ಬ್ಯಾಡಗಿ: ವರ್ಷವಿಡೀ ಅನ್ನ ನೀಡುವ ಭೂಮಿ ತಾಯಿಗೆ ಇಂದಿನ ದಿನ ಕೃತಜ್ಞತೆ ಅರ್ಪಿಸುವ ಹಾಗೂ ಪ್ರಕೃತಿ ಮತ್ತು ರೈತರ ನಡುವಿನ ಬಾಂಧವ್ಯ ಸಾರುವಂತಹ ಭೂಮಿ ಹುಣ್ಣಿಮೆ (ಸೀಗೆ ಹುಣ್ಣಿಮೆ) ಯನ್ನು ತಾಲೂಕಿನಾದ್ಯಂತ ಕೃಷಿಕ ಕುಟುಂಬಗಳು ಸಡಗರ ಸಂಭ್ರದಿಂದ ಆಚರಿಸಿದವು.ಇದು ಕೃಷಿ ಪ್ರಧಾನ ಸಮಾಜದ ಪರಂಪರೆಯನ್ನು ಪ್ರತಿಬಿಂಬಿಸುವ ವಿಶೇಷ ಹಬ್ಬವಾಗಿದೆ, ಆಧುನಿಕತೆಯ ಹೊಸಯುಗದಲ್ಲಿ ರೈತಾಪಿ ಜನರು ಇಂದಿಗೂ ತಮ್ಮ ಹೊಲಗಳ ಮೇಲೆ ಅವಲಂಬಿತರಾಗಿದ್ದಾರೆ. ಪ್ರತಿಯೊಂದು ಕೃಷಿಕ ಕುಟುಂಬಗಳು ತಮ್ಮ ಹೊಲಗಳಿಗೆ ತೆರಳಿ ಗಂಗಾಮಾತೆಗೆ ವಿಶೇಷ ಪೂಜೆ ಸೇರಿದಂತೆ ಪಾಂಡವರನ್ನು ನಿರ್ಮಿಸಿ ಅವರಿಗೆ ಧನ್ಯತೆಯನ್ನು ಸಲ್ಲಿಸಿದರು. ಇವುಗಳ ಜೊತೆಗೆ ವಿಶೇಷ ಭಕ್ಷ್ಯ ಭೋಜಗಳನ್ನು ತಯಾರಿಸಿ ಕುಟುಂಬದವರು ಸೇರಿದಂತೆ ಸಂಬಂಧಿಕರೊಂದಿಗೆ ಭೋಜನ ಮಾಡುವುದು ಕಂಡುಬಂತು.
ಅಶ್ವಯುಜ ಮಾಸದ ಪೂರ್ಣಿಮೆ: ಬಹು ಹಿಂದಿನ ಕಾಲದಿಂದಲೂ ಆಚರಿಸಿಕೊಂಡು ಸದರಿ ಬಂದ ಸಂಪ್ರದಾಯವು ಅಶ್ವಯುಜ ಮಾಸದ ಪೂರ್ಣಿಮೆಯಂದು ಆಚರಿಸಲ್ಪಡಲಾಗುತ್ತದೆ ವರ್ಷವಿಡೀ ಅನ್ನ ನೀಡುವ ಭೂಮಿ ತಾಯಿಗೆ ಇಂದಿನ ದಿನ ಕೃತಜ್ಞತೆಗಳನ್ನು ಅರ್ಪಿಸುವುದು ಸದರಿ ಹಬ್ಬದ ವಿಶೇಷ. ಮನುಷ್ಯನು ತಾನು ಎಷ್ಟೇ ಸ್ವಾವಲಂಬಿ ಎಂದು ಹೇಳಿದರೂ ಪ್ರಕೃತಿಯ ಅವಲಂಬನೆ ಇಲ್ಲದೆ ಮನುಷ್ಯನಿಗೆ ಜೀವಿಸಲು ಸಾಧ್ಯವೇ ಇಲ್ಲ. ಮನುಷ್ಯ ತನ್ನದೆಂದು ಹೇಳುವ ವಸ್ತು ಏನಿಲ್ಲ ಅದೇನಿದ್ದರೂ ಪಂಚಭೂತಗಳ ಮಿಲನದಿಂದ ಆಗಿದೆಯೇ ಹೊರತು ನಮ್ಮ ಯಾವ ಕಾರಣದಿಂದವೂ ಅಲ್ಲ ಹೀಗಾಗಿ ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ಗಾಳಿ, ಆಕಾಶ ಇವುಗಳಿಗೆ ಉಪಕೃತನಾದ ಮಾನವನು ಅವಶ್ಯವಾಗಿ ಕೃತಜ್ಞತೆಯನ್ನು ಸಲ್ಲಿಸಲೇಬೇಕು ಇದು ಸಂಪ್ರದಾಯವೂ ಹೌದು, ಶಾಸ್ತ್ರವು ಕೂಡ ಇದಾಗಿದೆ ಹೀಗಾಗಿ ಬಹುತೇಕ ಕೃಷಿಕ ಕುಟುಂಬಗಳು ಇಂದು ತಮ್ಮ ಹೊಲಗಳಿಗೆ ತೆರಳಿ ಪೂಜೆ ಸಲ್ಲಿಸಿದರು.ಯಾವುದೇ ವಿಪತ್ತು ಸಂಭವಿಸದಿರಲಿ: ಯಾವುದೇ ವಿಪತ್ತುಗಳು ಸಂಭವಿಸಿ ಆಪತ್ತು ಆಗಬಾರದೆಂಬ ಕಾರಣಕ್ಕೆ ನಮ್ಮ ಪೂರ್ವಿಕರು ಪ್ರಕೃತಿಯನ್ನು ಗೌರವಿಸುವ ಸಲುವಾಗಿ ಕೆಲವು ವಿಶೇಷ ದಿನಗಳನ್ನು ಗುರುತಿಸಿ ಆದಿನದಂದು ಆಯಾಯ ರೂಪವನ್ನು ಪೂಜಿಸುವ ಪರಿಪಾಠ ಆರಂಭಿಸಿದರು. ಅದರಲ್ಲಿ ಇಂದಿನ ದಿನ “ಭೂಮಿ ಹುಣ್ಣಿಮೆ”. ಶರದೃತುವಿನ ಆಶ್ವಯುಜಮಾಸದ ಶುಕ್ಲಪಕ್ಷದ ಕೊನೆಯ ದಿನ ಅಂದರೆ ಹುಣ್ಣಿಮೆಯಂದು ಭೂಮಿ ಪೂಜೆಯನ್ನು ಮಾಡುವುದು ವಿಶೇಷವಾಗಿದ್ದು ಮೊದಲನೇಯದಾಗಿ ಭೂಮಿತಾಯಿಯು ತನ್ನ ಮಡಿಲಿನಲ್ಲಿ ಫಸಲನ್ನುತುಂಬಿಕೊಂಡು ಹಚ್ಚಹಸುರಾಗಿ ಕಂಗೊಳಿಸುವ ಸಂದರ್ಭ ಎರಡನೆಯದಾಗಿ ಸ್ತ್ರೀಯರಿಗೆ ಸೀಮಂತ ಮಾಡಿದ ರೀತಿಯಲ್ಲಿ ವಿವಿಧ ಭಕ್ಷ್ಯಗಳನ್ನು ಮಾಡಿ ಭೂಮಿಗೆ ಅದನ್ನು ಬಳಿಸಿ ಅರಶಿನ ಕುಂಕುಮ ಇಟ್ಟು ವಿಶೇಷವಾಗಿ ಪೂಜಿಸುವುದು ಸದರಿ ದಿನದಂದು ಜನರು ಎರಡು ಭಾವದಿಂದ ಭೂಮಿಯನ್ನು ಪೂಜಿಸುತ್ತಾರೆ.