ಧಾರವಾಡ ತಾಲೂಕಿನಲ್ಲಿ ಹಸಿರ ಬರದ ದರ್ಶನ!

KannadaprabhaNewsNetwork |  
Published : Aug 26, 2025, 01:04 AM IST
25ಡಿಡಬ್ಲೂಡಿ5,6ಧಾರವಾಡ ತಾಲೂಕಿನ ವಿವಿಧ ರೈತರ ಹೊಲಗಳಿಗೆ ಜಿಲ್ಲಾಧಿಕಾರಿಗಳು ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಆರಂಭದಲ್ಲಿ ಮುಂಗಾರು ಬೆಳೆಗಳು ಉತ್ತಮ ಫಸಲು ನೀಡುವ ನಿರೀಕ್ಷೆಯಲ್ಲಿದ್ದರೂ, ನಂತರದ ದಿನಗಳಲ್ಲಿ ಆರಂಭವಾದ ನಿರಂತರ ಮಳೆ, ಹವಾಮಾನ ವೈಪರಿತ್ಯದಿಂದಾಗಿ ಕೀಡೆ, ರೋಗ- ರುಜಿನಗಳಿಂದ ಕುಂಠಿತವಾಗಿವೆ. ನಿರೀಕ್ಷಿತ ಫಸಲು ಹುಸಿ ಎನಿಸಿದೆ.

ಧಾರವಾಡ: ನಿರಂತರ ಮಳೆಯಿಂದಾಗಿ ಮುಂಗಾರಿನ ಹಲವು ಬೆಳೆಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ದಿವ್ಯ ಪ್ರಭು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ತಾಲೂಕಿನ ಮಾರಡಗಿ, ಶಿವಳ್ಳಿ, ಹೆಬ್ಬಳ್ಳಿ, ಅಮ್ಮಿನಭಾವಿ, ಮರೇವಾಡ ಸೇರಿದಂತೆ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪ್ರದೇಶಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಆರಂಭದಲ್ಲಿ ಮುಂಗಾರು ಬೆಳೆಗಳು ಉತ್ತಮ ಫಸಲು ನೀಡುವ ನಿರೀಕ್ಷೆಯಲ್ಲಿದ್ದರೂ, ನಂತರದ ದಿನಗಳಲ್ಲಿ ಆರಂಭವಾದ ನಿರಂತರ ಮಳೆ, ಹವಾಮಾನ ವೈಪರಿತ್ಯದಿಂದಾಗಿ ಕೀಡೆ, ರೋಗ- ರುಜಿನಗಳಿಂದ ಕುಂಠಿತವಾಗಿವೆ. ನಿರೀಕ್ಷಿತ ಫಸಲು ಹುಸಿ ಎನಿಸಿದೆ. ಕೆಲವು ರೈತರು ಮರುಬಿತ್ತನೆ ಮಾಡಿದ್ದರಿಂದ ಜಮೀನುಗಳಲ್ಲಿ ಹಸಿರು ಕಾಣಿಸುತ್ತಿದೆ. ಆದರೆ, ಅವುಗಳಲ್ಲಿ ಫಸಲು ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಇಡೀ ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದರು.

ಈಗಾಗಲೇ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ತಂಡಗಳು ಗ್ರಾಮವಾರು ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ಕೈಗೊಳ್ಳಲು ಸೂಚಿಸಲಾಗಿದೆ. ಮುಂದಿನ ಒಂದು ವಾರದಲ್ಲಿ ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಳಿಸಿ, ದತ್ತಾಂಶಗಳನ್ನು ದಾಖಲಿಸಲು ನಿರ್ದೇಶನ ನೀಡಲಾಗಿದೆ. ಬೆಳೆವಿಮೆ ಮಾಡಿಸಿರುವ ರೈತರಿಗೆ ಈಗಾಗಲೇ ಮಧ್ಯಂತರ ಪರಿಹಾರ ಪಡೆಯಲು ಹಾನಿ ಸಂಭವಿಸಿದ 72 ಗಂಟೆಯಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು. ಅದರಂತೆ ಧಾರವಾಡ ತಾಲೂಕಿನಲ್ಲಿ ಸುಮಾರು 2500ಕ್ಕೂ ಹೆಚ್ಚು ರೈತರು ದಾಖಲಾತಿಗಳೊಂದಿಗೆ ತಮ್ಮ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಸುಮಾರು 26000 ಕ್ಕೂ ಹೆಚ್ಚು ಅರ್ಜಿಗಳು ವಿಮಾ ಕಂಪನಿಯಿಂದ ಪರಿಹಾರಕ್ಕಾಗಿ ರೈತರಿಂದ ಅರ್ಜಿ ಸಲ್ಲಿಕೆಯಾಗಿವೆ ಎಂಬ ಮಾಹಿತಿ ಎಂದರು.

ಸಾಲಕ್ಕೆ ಬೆನ್ನು ಬೀಳಬೇಡಿ: ಸರ್ಕಾರದ ಸೂಚನೆ ಇದ್ದರೂ ಕೆಲವು ಬ್ಯಾಂಕ್ ಶಾಖೆಗಳ ವ್ಯವಸ್ಥಾಪಕರು ರೈತರಿಂದ ಒತ್ತಾಯಪೂರ್ವಕವಾಗಿ ಸಾಲ ವಸೂಲಾತಿಗೆ ನೋಟಿಸ್ ನೀಡಿ, ಕಿರಿಕಿರಿ ಮಾಡುತ್ತಿದ್ದಾರೆ ಎಂದು ರೈತರು ದೂರು ಸಲ್ಲಿಸುತ್ತಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತವು ರೈತರಿಗೆ ಸಾಲ ವಾಸೂಲಾತಿಯಿಂದ ತೊಂದರೆಯಾಗದಂತೆ ನೋಡಿಕೊಳ್ಳಲು ಮತ್ತು ಸರ್ಕಾರ ನೀಡುವ ಬೆಳೆ ಪರಿಹಾರ, ವಿಮೆ ಪರಿಹಾರದ ಸಹಾಯಧನವನ್ನು ಆಯಾ ರೈತರ ಒಪ್ಪಿಗೆ ಇಲ್ಲದೇ ಸಾಲಕ್ಕೆ ಜಮೆ ಮಾಡುವುದು ಅಥವಾ ಸಾಲದ ಖಾತೆಗಳಿಗೆ ವರ್ಗಾಯಿಸುವುದು ಅಪರಾಧ. ಆದರೂ ಬೆಳೆ ನಷ್ಟದ ಸಂದರ್ಭದಲ್ಲಿ ತೊಂದರೆ ಕೊಡುತ್ತಿದ್ದಾರೆ ಎಂಬ ದೂರುಗಳಿವೆ. ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರು ಪರಿಶೀಲಿಸಿ ನಿರ್ದೇಶನ ಪಾಲಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಬೆಳೆ ಪರಿಶೀಲನೆ: ಮಾರಡಗಿ ಗ್ರಾಮದಲ್ಲಿನ ಮಲ್ಲಿಕಾರ್ಜುನ ಕುರಿ ಅವರ ಎರಡು ಎಕರೆ ಸೋಯಾಬಿನ್ ಬೆಳೆ ಸಂಪೂರ್ಣ ಹಾನಿಯಾಗಿರುವುದನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು. ಪಕ್ಕದಲ್ಲಿರುವ ಮುತ್ತು ಬಳ್ಳಾರಿ ಜಮೀನಿಗೂ ಭೇಟಿ ನೀಡಿದರು. ಮೊದಲು ಎರಡು ಎಕರೆ ಉದ್ದು ಬಿತ್ತನೆ ಮಾಡಿದ್ದು, ಮಳೆಯಿಂದ ಮರು ಬಿತ್ತನೆಯಾಗಿ ಸೌತೆಕಾಯಿ ಹಾಕಲಾಗಿತ್ತು. ಇದೀಗ ಮತ್ತೇ ಮಳೆಯಿಂದ ಅದೂ ಸಹ ನಾಶವಾಗಿದೆ ಎಂದು ರೈತ ಮುತ್ತು ಬಳ್ಳಾರಿ ಅಳಲು ತೋಡಿಕೊಂಡರು. ಮಾರಡಗಿ ರೈತರಾದ ಜಿ.ಎಸ್. ಪಾಟೀಲ ಕುಲಕರ್ಣಿ, ಫಕೀರಪ್ಪ ವನಹಳ್ಳಿ, ಹನುಮಂತ ಮಾರಡಗಿ, ಮುಕ್ತುಂ ದರಗದ, ಸೋಮಣ್ಣ ಹುಬ್ಬಳ್ಳಿ, ಮುಕ್ತುಸಾಬ್ ಹಾಗೂ ಹೆಬ್ಬಳ್ಳಿ ಗ್ರಾಮದ ರೈತರಾದ ಸಿ.ಬಿ. ಮಟ್ಟಿ, ಗಿರಿ ಮಲ್ಲಯ್ಯ ಉಮಚಗಿಮಠ, ಬಸವರಾಜ ತಂಬಾಕದ, ಬಸವರಾಜ ನಾಯ್ಕರ, ಬಾಳು ಕುಡೇಕಾರ, ವಿಠ್ಠಲ ಬೋವಿ, ಸುರೇಶ ಬನ್ನಿಗಿಡದ, ನಿಂಗಪ್ಪ ಶಿವಳ್ಳಿ, ಮಲ್ಲಪ್ಪ ನವಲೂರು ಇದ್ದರು.

ಕೃಷಿ, ತೋಟಗಾರಿಕೆ ಇಲಾಖಾಧಿಕಾರಿಗಳಾದ ರಾಜಶೇಖರ ಅನಗೌಡರ, ಜಯಶ್ರೀ ಹಿರೇಮಠ, ಇಮ್ತಿಯಾಜ್ ಚಂಗಾಪೂರಿ, ತಹಸಿಲ್ದಾರ್ ಡಾ. ಎಚ್. ಹೂಗಾರ, ರೇಖಾ ಬೆಳ್ಳಟ್ಟಿ, ಮೋಹನ ಲಕ್ಕಮ್ಮನವರ, ಎಚ್.ಎಂ. ಬಾದಾಮಿ, ಸಂಪತ್‌ಕುಮಾರ ಒಡೆಯರ್ ಇದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ