ಪ್ರಮೋದ ಗಡಕರಕನ್ನಡಪ್ರಭ ವಾರ್ತೆ ಬೆಳಗಾವಿಕುಂದಾನಗರಿ ಬೆಳಗಾವಿಯಲ್ಲಿ ದೀಪಾವಳಿ ಎಂದರೆ ಕೇವಲ ದೀಪಗಳ ಹಬ್ಬವಲ್ಲ; ಅದು ಕನ್ನಡ ಮತ್ತು ಮರಾಠಿ ಸಂಸ್ಕೃತಿಗಳ ಸಮ್ಮಿಲನದ ಸಂಭ್ರಮವೂ ಹೌದು. ಉಡುಗೆ-ತೊಡುಗೆ, ಆಹಾರ ಪದ್ಧತಿ, ಅಲಂಕಾರ, ರಂಗೋಲಿ ಹಾಗೂ ಸಂಪ್ರದಾಯಗಳಲ್ಲಿ ಎರಡೂ ಭಾಷಿಕರು ಹಬ್ಬವನ್ನು ಒಟ್ಟಾಗಿ ಆಚರಿಸುತ್ತಾರೆ. ಅದರಲ್ಲೂ ದೀಪಾವಳಿ ಸಂದರ್ಭದಲ್ಲಿ ಮಕ್ಕಳು ನಿರ್ಮಿಸುವ ಮಣ್ಣಿನ ಕೋಟೆಗಳು ಈ ಹಬ್ಬದ ವಿಶೇಷ ಆಕರ್ಷಣೆಯಾಗಿದ್ದು, ಬೆಳಗಾವಿಯ ಸಾಂಸ್ಕೃತಿಕ ವೈವಿಧ್ಯಕ್ಕೆ ಸಾಕ್ಷಿಯಾಗಿವೆ.
ಪ್ರಮೋದ ಗಡಕರ
ಕನ್ನಡಪ್ರಭ ವಾರ್ತೆ ಬೆಳಗಾವಿಕುಂದಾನಗರಿ ಬೆಳಗಾವಿಯಲ್ಲಿ ದೀಪಾವಳಿ ಎಂದರೆ ಕೇವಲ ದೀಪಗಳ ಹಬ್ಬವಲ್ಲ; ಅದು ಕನ್ನಡ ಮತ್ತು ಮರಾಠಿ ಸಂಸ್ಕೃತಿಗಳ ಸಮ್ಮಿಲನದ ಸಂಭ್ರಮವೂ ಹೌದು. ಉಡುಗೆ-ತೊಡುಗೆ, ಆಹಾರ ಪದ್ಧತಿ, ಅಲಂಕಾರ, ರಂಗೋಲಿ ಹಾಗೂ ಸಂಪ್ರದಾಯಗಳಲ್ಲಿ ಎರಡೂ ಭಾಷಿಕರು ಹಬ್ಬವನ್ನು ಒಟ್ಟಾಗಿ ಆಚರಿಸುತ್ತಾರೆ. ಅದರಲ್ಲೂ ದೀಪಾವಳಿ ಸಂದರ್ಭದಲ್ಲಿ ಮಕ್ಕಳು ನಿರ್ಮಿಸುವ ಮಣ್ಣಿನ ಕೋಟೆಗಳು ಈ ಹಬ್ಬದ ವಿಶೇಷ ಆಕರ್ಷಣೆಯಾಗಿದ್ದು, ಬೆಳಗಾವಿಯ ಸಾಂಸ್ಕೃತಿಕ ವೈವಿಧ್ಯಕ್ಕೆ ಸಾಕ್ಷಿಯಾಗಿವೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಗರದ ವಿವಿಧ ಬಡಾವಣೆಗಳು, ಗಲ್ಲಿಗಳು ಹಾಗೂ ಮನೆಗಳ ಅಂಗಳಗಳಲ್ಲಿ ಪುಟಾಣಿ ಮಕ್ಕಳು ಕೋಟೆ ನಿರ್ಮಾಣದಲ್ಲಿ ತೊಡಗಿದ್ದಾರೆ. ಕಲ್ಲು, ಮಣ್ಣು, ಇಟ್ಟಿಗೆಗಳನ್ನು ಬಳಸಿ ತಮ್ಮ ಕಲ್ಪನೆಗೆ ತಕ್ಕಂತೆ ಕೋಟೆಗಳನ್ನು ರೂಪಿಸುತ್ತಿದ್ದಾರೆ. ಹಿರಿಯರು ಮಕ್ಕಳಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸಿ ಪ್ರೋತ್ಸಾಹಿಸುತ್ತಿದ್ದಾರೆ.ಕೋಟೆಯ ಸುತ್ತಲೂ ಗೋಡೆ, ಹೆಬ್ಬಾಗಿಲು, ಬುರುಜು, ಕಾವಲು ಗೋಪುರಗಳನ್ನು ನಿರ್ಮಿಸಿ, ಒಳಭಾಗದಲ್ಲಿ ಸೈನಿಕರ ಗೊಂಬೆಗಳನ್ನು ನಿಲ್ಲಿಸಿ, ಧ್ವಜಗಳನ್ನು ನೆಟ್ಟು ಅಲಂಕರಿಸುತ್ತಿದ್ದಾರೆ. ಕೆಲವು ಕೋಟೆಗಳಲ್ಲಿ ರಾಜ-ರಾಣಿಯರ ಗೊಂಬೆಗಳು, ಸೈನಿಕರ ಪ್ರತಿಕೃತಿಗಳು, ಸಣ್ಣ ಕೆರೆ, ಬಾವಿ ಹಾಗೂ ಸಿಂಹಾಸನಗಳನ್ನೂ ರೂಪಿಸಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಸಿಂಹಾಸನದ ಮಾದರಿಗಳನ್ನು ನಿರ್ಮಿಸಿ, ಕೋಟೆಯ ಮೇಲ್ಭಾಗದಲ್ಲಿ ಧ್ವಜ ಹಾರಿಸುವ ಮೂಲಕ ಐತಿಹಾಸಿಕ ವಾತಾವರಣ ಸೃಷ್ಟಿಸುತ್ತಾರೆ.
ಶಿವಾಜಿ ಕೋಟೆಯಿಂದ ಚನ್ನಮ್ಮನ ಕೋಟೆವರೆಗೆ!:ಬೆಳಗಾವಿಯ ದೀಪಾವಳಿ ಕೋಟೆಗಳ ಮತ್ತೊಂದು ವಿಶೇಷವೆಂದರೆ, ಅವುಗಳಲ್ಲಿ ಕನ್ನಡ ಮತ್ತು ಮರಾಠಿ ಸಂಸ್ಕೃತಿಗಳ ಪ್ರತಿಬಿಂಬ ಸ್ಪಷ್ಟವಾಗಿ ಕಾಣಿಸುತ್ತದೆ. ಮರಾಠಿ ಭಾಷಿಕರ ಮನೆಗಳ ಮುಂದೆ ಛತ್ರಪತಿ ಶಿವಾಜಿ ಮಹಾರಾಜರ ಕೋಟೆ, ಜೀಜಾಮಾತೆಯ ಅರಮನೆಗಳ ಮಾದರಿಗಳು ನಿರ್ಮಾಣಗೊಂಡಿದ್ದರೆ, ಕನ್ನಡಿಗರ ಮನೆಗಳ ಮುಂದೆ ವೀರರಾಣಿ ಕಿತ್ತೂರು ಚನ್ನಮ್ಮನ ಕೋಟೆ ಹಾಗೂ ಪರಸಗಡ ಕೋಟೆಗಳ ಮಾದರಿಗಳು ಗಮನ ಸೆಳೆಯುತ್ತಿವೆ.
ಐತಿಹಾಸಿಕ ಕೋಟೆಗಳನ್ನು ಹೋಲುವಂತೆ ಗೋಡೆಗಳಿಗೆ ಬಣ್ಣ ಬಳಿದು, ಹೆಬ್ಬಾಗಿಲು, ಧ್ವಜ, ಲಾಂಛನ ಹಾಗೂ ಒಳಭಾಗದ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ರೂಪಿಸುತ್ತಿರುವ ಮಕ್ಕಳ ಕೈಚಳಕಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲವು ಬಡಾವಣೆಗಳಲ್ಲಿ ಕೋಟೆ ನಿರ್ಮಾಣ ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತಿದೆ.ಮಿಲಿಟರಿ ಮಹಾದೇವ ಮಂದಿರದಲ್ಲಿ ಕೋಟೆಗಳ ಲೋಕ:
ಕಾಂಗ್ರೆಸ್ ರಸ್ತೆಯಲ್ಲಿರುವ ಮಿಲಿಟರಿ ಮಹಾದೇವ ಮಂದಿರದ ಆವರಣದಲ್ಲಿ ಮಕ್ಕಳ ಕೋಟೆ ನಿರ್ಮಾಣದ ಸಂಭ್ರಮ ಕಳೆಗಟ್ಟಿದೆ. ಇಲ್ಲಿ ಮಕ್ಕಳು ಗುಂಪುಗಳಾಗಿ ಸೇರಿಕೊಂಡು ಕಲ್ಲು, ಮಣ್ಣು ಹಾಗೂ ಇಟ್ಟಿಗೆಗಳಿಂದ ವಿವಿಧ ಮಾದರಿಯ ಕೋಟೆಗಳನ್ನು ನಿರ್ಮಿಸಿದ್ದಾರೆ.ಶಾಹೂ ನಗರದ ಛತ್ರಪತಿ ಯುವಕ ಮಂಡಳದ ಸದಸ್ಯರು ಬೆಳಗಾವಿ ಕೋಟೆಯ ಮಾದರಿಯನ್ನೇ ಆಧರಿಸಿ ಬೃಹತ್ ಕೋಟೆಯನ್ನು ನಿರ್ಮಿಸಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಕಳೆದ ವರ್ಷವೂ ಇದೇ ರೀತಿಯ ಪ್ರಯತ್ನ ಮಾಡಲಾಗಿತ್ತು.
ಮಕ್ಕಳು ನಿರ್ಮಿಸಿರುವ ಕೋಟೆಗಳನ್ನು ವೀಕ್ಷಿಸಲು ಹಿರಿಯರು ಹಾಗೂ ಸಾರ್ವಜನಿಕರು ಬಡಾವಣೆಗಳಲ್ಲಿ ಸುತ್ತಾಡುತ್ತಿದ್ದಾರೆ. ಕೋಟೆಗಳ ಮುಂದೆ ನಿಂತು ಫೋಟೊ, ಸೆಲ್ಫಿ ತೆಗೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ದೀಪಾವಳಿ ದಿನ ಕೋಟೆಗಳಿಗೆ ಪೂಜೆ ಸಲ್ಲಿಸುವುದು ಈ ಸಂಪ್ರದಾಯದ ಮತ್ತೊಂದು ವಿಶೇಷವಾಗಿದೆ.ಶಿವಾಜಿ ಇತಿಹಾಸದ ಪ್ರೇರಣೆ: ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಆಡಳಿತ ವೈಖರಿ ಹಾಗೂ ಕೋಟೆಗಳ ಇತಿಹಾಸದಿಂದ ಪ್ರೇರಿತರಾಗಿ ಈ ಸಂಪ್ರದಾಯ ಬೆಳೆದುಬಂದಿದೆ. ಶಿವಾಜಿ ಮಹಾರಾಜರ ಕಾಲದ ಕೋಟೆಗಳ ಮಾದರಿಗಳನ್ನು ನಿರ್ಮಿಸಿ ಪ್ರದರ್ಶಿಸುವ ಪದ್ಧತಿ ದೀಪಾವಳಿಯಿಂದ ತುಳಸಿ ವಿವಾಹದವರೆಗೂ ಮುಂದುವರಿಯುತ್ತದೆ.
ಹಿಂದೆ ಯುವಕರು ಹಾಗೂ ಹಿರಿಯರು ಉತ್ಸಾಹದಿಂದ ಕೋಟೆ ನಿರ್ಮಾಣದಲ್ಲಿ ಪಾಲ್ಗೊಳ್ಳುತ್ತಿದ್ದರು. ಇದೀಗ ಆ ಸಂಪ್ರದಾಯವನ್ನು ಮಕ್ಕಳು ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ.ಗ್ರಾಮೀಣ ಭಾಗದಲ್ಲಿಯೂ ಕೋಟೆಗಳ ಸಂಭ್ರಮ: ಬೆಳಗಾವಿ ನಗರಕ್ಕೆ ಮಾತ್ರ ಸೀಮಿತವಾಗದೆ ಖಾನಾಪುರ, ಬೆಳಗಾವಿ, ಚಿಕ್ಕೋಡಿ, ರಾಯಬಾಗ, ನಿಪ್ಪಾಣಿ, ಕಾಗವಾಡ ಹಾಗೂ ಕಿತ್ತೂರು ತಾಲೂಕುಗಳ ವಿವಿಧ ಗ್ರಾಮಗಳಲ್ಲಿಯೂ ದೀಪಾವಳಿ ಸಂದರ್ಭದಲ್ಲಿ ಖಿಲ್ಲಾ ನಿರ್ಮಾಣದ ಆಚರಣೆ ಕಂಡುಬರುತ್ತದೆ. ಮನೆಗಳ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕೋಟೆಗಳನ್ನು ನಿರ್ಮಿಸಿ ಪ್ರದರ್ಶಿಸುವ ಮೂಲಕ ಮಕ್ಕಳು ಹಬ್ಬದ ಸಂಭ್ರಮದಲ್ಲಿ ತೊಡಗಿದ್ದಾರೆ.
ಒಟ್ಟಿನಲ್ಲಿ, ದೀಪಾವಳಿಯ ದೀಪಗಳ ಬೆಳಕಿನ ನಡುವೆ ಮಣ್ಣಿನ ಕೋಟೆಗಳ ಮೂಲಕ ಇತಿಹಾಸವನ್ನು ನೆನಪಿಸಿಕೊಳ್ಳುವ ಬೆಳಗಾವಿಯ ವಿಶಿಷ್ಟ ಸಂಪ್ರದಾಯ ಕನ್ನಡ-ಮರಾಠಿ ಸಂಸ್ಕೃತಿಗಳ ಸೌಹಾರ್ದದ ಸಂಕೇತವಾಗಿ ಗಮನ ಸೆಳೆಯುತ್ತಿದೆ. ಮೊಬೈಲ್ ಯುಗದಲ್ಲಿಯೂ ಮಕ್ಕಳು ಮಣ್ಣು, ಕಲ್ಲು ಹಿಡಿದು ಕೋಟೆ ಕಟ್ಟುತ್ತಿರುವುದು ಈ ಐತಿಹಾಸಿಕ ಪರಂಪರೆಯ ನಿರಂತರತೆಗೆ ಸಾಕ್ಷಿಯಾಗಿದೆ.