ಕನ್ನಡಪ್ರಭ ವಾರ್ತೆ ಬಾಗಲಕೋಟೆಬಾಗಲಕೋಟೆ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡ ನೂತನ ಸಚಿವ ವಿಜಯಾನಂದ ಕಾಶಪ್ಪನವರ ಬರ ಪರಿಸ್ಥಿತಿ ಕುರಿತು ಸರ್ಕಾರಕ್ಕೆ ಶೀಘ್ರದಲ್ಲಿಯೇ ವರದಿ ಸಲ್ಲಿಸಲಾಗುವುದೆಂದು ತಿಳಿಸಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಗುರುವಾರ ಜರುಗಿದ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ, ತೋಟಗಾರಿಕೆ ಇಲಾಖೆ ಸೇರಿ ಇತರೆ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಸಮಗ್ರ ವರದಿ ಸಿದ್ಧಪಡಿಸಿಕೊಳ್ಳಲು ಸೂಚಿಸಿದರು. ಜಿಲ್ಲೆಯ ಪಸ್ತುತ ಬರ ಪರಿಸ್ಥಿತಿ ಸಮರ್ಥವಾಗಿ ನಿರ್ವಹಿಸಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ತಿಳಿಸಿದರು. ಜಿಲ್ಲೆಯಲ್ಲಿ ಇದುವರೆಗೆ ದಾಖಲಾಗಿರುವ ಮಳೆಯ ಪ್ರಮಾಣ, ತಾಲೂಕುವಾರು ಮಳೆ ಕೊರತೆಯ ಸ್ಥಿತಿ ಹಾಗೂ ಮುಂಗಾರು ಹಂಗಾಮಿನ ಪ್ರಗತಿ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಸಂಗ್ರಹ, ಮುಂದಿನ ದಿನಗಳಲ್ಲಿ ಕುಡಿಯುವ ನೀರು ಹಾಗೂ ನೀರಾವರಿಗೆ ನೀರಿನ ಲಭ್ಯತೆ ಕುರಿತು ಸಚಿವರು ಪರಿಶೀಲನೆ ನಡೆಸಿದರು.ಕೃಷಿ ಇಲಾಖೆಯಿಂದ ಮುಂಗಾರು ಬಿತ್ತನೆ ಪ್ರಗತಿ, ಬೆಳೆಗಳ ಸ್ಥಿತಿ, ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಲಭ್ಯತೆ, ಬೆಳೆಹಾನಿ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಲಾಯಿತು. ರೈತರಿಗೆ ಅಗತ್ಯ ಮಾಹಿತಿ ಹಾಗೂ ತಾಂತ್ರಿಕ ಸಲಹೆಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಲಭ್ಯತೆ, ಪರ್ಯಾಯ ನೀರು ಪೂರೈಕೆ ವ್ಯವಸ್ಥೆಗಳು ಹಾಗೂ ನೀರಿನ ಮೂಲಗಳ ಸಂರಕ್ಷಣೆಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಪ್ರದೇಶಗಳಲ್ಲಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪಶುಸಂಗೋಪನೆ ಇಲಾಖೆಯಿಂದ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಲಭ್ಯತೆ, ಮೇವು ಬ್ಯಾಂಕ್ ಗಳ ಸ್ಥಿತಿ ಹಾಗೂ ಅಗತ್ಯ ಸಂಗ್ರಹದ ಕುರಿತು ಮಾಹಿತಿ ನೀಡಲಾಯಿತು.ಕೃಷಿ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರು ಜಿಲ್ಲೆಯಲ್ಲಿ ಆಗಿರುವ ಮಳೆಯ ವಿವರವನ್ನು ತಿಳಿಸುತ್ತಾ ಜಿಲ್ಲೆಯ ಸರಾಸರಿ ಮಳೆ ಕೊರತೆ ಶೇ.19 ರಷ್ಟಿದ್ದು, ಗುಳೇದಗುಡ್ಡ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಕೊರತೆ ದಾಖಲಾಗಿದೆ. ಬಾಗಲಕೋಟೆ ಮತ್ತು ಬೀಳಗಿ ತಾಲೂಕುಗಳಲ್ಲಿ ಶೇ.10ರಷ್ಟು ಹಾಗೂ ಹುನಗುಂದ ತಾಲೂಕಿನಲ್ಲಿ ಶೇ.5ರಷ್ಟು ಮಳೆ ಕೊರತೆಯಾಗಿದೆ.ಹೋಬಳಿವಾರು ಪರಿಶೀಲಿಸಿದಾಗ ಗುಳೇದಗುಡ್ಡ, ಅಮೀನಗಡ ಹಾಗೂ ಬಾಗಲಕೋಟೆ ಹೋಬಳಿಗಳಲ್ಲಿ ಮಳೆ ಕೊರತೆ ಕಂಡುಬಂದಿದ್ದು, ರಾಂಪೂರ ಮತ್ತು ಬಾದಾಮಿ ಭಾಗಗಳಲ್ಲಿಯೂ ಕಡಿಮೆ ಮಳೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಈವರೆಗೆ ಸುಮಾರು ಶೇ.90ರಷ್ಟು ಬಿತ್ತನೆ ಪೂರ್ಣಗೊಂಡಿದ್ದು, ವಿವಿಧ ಬೆಳೆಗಳ ಬಿತ್ತನೆ ಪ್ರಮಾಣದ ವಿವರವನ್ನು ಜಂಟಿ ನಿರ್ದೇಶಕರು ತಿಳಿಸಿದರು.ಜಿಲ್ಲೆಯಲ್ಲಿ ಅನೇಕ ಏತನೀರಾವರಿ ಯೋಜನೆಗಳಿದ್ದು, ರೈತರ ಹಿತದೃಷ್ಟಿಯಿಂದ ಅವುಗಳಿಗೆ ನೀರು ತುಂಬಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು. ಜಿಲ್ಲೆಗೆ ಮೇವು ಬೀಜದ ಪೊಟ್ಟಣಗಳನ್ನು ಇನ್ನೂ ಸರಬರಾಜಾಗಿಲ್ಲ. ಸರಬರಾಜಾದ ತಕ್ಷಣ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಶು ಇಲಾಖೆಯ ಉಪನಿರ್ದೇಶಕ ಕರಡಿಗುಡ್ಡ ತಿಳಿಸಿದರೆ, ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ವಿಬಿ ಜಿ ರಾಮ ಜಿ ಯೋಜನೆ ಅಡಿ ಅವಕಾಶವಿದ್ದು, ಮೊದಲ ಹಂತದಲ್ಲಿ 450 ಕೃಷಿ ಹೊಂಡಗಳನ್ನು ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದರು.ಸಭೆಯಲ್ಲಿ ಶಾಸಕರಾದ ಜೆ.ಟಿ.ಪಾಟೀಲ, ಸಿದ್ದು ಸವದಿ, ಜಗದೀಶ ಗುಡಗುಂಟಿ, ಉಮೇಶ ಮೇಟಿ, ವಿಧಾನ ಪರಿಷತ್ ಶಾಸಕ ಹಣಮಂತ ನಿರಾಣಿ, ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಸಿಇಒ ಗಜಾನನ ಬಾಲೆ, ಎಸ್ಪಿ ಸಿದ್ದಾರ್ಥ ಗೋಯಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹೀರೆ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿ.ಪಂ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಎಸಿಗಳಾದ ಮಹೇಶಕುಮಾರ ಮಾಲಗಿತ್ತಿ, ಶ್ವೇತಾ ಬೀಡಿಕರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.