ಲಕ್ಷ್ಮೇಶ್ವರ: ರೈತರ ಬದುಕಿನ ಆಸರೆಯಾದ ಭೂಮಿತಾಯಿಗೆ ಉಡಿ ತುಂಬುವ ಸಾಂಪ್ರದಾಯಿಕ ಸೀಗೆ ಹುಣ್ಣಿಮೆ ಹಬ್ಬವನ್ನು ರೈತರು ಮಂಗಳವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಹಬ್ಬದ ದಿನ ಸಿಂಗರಿಸಿದ ಎತ್ತಿನ ಚಕ್ಕಡಿ, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳ ಮೂಲಕ ಹೊಲಕ್ಕೆ ತೆರಳಿ ಬನ್ನಿಗಿಡದ ಕೆಳಗೆ ಪಾಂಡವರ ಸ್ವರೂಪದ ಕಲ್ಲುಗಳಿಗೆ ಪೂಜಿಸಿದರು. ಭೂಮಿ ತಾಯಿಗೆ ಉಡಿ ತುಂಬಿ ನಂತರ ಪುಂಡಿಪಲ್ಲೆ, ಉಂಡಗಡುಬು ಇತರೇ ಸಾಂಪ್ರದಾಯಿಕ ಪದಾರ್ಥಗಳ ಪ್ರಸಾದ ಚರಗ ಚೆಲ್ಲಿದರು.ಹಬ್ಬಕ್ಕಾಗಿ ವಿಶೇಷವಾಗಿ ತಯಾರಿಸಿರುವ ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಕರ್ಚಿಕಾಯಿ, ಕರಿಗಡಬು, ಉಂಡಗಡುಬು, ಸಜ್ಜೆರೊಟ್ಟಿ, ಎಳ್ಳುಹಚ್ಚಿದ ರೊಟ್ಟಿ, ಪುಂಡಿಪಲ್ಯೆ, ಕರಿಹಿಂಡಿ, ಕಿಚಡಿ, ಅಕ್ಕಿಹುಗ್ಗಿ, ವಿವಿಧ ತರಹದ ಪಲ್ಯೆ, ಚಟ್ನಿ ಇತ್ಯಾದಿ ಭಕ್ಷ್ಯಗಳನ್ನು ಕುಟುಂಬ ಸಮೇತರಾಗಿ ಕುಳಿತು ಊಟ ಮಾಡಿದರು.
ಈ ವರ್ಷ ಅತಿವೃಷ್ಟಿ ಮತ್ತೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಆದರೆ ಸಂಪ್ರದಾಯವನ್ನು ಬಿಡದೆ ಮಾಡಬೇಕಾದ ಹಿನ್ನೆಲೆ ಸೀಗೆ ಹುಣ್ಣಿಮೆ ಆಚರಿಸುತ್ತಿದ್ದೇವೆ. ಮುಂಗಾರು ಬೆಳೆ ರೈತರನ್ನು ನಿರಾಸೆಗೊಳಿಸಿದ್ದು, ಹಿಂಗಾರು ಮಳೆ, ಬೆಳೆ ಉತ್ತಮವಾಗಿ ಆಗಬಹುದು ಎನ್ನುವ ಆಸೆಯನ್ನು ರೈತ ಸಮುದಾಯ ಹೊಂದಿದೆ ಎನ್ನುತ್ತಾರೆ ರೈತರಾದ ಬಸವರಾಜ ಮೆಣಸಿನಕಾಯಿ, ನಾಗರಾಜ ಪೂಜಾರ(ಸೂರಣಗಿ) ಚನ್ನಪ್ಪ ಸೊರಟೂರ ಅವರು.