ನಗರಸಭೆಯಲ್ಲಿ ಟ್ಯಾಂಕರ್ ನೀರು ಪೂರೈಕೆ ಎಂಬುದು ನಿತ್ಯವೂ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ. ಪ್ರತಿನಿತ್ಯ ಸರಾಸರಿ 60 ಟ್ಯಾಂಕರ್ ನೀರು ಪೂರೈಕೆ ಮಾಡಿ, ನಿತ್ಯವೂ ₹38 ಸಾವಿರ ಅಧಿಕ ವೆಚ್ಚ ಭರಿಸಲಾಗುತ್ತಿದೆ ಎಂದು ದಾಖಲೆಗಳು ಹೇಳುತ್ತಿವೆ.
ಶಿವಕುಮಾರ ಕುಷ್ಟಗಿ
ಗದಗ: ಗದಗ- ಬೆಟಗೇರಿ ನಗರಸಭೆ ಮಳೆಗಾಲ, ಚಳಿಗಾಲ, ಬೇಸಿಗೆ ಎನ್ನುವ ಭೇದ ತೋರದೇ ಎಲ್ಲ ಕಾಲಗಳಲ್ಲಿಯೂ ಎಲ್ಲ ವಾರ್ಡಗಳಿಗೂ ನಿರಂತರವಾಗಿ ಟ್ಯಾಂಕರ್ ನೀರು ಪೂರೈಸಿ ಇತಿಹಾಸ ನಿರ್ಮಿಸಿದೆ!ಕಳೆದೊಂದು ವರ್ಷದಿಂದ ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸದಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಚಿನ್ನದ ಮೊಟ್ಟೆ: ನಗರಸಭೆಯಲ್ಲಿ ಟ್ಯಾಂಕರ್ ನೀರು ಪೂರೈಕೆ ಎಂಬುದು ನಿತ್ಯವೂ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ. ಪ್ರತಿನಿತ್ಯ ಸರಾಸರಿ 60 ಟ್ಯಾಂಕರ್ ನೀರು ಪೂರೈಕೆ ಮಾಡಿ, ನಿತ್ಯವೂ ₹38 ಸಾವಿರ ಅಧಿಕ ವೆಚ್ಚ ಭರಿಸಲಾಗುತ್ತಿದೆ ಎಂದು ದಾಖಲೆಗಳು ಹೇಳುತ್ತಿವೆ. ಆದರೆ, ಎಲ್ಲಿ ನೀರು ಪೂರೈಕೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಮಾತ್ರ ಯಾರ ಬಳಿಯೂ ಇಲ್ಲ. ಈ ಕುರಿತು ಅಧಿಕಾರಿಗಳು ಮಾಹಿತಿ ನೀಡದಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.ನಿರಂತರ ನೀರು ಯಾವಾಗ?: ತುಂಗಭದ್ರಾ ನದಿಯಿಂದ ಗದಗ ನಗರಕ್ಕೆ ನಿತ್ಯ 40 ಎಂಎಲ್ಡಿ ನೀರು ಸರಬರಾಜು ಆಗುತ್ತಿದೆ ಎನ್ನುತ್ತಾರೆ ನಗರಸಭೆಯ ಅಧಿಕಾರಿಗಳು. ಆದರೆ ಇಷ್ಟೊಂದು ಪ್ರಮಾಣದಲ್ಲಿ ನೀರು ಬರುತ್ತಿದ್ದರೂ ಅದ್ಯಾವ ಕಾರಣಕ್ಕಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ನಡೆಸಲಾಗುತ್ತಿದೆ ಎಂದರೆ ಅಧಿಕಾರಿಗಳ ಬಳಿ ಉತ್ತರವಿಲ್ಲ. ಆಶ್ಚರ್ಯದ ಸಂಗತಿ ಎಂದರೆ ಈ ಮೊದಲು ನೀರು ಸರಬರಾಜು ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗೆ ನೀಡಲಾಗಿತ್ತು. ಈಗ ಸ್ಥಗಿತಗೊಳಿಸಿ ನಗರಸಭೆಯಿಂದಲೇ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕಾಗಿ ವಾರ್ಷಿಕವಾಗಿ ₹4.59 ಕೋಟಿ ವೆಚ್ಚ ಮಾಡಲಾಗುತ್ತಿದೆ.ತನಿಖೆಯಾಗಲಿ: ಟ್ಯಾಂಕರ್‌ಗಳಿಗೆ ಜಿಪಿಎಸ್ ಇದ್ದರೂ ಎಲ್ಲಿ ಯಾವ ವಾರ್ಡಗಳಿಗೆ ಎಷ್ಟು ಟ್ಯಾಂಕರ್ ನೀರು ಪೂರೈಕೆಯಾಗಿದೆ ಎಂದರೆ ಒಬ್ಬ ಅಧಿಕಾರಿಯೂ ಸಮರ್ಪಕ ಉತ್ತರ ನೀಡುವುದಿಲ್ಲ. ಇದು ನಗರಸಭೆಯ ಕೆಲವೇ ಕೆಲವು ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಹಿರಿಯ ಅಧಿಕಾರಿಗಳ ಅಣತಿಯಂತೆ ನಡೆಯುತ್ತಿದ್ದು, ಈ ಕುರಿತು ಲೋಕಾಯುಕ್ತರು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಲಿ ಎನ್ನುವುದು ನಾಗರಿಕರ ಆಗ್ರಹ.
ತುರ್ತು ನಿಧಿ ಹಣ: ಬೇಸಿಗೆಯಲ್ಲಿ ನೀರು ಸರಬರಾಜು ಮಾಡಲು ಟ್ಯಾಂಕರ್ ನೀರು ಪೂರೈಸುವ ಗುತ್ತಿಗೆ ನೀಡಲಾಗಿದೆ. ತುರ್ತು ನಿಧಿಯಲ್ಲಿ ಈ ಹಣ ಭರಿಸಲಾಗುತ್ತದೆ. ಕೆಲ ಬಡಾವಣೆಗಳಿಗೆ ನೀರು ತಲುಪದೇ ಇರುವ ಹಿನ್ನೆಲೆ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ ಎಂದು ನಗರಸಭೆ ಎಇಇ ಲಕ್ಷ್ಮಣ ಜೋಗದಂಡೆಕರ ತಿಳಿಸಿದರು.ತನಿಖೆ ನಡೆಸಬೇಕು: ಅವಳಿ ನಗರದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಎನ್ನುವುದು ಹತ್ತಾರು ಸಂಶಯಗಳನ್ನು ಹುಟ್ಟು ಹಾಕುತ್ತಿದೆ. ಕೋಟ್ಯಂತರ ರುಪಾಯಿ ಖರ್ಚು ಮಾಡಿದರೂ ಇದುವರೆಗೂ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ನಗರಸಭೆಯಲ್ಲಿ ಅಧಿಕಾರಿಗಳ ಆಡಳಿತ ನಡೆಯುತ್ತಿದ್ದು, ಜನಪ್ರತಿನಿಧಿಗಳ ಮಾತು ಯಾರೂ ಕೇಳುತ್ತಿಲ್ಲ. ನಗರಸಭಾ ಸದಸ್ಯರ ಮಾತಿಗೆ ಬೆಲೆ ಇಲ್ಲದಂತಾಗಿದೆ. ನೀರು ಪೂರೈಕೆಗೆ ಇದುವರೆಗೂ ಮಾಡಿರುವ ಖರ್ಚಿನ ಬಗ್ಗೆ ಕೂಡಲೇ ಸಂಪೂರ್ಣ ತನಿಖೆ ನಡೆಸಬೇಕು ಎಂದು ನಗರಸಭೆ ಸದಸ್ಯ ಚಂದು ಕರಿಸೋಮನಗೌಡ್ರ ತಿಳಿಸಿದರು.