ಅಜೀಜಅಹ್ಮದ ಬಳಗಾನೂರ
ಈ ಬಾರಿ ಗಣೇಶ ಚತುರ್ಥಿ ಅಂಗವಾಗಿ ಇಲ್ಲಿನ ಈದ್ಗಾ ಮೈದಾನದಲ್ಲಿ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಯಿಂದ ಯಶಸ್ವಿ 4ನೇ ಬಾರಿಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ಬಾರಿ ಆ. 27ರಂದು ಬಾಲಕೃಷ್ಣ ರೂಪಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ.
3 ವರ್ಷದ ಹಿಂದೆ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕುರಿತು ಹೋರಾಟ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಹಲವು ಹೋರಾಟ, ಶಾಸಕರ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿ ಹಬ್ಬಕ್ಕೆ ಒಂದೇ ದಿನ ಬಾಕಿಯಿದ್ದ ವೇಳೆಗೆ ಅನುಮತಿ ಪಡೆದುಕೊಳ್ಳಲಾಗಿತ್ತು. ಈ ಬಾರಿ ಪಾಲಿಕೆ ಆಯುಕ್ತರು 4 ದಿನ ಮೊದಲೇ ಈದ್ಗಾ ಮೈದಾನದಲ್ಲಿ ಷರತ್ತುಬದ್ಧ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿರುವುದು ಪ್ರತಿಷ್ಠಾಪನಾ ಮಂಡಳಿಯವರಲ್ಲಿ ಸಂತಸ ತಂದಿದೆ.ಬಾಲಕೃಷ್ಣ ರೂಪಿ ಗಣಪ: ಈ ಬಾರಿ ಪ್ರತಿಷ್ಠಾಪನಾ ಮಂಡಳಿಯು 7 ಅಡಿ ಎತ್ತರದ ಬಾಲಕೃಷ್ಣ ರೂಪಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಎಪಿಎಂಸಿಯಲ್ಲಿರುವ ಮೂರ್ತಿ ತಯಾರಕ ಪ್ರಶಾಂತ ಪತ್ತಾರ ಎಂಬುವರ ಕೈಚಳಕದಲ್ಲಿ ಈಗಾಗಲೇ ಮೂರ್ತಿ ಸಿದ್ಧಗೊಂಡಿದೆ. ಕಳೆದ ವರ್ಷ 5.5 ಅಡಿ ಎತ್ತರದ ಶ್ರೀರಾಮನ ಅವತಾರದಲ್ಲಿರುವ ವಿಘ್ನೇಶ್ವರನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು.
ಮೂರು ವರ್ಷಗಳಿಂದ ರಾಣಿ ಚನ್ನಮ್ಮ ಮೈದಾನದಲ್ಲಿ ಯಶಸ್ವಿಯಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. 4ನೇ ವರ್ಷದ ಗಣೇಶ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಲಾಗುತ್ತಿದೆ. ಈ ಬಾರಿ ವಿಸರ್ಜನಾ ಮೆರವಣಿಗೆಯಲ್ಲಿ ದೇಸಿ ಕಲಾವಿದರಿಗೆ ಆದ್ಯತೆ ನೀಡಿದ್ದು ಮೆರವಣಿಗೆಗೆ ಹೆಚ್ಚಿನ ಮೆರುಗು ತರಲಿದೆ ಎಂದು ಗಜಾನನ ಉತ್ಸವ ಮಂಡಳಿ ಅಧ್ಯಕ್ಷ ಸಂಜೀವ ಬಡಸ್ಕರ್ ತಿಳಿಸಿದರು.
ಗಣೇಶ ಪ್ರತಿಷ್ಠಾಪನೆ ಮೊದಲ ದಿನ ಆ. 27ರಂದು ಬುಧವಾರ ಬೆಳಗ್ಗೆ 8ಕ್ಕೆ ಮೂರುಸಾವಿರ ಮಠದಿಂದ ಗಣಪತಿಯನ್ನು ಮೆರವಣಿಗೆಯ ಮೂಲಕ ಚೆನ್ನಮ್ಮ ಮೈದಾನಕ್ಕೆ ತಂದು ನಿಶ್ಚಿತಜಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಮೂರ್ತಿಯನ್ನು ಕಲಾವಿದ ಪ್ರಶಾಂತ ಪತ್ತಾರ ಸಿದ್ಧಪಡಿಸಿದ್ದು ಆಕರ್ಷಕವಾಗಿದೆ.
ಎರಡನೆಯ ದಿನ ಆ. 28ರಂದು ಬೆಳಗ್ಗೆ 6.30ರಿಂದ 7.30ರ ವರೆಗೆ ಯೋಗಾಸನ ಬಳಗದಿಂದ ಯೋಗ ಪೂಜೆ, ಬೆಳಗ್ಗೆ 8ಕ್ಕೆ ಗಣೇಶನ ಪೂಜೆ ಹಾಗೂ ಆರತಿ, ಬೆಳಗ್ಗೆ 9ರಿಂದ 11ರ ವರೆಗೆ ಗಣಹೋಮ, 11ರಿಂದ 12ರ ವರೆಗೆ ಪಟುಗಳಿಂದ ಗಣೇಶನ ಸ್ತೋತ್ರ, 12ರಿಂದ ಸಂಜೆ 5ರ ವರೆಗೆ ಭಜನೆ, 5.30ರಿಂದ 7ರ ವರೆಗೆ ವಾರಿಕರಿ ಭಜನೆ, ಸಂಜೆ 7ಕ್ಕೆ ಗಣೇಶ ವಂದನೆ ಕಾರ್ಯಕ್ರಮ, ರಾತ್ರಿ 8ಕ್ಕೆ ಗಂಗಾರತಿ ಹಮ್ಮಿಕೊಳ್ಳಲಾಗಿದೆ.
ವಿಸರ್ಜನೆಯ ಮೆರವಣಿಗೆಯಲ್ಲಿ ಡಿಜೆ ಬದಲು ವಿಶೇಷ ಆಕರ್ಷಣೆಯಾಗಿ ಕರ್ನಾಟಕ ರಾಜ್ಯದ ಪ್ರಸಿದ್ಧ ವಾದ್ಯ ಮೇಳಗಳು ಹಾಗೂ ವಿವಿಧ ವೇಷಭೂಷಣಗಳಿಂದ ಕೂಡಿದ ಸಾಂಸ್ಕೃತಿಕ ಮೆರವಣಿಗೆ ಇರಲಿದೆ.
ಷರತ್ತುಗಳೇನು?: ಮೈದಾನದಲ್ಲಿ 30 ಅಡಿ ಉದ್ದ, 30 ಅಡಿ ಅಗಲಕ್ಕೆ ಮೀರದಂತೆ ಹಾಗೂ ಪಾಲಿಕೆ, ಪೊಲೀಸ್, ಕಂದಾಯ ಅಧಿಕಾರಿಗಳು ಸೂಚಿಸುವ ಜಾಗದಲ್ಲಿ ಮಾತ್ರ ಪೆಂಡಾಲ್ ಹಾಕುವುದು. ಸಾರ್ವಜನಿಕ ಗಣೇಶ ಉತ್ಸವ ಆಚರಣೆಗೆ ಉತ್ಸವ ಮೂರ್ತಿಯ ಹೊರತಾಗಿ ಯಾವುದೇ ರೀತಿಯ ಬಾವುಟಗಳು ಹಾಗೂ ಇತರೆ ಮೈದಾನದ ಭಾಗದಲ್ಲಿ ಯಾವುದೇ ರೀತಿಯ ವಿವಾದಿತ ಹಾಗೂ ಪ್ರಚೋದನಕಾರಿ ಫೋಟೋಗಳು, ಬಿತ್ತಿಪತ್ರ, ಬ್ಯಾನರ್, ಬಂಟಿಂಗ್ಸ್ ಅಳವಡಿಸಕೂಡದು.
ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು ಸೂಚಿಸಿದಂತೆ ಗಣೇಶ ಮೆರವಣಿಗೆ ಮಾರ್ಗಕ್ಕೆ ಬದ್ಧರಾಗಿರಬೇಕು. ಮತ್ತು ಮೆರವಣಿಗೆಯನ್ನು ಒಂದು ಗಂಟೆಯೊಳಗೆ ಮುಕ್ತಾಯಗೊಳಿಸಿ ಪಾಲಿಕೆ ಹಾಗೂ ಪೊಲೀಸರು ಸೂಚಿಸಿದ ಜಾಗದಲ್ಲಿ ಮೂರ್ತಿ ವಿಸರ್ಜನೆ ಮಾಡುವುದು.
ಯಾವುದೇ ರೀತಿಯ ಪ್ರಚೋದನಕಾರಿ ಹೇಳಿಕೆ, ಭಾಷಣ ಮಾಡುವಂತಿಲ್ಲ. ಅನ್ಯ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಹ ಯಾವುದೇ ಕಾರ್ಯಕ್ರಮಗಳನ್ನು ಮಾಡುವ ಹಾಗಿಲ್ಲ. ಹೀಗೆ ಒಟ್ಟು 19 ಷರತ್ತುಗಳನ್ನು ವಿಧಿಸಿ ಪಾಲಿಕೆ ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಲ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಿದೆ.