ಕನ್ನಡಪ್ರಭ ವಾರ್ತೆ ಕಾಗವಾಡಸಕ್ಕರೆ ಕಾರ್ಖಾನೆಗಳ ಲಾಭದಲ್ಲಿ ಶೇ.75ರಷ್ಟು ಪಾಲು ರೈತರಿಗೆ ನೀಡಲು ರೈತ ಮುಖಂಡ ಚುನಪ್ಪ ಪೂಜಾರಿ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿದ್ದ ಕಬ್ಬು ಬೆಳೆಗಾರರ ಹೋರಾಟ ಸದ್ಯಕ್ಕೆ ತಾತ್ಕಾಲಿಕವಾಗಿ ಹಿಂಪಡೆದಿದ್ದು, ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ 50 ಲಕ್ಷಕ್ಕೂ ಹೆಚ್ಚು ರೈತರು, ಯುವಕರು ಮತ್ತು ಮಹಿಳೆಯರೊಂದಿಗೆ ಸೇರಿ ಮತ್ತಷ್ಟು ಉಗ್ರ ಹೋರಾಟ ನಡೆಸಲಾಗುವುದು ಎಂದು ಚುನಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಕಾಗವಾಡ
ಸಕ್ಕರೆ ಕಾರ್ಖಾನೆಗಳ ಲಾಭದಲ್ಲಿ ಶೇ.75ರಷ್ಟು ಪಾಲು ರೈತರಿಗೆ ನೀಡಲು ರೈತ ಮುಖಂಡ ಚುನಪ್ಪ ಪೂಜಾರಿ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿದ್ದ ಕಬ್ಬು ಬೆಳೆಗಾರರ ಹೋರಾಟ ಸದ್ಯಕ್ಕೆ ತಾತ್ಕಾಲಿಕವಾಗಿ ಹಿಂಪಡೆದಿದ್ದು, ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ 50 ಲಕ್ಷಕ್ಕೂ ಹೆಚ್ಚು ರೈತರು, ಯುವಕರು ಮತ್ತು ಮಹಿಳೆಯರೊಂದಿಗೆ ಸೇರಿ ಮತ್ತಷ್ಟು ಉಗ್ರ ಹೋರಾಟ ನಡೆಸಲಾಗುವುದು ಎಂದು ಚುನಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಮುಂಬರುವ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಕಬ್ಬಿಗೆ ಪ್ರತಿ ಟನ್ಗೆ ಕಡ್ಡಾಯವಾಗಿ ₹1,000 ಹೆಚ್ಚುವರಿ ದರ ಘೋಷಿಸಬೇಕು. ಅಲ್ಲದೆ, ಮಳೆಯಿಲ್ಲದೆ ಒಣಗಿರುವ ಕಬ್ಬಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.ತೂಕದ ಮೋಸ ತಡೆಗೆ ₹500 ಕೋಟಿ ಮೀಸಲಿಡಿ:ಕಬ್ಬು ತೂಕ ಮಾಡುವಾಗ ರೈತರಿಗೆ ಆಗುತ್ತಿರುವ ಭಾರಿ ಮೋಸವನ್ನು ತಪ್ಪಿಸಲು ಸರ್ಕಾರ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಅಕ್ರಮವನ್ನು ತಡೆಯಲು ಸರ್ಕಾರ 500 ಕೋಟಿ ಮೀಸಲಿಟ್ಟು, ಅದಕ್ಕಾಗಿ ಪ್ರತ್ಯೇಕ ಜಾಗ ಖರೀದಿಸಬೇಕು ಎಂದು ಅವರು ಬೇಡಿಕೆ ಇಟ್ಟರು. ಇದರೊಂದಿಗೆ, ಕೃಷ್ಠಾ ಮೇಲ್ದಂಡೆ ಎತ್ತರಕ್ಕೇರಿಸುವಿಕೆ, ಖಿಳೇಗಾಂವ ಬಸವೇಶ್ವರ ಏತ ನೀರಾವರಿಗೆ ಇನ್ನಷ್ಟು ಅನುದಾನ ಬಿಡುಗಡೆಗೊಳಿಸಿ ಶೀಘ್ರವೇ ಪೂರ್ಣಗೊಳಿಸಿ ಆ ಭಾಗದ ರೈತರಿಗೆ ನೀರೋದಗಿಸುವುದು ಸೇರಿದಂತೆ ನೆನೆಗುದಿಗೆ ಬಿದ್ದಿರುವ ಎಲ್ಲಾ ನೀರಾವರಿ ಯೋಜನೆಗಳಿಗೆ ಮುಂಬರುವ ಬಜೆಟ್ನಲ್ಲಿ ಅನುದಾನ ಮೀಸಲಿಟ್ಟು ತ್ವರಿತವಾಗಿ ಜಾರಿಗೊಳಿಸಬೇಕು. ಹಳ್ಳಿಗಳಲ್ಲಿ ರಾತ್ರಿ ವೇಳೆ ವಿದ್ಯುತ್ ಕಡಿತಗೊಳಿಸಿ ಸಿಂಗಲ್ ಫೇಸ್ ವಿದ್ಯುತ್ ನೀಡುವುದರಿಂದ ಪರೀಕ್ಷೆಗೆ ಓದುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಹಗಲಿನಲ್ಲಿಯೇ 7 ಗಂಟೆಗಳ ಕಾಲ ನಿರಂತರವಾಗಿ ತ್ರಿ-ಫೇಸ್ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.ರಾಜ್ಯವ್ಯಾಪಿ ಹೋರಾಟದ ಎಚ್ಚರಿಕೆ:ಸಕ್ಕರೆ ಕಾರ್ಖಾನೆಗಳು ಗಳಿಸುವ ಪ್ರತಿ 100 ರೂಲಾಭದಲ್ಲಿ ₹75 ಅನ್ನು ರೈತರಿಗೆ ನೀಡಬೇಕು ಎನ್ನುವುದು ಈ ಹೋರಾಟದ ಪ್ರಮುಖ ಗುರಿಯಾಗಿದೆ. ಪ್ರಸ್ತುತ ಹೋರಾಟದ ಫಲವಾಗಿ ಮೊದಲ ಕಂತಿನಲ್ಲಿ ₹300ರೂ ರಿಂದ ₹400 ಹಾಗೂ ಮುಂದಿನ ಹಂತದಲ್ಲಿ ₹500 ಹೆಚ್ಚುವರಿಯಾಗಿ ಪಡೆಯುವಲ್ಲಿ ರೈತರು ಯಶಸ್ವಿಯಾಗಿದ್ದಾರೆ.ಮಹಾರಾಷ್ಟ್ರದಲ್ಲಿ 13-14 ತಿಂಗಳಿಗೆ ಕಬ್ಬು ಬೆಳೆದರೆ, ನಮ್ಮ ರೈತರು 10-11 ತಿಂಗಳಿಗೆ ಬೆಳೆಯುತ್ತಾರೆ. ಆದರೂ ಮಹಾರಾಷ್ಟ್ರದ ಮಾದರಿಗಿಂತ ಉತ್ತಮ ಬೆಲೆ ಪಡೆಯುವ ನಿಟ್ಟಿನಲ್ಲಿ ಹೋರಾಟ ಸಾಗಿದೆ ಎಂದರು.ರೈತ ಮುಖಂಡ ಶೀತಲಗೌಡ ಪಾಟೀಲ ಮಾತನಾಡಿ, ನ್ಯಾಯಯುತ ದರ ಕೇವಲ ಬೆಳಗಾವಿ ಜಿಲ್ಲೆಗೆ ಸೀಮಿತವಾಗದೆ, ಕಲಬುರಗಿ, ಯಾದಗಿರಿ, ಗದಗ, ಬಾಗಲಕೋಟೆ, ವಿಜಯಪುರ, ಹಾವೇರಿ, ಕಾರವಾರ, ಮಂಡ್ಯ ಮತ್ತು ಮೈಸೂರು ಭಾಗದ ರೈತರಿಗೂ ಸಿಗಬೇಕು. ಒಂದು ವೇಳೆ ಮಂಡ್ಯ ಮತ್ತು ಮೈಸೂರು ಭಾಗದ ಕಾರ್ಖಾನೆಗಳು ಹೆಚ್ಚಿನ ದರ ನೀಡದಿದ್ದರೆ ಆ ಭಾಗಕ್ಕೂ ತೆರಳಿ ಹೋರಾಟ ರೂಪಿಸಲಾಗುವುದು. ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿ ಈ ಬಗ್ಗೆ ತಕ್ಷಣ ಗಮನಹರಿಸಬೇಕು ಎಂದು ಒತ್ತಾಯಿಸಿದರು.