ಗುರುವಾರ ಧಾರವಾಡದ ನವಲಗುಂದಲ್ಲಿ ಸಚಿವ ಸಂತೋಷ್‌ ಲಾಡ್, ಬಳ್ಳಾರಿಯಲ್ಲಿ ಸಚಿವ ಬಿ.ನಾಗೇಂದ್ರ, ಬಾಗಲಕೋಟೆಯಲ್ಲಿ ವಿಜಯಾನಂದ ಕಾಶಪ್ಪನವರ, ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಸಚಿವ ಪುಟ್ಟರಂಗಶೆಟ್ಟಿ, ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನಲ್ಲಿ ಬಸವರಾಜ ರಾಯರಡ್ಡಿ ಮತ್ತು ಶಿವರಾಜ ತಂಗಡಗಿ ಗುರುವಾರ ಜಂಟಿಯಾಗಿ ಬರ ಅಧ್ಯಯನ ನಡೆಸಿದ್ದಾರೆ

ಬೆಂಗಳೂರು : ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೆ ಬರ ಅಧ್ಯಯನ ಆರಂಭಿಸಿರುವ ಕಾಂಗ್ರೆಸ್‌ ಸಚಿವರು 2ನೇ ದಿನವೂ ರಾಜ್ಯದ ವಿವಿಧೆಡೆ ಪರಿಶೀಲನೆ ನಡೆಸುವಲ್ಲಿ ನಿರತರಾಗಿದ್ದಾರೆ.

ಗುರುವಾರ ಧಾರವಾಡದ ನವಲಗುಂದಲ್ಲಿ ಸಚಿವ ಸಂತೋಷ್‌ ಲಾಡ್, ಬಳ್ಳಾರಿಯಲ್ಲಿ ಸಚಿವ ಬಿ.ನಾಗೇಂದ್ರ, ಬಾಗಲಕೋಟೆಯಲ್ಲಿ ವಿಜಯಾನಂದ ಕಾಶಪ್ಪನವರ, ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಸಚಿವ ಪುಟ್ಟರಂಗಶೆಟ್ಟಿ, ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನಲ್ಲಿ ಬಸವರಾಜ ರಾಯರಡ್ಡಿ ಮತ್ತು ಶಿವರಾಜ ತಂಗಡಗಿ ಗುರುವಾರ ಜಂಟಿಯಾಗಿ ಬರ ಅಧ್ಯಯನ ನಡೆಸಿದ್ದಾರೆ. ಅಧಿಕಾರಿಗಳ ದಂಡು ಕಟ್ಟಿಕೊಂಡು ರೈತರ ಜಮೀನುಗಳಿಗೆ ಭೇಟಿ ನೀಡಿ ಒಣಗಿರುವ ಬೆಳೆಗಳನ್ನು ಪರಿಶೀಲಿಸಿದರು. ಈ ವೇಳೆ ರೈತರು ಸಚಿವರ ಮುಂದೆ ತಮ್ಮ ಸಂಕಷ್ಟವನ್ನು ಹೇಳಿಕೊಂಡರು. ಬರದಿಂದ ಬೆಳೆ ನಷ್ಟ ಹಾಗೂ ಆರ್ಥಿಕ ಹೊರೆಯ ಆತಂಕದಲ್ಲಿರುವ ರೈತರಿಗೆ ಸಚಿವರು ಧೈರ್ಯ ತುಂಬಿದರು. ಸರ್ಕಾರಕ್ಕೆ ನಾವು ವರದಿ ನೀಡುತ್ತೇವೆ. ಪರಿಶೀಲನೆಯ ಬಳಿಕ ಸರ್ಕಾರವು ಸೂಕ್ತ ಪರಿಹಾರ ನೀಡಲಿದೆ ಎಂದು ಸಮಾಧಾನ ಪಡಿಸಿದರು.

ಬಿ.ನಾಗೇಂದ್ರ, ಬಳ್ಳಾರಿ ತಾಲೂಕಿನ ಹಲಕುಂದಿ, ಮಿಂಚೇರಿ ಗ್ರಾಮದಲ್ಲಿ ಬೆಳೆಹಾನಿ ಪರಿವೀಕ್ಷಣೆ ನಡೆಸಿದರು. ಸಂತೋಷ್‌ ಲಾಡ್‌ ಅವರು ಶಾಸಕ ಕೋನರಡ್ಡಿ ಅವರೊಂದಿಗೆ ಧಾರವಾಡ ತಾಲೂಕಿನ ಹಾರೋ ಬೆಳವಡಿ ಮತ್ತು ನವಲಗುಂದ ತಾಲೂಕಿನ ಶಿರೂರ, ಶಿರಕೋಳ, ಮೊರಬ ಹಾಗೂ ತಿರ್ಲಾಪುರ ಗ್ರಾಮಗಳಿಗೆ ಭೇಟಿ ನೀಡಿದರು.

ಪುಟ್ಟರಂಗಶೆಟ್ಟಿ ಅವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹರವೆ, ಮಲೆಯೂರು, ನಿಟ್ರೆ, ಸೀಗೆವಾಡಿ, ಕುಲಗಾಣ, ರಂಗನಾಥಪುರ, ಪರಮಾಪುರ, ಬಲಚವಾಡಿ, ಕೊಡಗಾಪುರ ಗ್ರಾಮಗಳಲ್ಲಿ ಬೆಳೆ ವೀಕ್ಷಣೆ ಮಾಡಿದರು. ಮಲೆಯೂರು ಗ್ರಾಮದಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಅಹವಾಲು ಆಲಿಸಿದರು.

ಇನ್ನು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಮತ್ತು ರಾಜೂರು ಗ್ರಾಮಗಳ ರೈತರ ಜಮೀನುಗಳಿಗೆ ಬಸವರಾಜ ರಾಯರಡ್ಡಿ ಮತ್ತು ಶಿವರಾಜ ತಂಗಡಗಿ ಗುರುವಾರ ಜಂಟಿಯಾಗಿ ಭೇಟಿ ನೀಡಿ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿ ಪರಿಶೀಲಿಸಿದರು.

ಇನ್ನು ವಿಜಯಾನಂದ ಕಾಶಪ್ಪನವರ ಬಾಗಲಕೋಟೆ ತಾಲೂಕಿನ ಚಿಟಗಿನಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ, ಉಳ್ಳಾಗಡ್ಡಿ ಮತ್ತು ಸೂರ್ಯಕಾಂತಿ ಬೆಳೆ ಹಾನಿಯನ್ನು ಪರಿವೀಕ್ಷಣೆ ನಡೆಸಿ, ರೈತರಿಂದ ಮಾಹಿತಿ ಪಡೆದುಕೊಂಡರು.

ಶೀಘ್ರ ವರದಿ ಸಲ್ಲಿಸುವಂತೆ ಕೃಷಿ ಮತ್ತು ಕಂದಾಯ ಅಧಿಕಾರಿಗಳಿಗೆ ಸೂಚನೆ

ಜಿಲ್ಲೆಯಾದ್ಯಂತ ಮಳೆ ಅಭಾವ ಮತ್ತು ಬೆಳೆ ಹಾನಿಯ ಕುರಿತು ತಕ್ಷಣವೇ ಸಮಗ್ರ ಜಂಟಿ ಸಮೀಕ್ಷೆ ನಡೆಸಿ ಶೀಘ್ರ ವರದಿ ಸಲ್ಲಿಸುವಂತೆ ಕೃಷಿ ಮತ್ತು ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು. ತೊಗರಿ, ಹತ್ತಿ, ಮೆಕ್ಕೆಜೋಳ ಹಾಗೂ ಸಜ್ಜೆ ಸೇರಿದಂತೆ ಪ್ರಮುಖ ಬೆಳೆಗಳು ನೀರಿನ ಅಭಾವದಿಂದ ಬಾಡಿಹೋಗುತ್ತಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದರು.

ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಪ್ರಯತ್ನ

ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಬೆಳೆ ವಿಮೆ ಸೇರಿದಂತೆ ಸರ್ಕಾರದಿಂದ ಹಾಗೂ ವಿಮಾ ಸಂಸ್ಥೆಗಳ ಮೂಲಕ ದೊರೆಯಬಹುದಾದ ಎಲ್ಲ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದು ಸಂತೋಷ್‌ ಲಾಡ್‌ ಭರವಸೆ ನೀಡಿದರು.

. ಈ ವೇಳೆ ರೈತರು ಬೆಳೆಗೆ ನೀರು ಇಲ್ಲವಾಗಿದೆ, ಕುಡಿಯುವ ನೀರಿಗೂ ತೊಂದರೆ ಉಂಟಾಗಿದ್ದು, ಜಾನುವಾರುಗಳ ಮೇವಿಗೆ ಕೊರತೆ ಕಾಡುತ್ತಿದೆ. ಹಣ ಕೊಟ್ಟು ಮೇವು ಖರೀದಿಸುತ್ತಿದ್ದೇವೆ. ಗೋಶಾಲೆಗಳನ್ನು ಹೆಚ್ಚು ತೆರೆದು ಅನುಕೂಲ ಮಾಡಿಕೊಡಬೇಕೆಂದು ಕೋರಿದರು.

ರಾಜ್ಯ ಸರ್ಕಾರ ರೈತರ ಪರವಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರವೇ ಬೆಳೆ ಪರಿಹಾರ ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಸಚಿವದ್ವಯರು ಆಶಾದಾಯಕ ಮಾತುಗಳನ್ನಾಡಿದರು.