್ಕೆ ಪವಿತ್ರ ರಾಮಾಯಣವನ್ನು ಕೊಡುಗೆಯಾಗಿ ನೀಡಿದ ಮಹಾತಪಸ್ವಿ ಮಹರ್ಷಿ ವಾಲ್ಮೀಕಿ ಆದರ್ಶ ವಿಚಾರಗಳು ಸ್ಮರಣೀಯವಾಗಿವೆ. ಮಾನವ ಕುಲದಲ್ಲಿ ನೈತಿಕತೆಯ ಜಾಗೃತಿ ಮೂಡಿಸುವ ಜತೆಗೆ ಮನುಷ್ಯ ಬದುಕಿನಲ್ಲಿ ಶ್ರಮಿಸಿದಾಗ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟವರು ಎಂದರು.
ಆದಿಕವಿ ಮಹರ್ಷಿ ವಾಲ್ಮೀಕಿಯವರು ಕೆಳವರ್ಗದಲ್ಲಿ ಜನಿಸಿದ್ದರೂ ಸಾಧನೆಯಿಂದ ಉತ್ತುಂಗಕ್ಕೇರುವ ಮುಖಾಂತರ ಇತಿಹಾಸದ ಪುಟಗಳಲ್ಲಿ ವಿರಾಜಮಾನರಾಗಿದ್ದಾರೆ. ಜಗತ್ತಿಗೆ ಅಹಿಂಸೆಯ ಸಂದೇಶ ನೀಡುವ ಮುಖಾಂತರ ಹಾಗೂ ಆದರ್ಶ ಜೀವನದ ರಾಮಾಯಣವನ್ನು ಪರಿಚಯಿಸಿರುವ ಇವರು ಸರ್ವಜನಾಂಗದ ಗುರುವಾಗಿದ್ದಾರೆ ಎಂದರು.ಸಮಾಜದ ಅಧ್ಯಕ್ಷ ಗೋವಿಂದಪ್ಪ ಶೆಟ್ಟೆಪ್ಪ ಬಾಗೇವಾಡಿ, ಪಪಂ ಮುಖ್ಯಾಧಿಕಾರಿ ಸವಿತಾ ತಾಂಭ್ರೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲ ಲಮಾಣಿ, ಮಹೇಂದ್ರ ಉಡಚಣ್ಣವರ, ಬಿಇಒ ನಾಣಕೀ ನಾಯಕ, ಪಿಎಸ್‌ಐ ಈರಪ್ಪ ರಿತ್ತಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರಶಾಂತ ಕುಲಕರ್ಣಿ, ನದಾಫ್ ಇತರರು ಇದ್ದರು.