ಕೊಪ್ಪಳ: ಮುಂದಿನ ವಾರ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಕೈಗಾರಿಕೆಗಳ ಮಾಲಿನ್ಯದಿಂದ ಬಾಧಿತ ಗ್ರಾಮಗಳ ವಸ್ತುನಿಷ್ಠ ವರದಿ ಸಲ್ಲಿಸಲಾಗುವುದು ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಹೇಳಿದರು.

ಕಾರ್ಖಾನೆ ಮಾಲಿನ್ಯದಿಂದ ಬಾಧಿತವಾಗಿರುವ ಕೊಪ್ಪಳ ತಾಲೂಕಿನ ಹಿರೆಬಗನಾಳ, ಕಾಸನಕಂಡಿ, ಕುಣಿಕೇರಿ ಹಾಗೂ ಕುಣಿಕೇರಿ ತಾಂಡಾಗೆ ವಸ್ತುಸ್ಥಿತಿ ಅಧ್ಯಯನಕ್ಕಾಗಿ ತೆರಳಿದ್ದ ಜೆಡಿಎಸ್‌ ನಾಯಕರ ನಿಯೋಗದ ನೇತೃತ್ವ ವಹಿಸಿ ಮಾತನಾಡಿದರು.

ನಾನು ಕಳೆದ ವರ್ಷ ವೈಯಕ್ತಿಕ ನೆಲೆಗಟ್ಟಿನಲ್ಲಿ ಕುಮಾರಸ್ವಾಮಿ ಅವರಿಗೆ ಸುಧೀರ್ಘ ವರದಿ ಸಲ್ಲಿಸಿ ಕಾನೂನು ಉಲ್ಲಂಘಿಸಿರುವ ಕಾರ್ಖಾನೆ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿದ್ದೆ.ನನ್ನ ವರದಿಯ ಆಧಾರದ ಮೇಲೆ ಕುಮಾರಸ್ವಾಮಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರಿಗೆ ಪತ್ರ ಬರೆದ ನಂತರ ಕೇಂದ್ರದ ಅಧಿಕಾರಿಗಳ ತಂಡ ಮೂರು ದಿನಗಳ ಕಾಲ ಭೇಟಿ ನೀಡಿ ವರದಿ ಸಲ್ಲಿಸಿತು. ರಾಜ್ಯ ಸರ್ಕಾರ ಇಲ್ಲಿಯವರೆಗೆ ಈ ವರದಿ ಅನುಷ್ಠಾನಕ್ಕೆ ಕ್ರಮ ಕೈಗೊಂಡಿಲ್ಲ. ಬಾಧಿತ ಗ್ರಾಮಸ್ಥರ ಜತೆಗೆ ಸಂವಾದ ನಡೆಸಿ ವಸ್ತುಸ್ಥಿತಿ ತಿಳಿದುಕೊಂಡು ಮತ್ತೊಮ್ಮೆ ವರದಿ ಸಲ್ಲಿಸಲು ನಿರ್ಧರಿಸಲಾಯಿತು. ನಮ್ಮ ಭೇಟಿಯ ಹಿಂದೆ ರಾಜಕೀಯ ಉದ್ದೇಶವಿಲ್ಲ.ವಿನೂತನ ತಂತ್ರಜ್ಞಾನ ಅಳವಡಿಸಿಕೊಂಡು ಕಾರ್ಖಾನೆ ಮಾಲಿನ್ಯ ನಿಯಂತ್ರಿಸಬೇಕು. ಬಾಧಿತ ಗ್ರಾಮಸ್ಥರಿಗೆ ಪರಿಹಾರ ನೀಡಬೇಕು ಎಂದು ಹಿರೇಬಗನಾಳ ಗ್ರಾಮಸ್ಥರೊಂದಿಗಿನ ಸಂವಾದದಲ್ಲಿ ಹೇಳಿದರು.

ಹಿರೇಬಗನಾಳ ಗ್ರಾಮದಲ್ಲಿ ಸುಮಾರು 2500 ಜನಸಂಖ್ಯೆ ಇದೆ.ಇದರಲ್ಲಿ ಧೂಳಿನಿಂದ ವಿವಿಧ ರೋಗಗಳಿಗೆ ತುತ್ತಾದವರ ಸಂಖ್ಯೆ 220ಕ್ಕೂ ಹೆಚ್ಚು. ಕಳೆದ 25 ವರ್ಷಗಳಲ್ಲಿ ಅಧಿಕಾರದಲ್ಲಿದ್ದವರ ಕಣ್ಣಿಗೆ ಈ ಸಮಸ್ಯೆ ಗಮನಕ್ಕೆ ಬಾರದೆ ಹೋಗಿದ್ದು ದುರಂತ. ಕೇಂದ್ರ ಸರ್ಕಾರದಿಂದ ಸಿಗಬಹುದಾದ ಎಲ್ಲ ಪರಿಹಾರ ರೂಪದ ಕ್ರಮ ಜಾರಿಗೊಳಿಸಲು ಮಾಡಬೇಕಾದ ಪ್ರಯತ್ನ ಮಾಡುತ್ತೇನೆ‌ ಎಂದು ವಾಗ್ದಾನ ಮಾಡಿದರು.

ಈ ಭಾಗದಲ್ಲಿ ಕೃಷಿ ಕ್ಷೇತ್ರ ಅಪಾರ ನಷ್ಟಕ್ಕೀಡಾಗಿದೆ. ಈ ಭಾಗದ ಬೆಳೆ ಯಾರೂ ಖರೀದಿಸುತ್ತಿಲ್ಲ. ಈ ನಷ್ಟದ ಕುರಿತು ಅಧ್ಯಯನ ನಡೆಸಿ ಅಂಕಿ ಅಂಶ ಸಮೇತ ವರದಿ ಸಿದ್ಧಪಡಿಸಬೇಕು. ತೆರಿಗೆದಾರರ ಹಣದಿಂದ ಜೀವನ ಸಾಗಿಸುತ್ತಿರುವ ಸರ್ಕಾರಿ ಅಧಿಕಾರಿ ಸಮಸ್ಯೆಗೆ ಕ್ರಮ ಕೈಗೊಳ್ಳದೆ ತಮ್ಮ ನಿರ್ಲಕ್ಷ ಮುಂದುವರೆಸಿದರೆ ಜನ ದಂಗೆ ಏಳುವುದು ಖಚಿತ ಎಂದು ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರು ಎಚ್ಚರಿಸಿದರು.


ಕೈಗಾರಿಕೆಗಳು ನೆಲೆಗೊಳ್ಳುವ ಮೊದಲು ಅವುಗಳಿಂದ ಆಗುವ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರಿಗೆ ಮನದಟ್ಟು ಮಾಡಬೇಕು. ಕೊಪ್ಪಳದಲ್ಲಿ ನೆಲೆಗೊಂಡ ಕಾರ್ಖಾನೆ ವಿಷಯಗಳಲ್ಲಿ ಇದು ಪಾಲನೆಯಾಗಿಲ್ಲ.ಎರಡು ದಶಕಗಳ ನಂತರ ಈ ವಿಷಯದಲ್ಲಿ ಜನಪ್ರತಿನಿಧಿಗಳು ಗ್ರಾಮಸ್ಥರನ್ನು ದೂರುತ್ತಿರುವುದು ತರವಲ್ಲ.ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಘಟಕಗಳಿಂದ ಹೊಮ್ಮುವ ಮಾಲಿನ್ಯ ತಗ್ಗಿಸಬೇಕು.ಇಲ್ಲದಿದ್ದರೆ ನಾವು ಆ ಘಟಕ ಇಲ್ಲಿಂದ ಓಡಿಸಬೇಕಾಗುತ್ತದೆ ಎಂದು ಜೆಡಿಎಸ್‌ ಜಿಲ್ಲಾ ಉಪಾಧ್ಯಕ್ಷ ಮೂರ್ತ್ಯಪ್ಪ ಗಿಣಿಗೇರಿ ಹೇಳಿದರು.

ತಾಲೂಕು ಗೌರವಾಧ್ಯಕ್ಷ ಈಶಪ್ಪ ಮಾದಿನೂರು ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಮಾತನಾಡಿದರು. ತಾಲೂಕಾಧ್ಯಕ್ಷ ವೀರೇಶ್ ಗೌಡ, ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ಎಸ್ಸಿ ಘಟಕದ ತಾಲೂಕಾಧ್ಯಕ್ಷ ಸುರೇಶ್ ಪೂಜಾರ್,ತಾಲೂಕು ಕಾರ್ಯದರ್ಶಿ ಮಾರುತಿಗೌಡ ಪೊಲೀಸ್ ಪಾಟೀಲ್,ನಗರ ಕಾನೂನು ಘಟಕದ ಅಧ್ಯಕ್ಷ ಬಸವರಾಜ ಎಸ್,ನಗರ ಉಪಾಧ್ಯಕ್ಷ ಗಂಗಾಧರ್ ವಸ್ತ್ರದ, ನಗರ ಪರಿಸರ ಹಕ್ಕು ವಿಭಾಗದ ಅಧ್ಯಕ್ಷ ಪ್ರಾಣೇಶ್ ಕಂಪ್ಲಿ, ಯುವ ಘಟಕದ ಅಧ್ಯಕ್ಷ ರೋಹಿತ್ ಹಣವಾಳ,ಶರಣಪ್ಪ ಮರ್ಕಟ್, ಆನಂದ ಕೆ,ವಿರೇಶ್ ವಕ್ರದ, ವಿರೇಶ್ ಕುಟಗನಹಳ್ಳಿ ಪಾಲ್ಗೊಂಡಿದ್ದರು.