ಎಂ. ಪ್ರಹ್ಲಾದ ಕನಕಗಿರಿ

ಎರಡನೇ ತಿರುಪತಿ ಎಂಬ ಹೆಗ್ಗಳಿಕೆ ಪಾತ್ರವಾದ ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರೆಗೆ ಕನಕಗಿರಿ ಸಜ್ಜುಗೊಂಡಿದ್ದು, ಸಿದ್ಧತೆಗಳು ಬರದಿಂದ ಸಾಗಿವೆ. ಭಕ್ತರಲ್ಲಿ ರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.

ವಿದ್ಯುತ್ ದೀಪಾಲಂಕಾರದಿಂದ ದೇಗುಲದ ಗೋಪುರಗಳು, ಮಧ್ಯ ಮಂಟಪ, ಹೊರ-ಒಳ ಭಾಗದ ದೇಗುಲದ ಕಟ್ಟಡಗಳು ಕಂಗೊಳಿಸುತ್ತಿವೆ. ಬಸ್ ನಿಲ್ದಾಣದಿಂದ ದೇಗುಲಕ್ಕೆ ಬರುವ ಮುಖ್ಯರಸ್ತೆ ಹಾಗೂ ರಾಜಬೀದಿಯಲ್ಲಿನ ಪಂಪಾಪತಿ, ಗಜಲಕ್ಷ್ಮೀ, ತೇರಿನ ಹನುಮಪ್ಪ, ರಾಮಲಿಂಗೇಶ್ವರ ಸೇರಿ ನಾನಾ ದೇಗುಲಗಳು ಕೂಡಾ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿವೆ.

ದಾಸೋಹಕ್ಕೆ ಚಾಲನೆ:

ಪ್ರತಿ ವರ್ಷವೂ ಸಹ ಸಚ್ಚಿದಾನಂದ ಅವಧೂತರ ಮಠದಲ್ಲಿ ಎರಡು ದಿನಗಳ ಕಾಲ ನಡೆಯುವ ದಾಸೋಹಕ್ಕೆ ದಾಸಪ್ಪನವರಿಂದ ಶಂಖ, ಜಾಗಟೆಯ ನಾದ ಮೊಳಗಿಸಿ ಚಾಲನೆ ನೀಡಲಾಯಿತು.


ಜಾತ್ರೆಗೆ ಬಂದ ಸಾವಿರಾರು ಭಕ್ತರಿಗೆ ಹುಗ್ಗಿ, ಬದನೆಕಾಯಿ ಪಲ್ಲೆ ಹಾಗೂ ಅನ್ನ ಸಾಂಬರ್, ರೊಟ್ಟಿ ಸಿದ್ಧಪಡಿಸಲಾಗಿದೆ. ದಾಸೋಹಕ್ಕೆ ಭಕ್ತರು ದವಸ, ಧಾನ್ಯ, ರೊಟ್ಟಿ ಅರ್ಪಿಸಿದ್ದಾರೆ.

ಪಾದಯಾತ್ರಿಕರ ಸಂಖ್ಯೆ ಹೆಚ್ಚಳ:ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಕುಡದರಹಾಳು, ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಇಬ್ರಾಹಿಂಪುರ, ಜಿಲ್ಲೆಯ ತಾಲೂಕುಗಳಿಂದ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿದರು.

ವರ್ಷದಿಂದ ವರ್ಷಕ್ಕೆ ಪಾದಯಾತ್ರಿಕರ ಸಂಖ್ಯೆ ಏರಿಕೆಯಾಗುತ್ತಿದ್ದರಿಂದ ಪ್ರತ್ಯೇಕ ದರ್ಶನ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿತ್ತು.

ದೀರ್ಘದಂಡ ನಮಸ್ಕಾರ: ಭಕ್ತರ ಇಷ್ಟಾರ್ಥಗಳು ಈಡೇರಿದ್ದರಿಂದ ದೇಗುಲದಲ್ಲಿ ನೂರಾರು ಭಕ್ತರು ದೀರ್ಘದಂಡ ನಮಸ್ಕಾರ ಹಾಕಿ ತಮ್ಮ ಹರಿಕೆ ತೀರಿಸಿ ಧನ್ಯತೆ ಮೆರೆದರು. ನೆರೆಯ ಜಿಲ್ಲೆಯ ಭಕ್ತರೂ ದೀರ್ಘದಂಡ ನಮಸ್ಕಾರ ಹಾಕಿ ಕನಕಾಚಲಪತಿಗೆ ನಮಿಸಿದರು.

ರಥೋತ್ಸವಕ್ಕೆ ಅಲಂಕಾರ:ಮೂಲಾ ನಕ್ಷತ್ರದಲ್ಲಿ ರಥೋತ್ಸವ ನಡೆಯಲಿದ್ದು, ದೇವಸ್ಥಾನ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ಈ ನಡುವೆ ರಥ ಕಟ್ಟುವ ಕೆಲಸಗಾರರು ತೇರಿಗೆ ತಳಿರು ತೋರಣಗಳಿಂದ ಶೃಂಗರೀಸುವ ಕೆಲಸ ನಡೆಸಿದ್ದು, ಭಕ್ತರಲ್ಲಿ ರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಮಾ. 11ರ ಬುಧವಾರದಂದು ಸಂಜೆ ೪ ಗಂಟೆಗೆ ರಥೋತ್ಸವವು ಮೂಲಾ ನಕ್ಷತ್ರದಲ್ಲಿ ಪ್ರಾರಂಭಗೊಳ್ಳಲಿದೆ.