ಕನ್ನಡಪ್ರಭ ವಾರ್ತೆ ಹನೂರು ಚಿರತೆ ದಾಳಿಯಿಂದ ತೋಟದ ಜಮೀನಿನಲ್ಲಿದ್ದ ಕುರಿ ಮತ್ತು ಮೇಕೆ ಬಲಿಯಾಗಿರುವ ಘಟನೆ ತಾಲೂಕಿನ ಅಂಬಿಕಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಜರುಗಿದೆ.
ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ, ರೈತರ ಆರೋಪ:
ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ವಿಫಲರಾಗುತ್ತಿರುವುದರಿಂದ ಈ ಭಾಗದಲ್ಲಿ ದಿನನಿತ್ಯ ಒಂದಲ್ಲ ಒಂದು ಜಮೀನಿನಲ್ಲಿ ಪ್ರಾಣಿಗಳ ಮೇಲೆ ದಾಳಿ ಮಾಡಿ ಚಿರತೆ ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿದೆ. ಹೀಗಾಗಿ ಸಾಕು ಪ್ರಾಣಿಗಳನ್ನು ಭಕ್ಷಣೆ ಮಾಡುತ್ತಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ವಿವಿಧ ಗ್ರಾಮಗಳ ರೈತರು ಹಾಗೂ ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶಾಶ್ವತ ಪರಿಹಾರಕ್ಕೆ ಆಗ್ರಹ:
ಅರಣ್ಯದಂಚಿನಲ್ಲಿ ಬರುವ ರೈತರ ಜಮೀನು ಮತ್ತೆ ಗ್ರಾಮಗಳತ್ತ ಬರುತ್ತಿರುವ ಕಾಡುಪ್ರಾಣಿಗಳು ಹೀಗಾಗಿ ಮಾನವ ಮತ್ತು ಪ್ರಾಣಿ ಸಂಘರ್ಷ ಇಳಿಯುವಂತಾಗಿದೆ. ರೈತರ ಸಾಕಣೆ ಮಾಡಿರುವ ಪ್ರಾಣಿಗಳು ಸಹ ಬಲಿಯಾಗುತ್ತಿದೆ. ಹೀಗಾಗಿ ಅರಣ್ಯ ಅಧಿಕಾರಿಗಳು ಮಾನವನ ಮೇಲೆ ಚಿರತೆ ದಾಳಿ ಮಾಡಿ ಅನಾಹುತ ಸಂಭವಿಸುವ ಮುನ್ನ ಉಪಟಳ ನೀಡುತ್ತಿರುವ ಚಿರತೆಯನ್ನು ಸೆರೆಹಿಡಿದು ಬೇರೆ ಬಿಡಬೇಕು. ಈ ಭಾಗದಲ್ಲಿ ರೈತರ ಜಮೀನುಗಳಿಗೆ ಕಾಡು ಪ್ರಾಣಿಗಳು ಬರುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ.ಅರಣ್ಯ ಅಧಿಕಾರಿಗಳ ಭೇಟಿ:
ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಸಾಕುಪ್ರಾಣಿಗಳನ್ನು ಬಲಿ ಪಡೆಯುತ್ತಿರುವ ಚಿರತೆಯನ್ನು ಸರಿ ಹಿಡಿಯಲು ತುಮಕೂರು ಗೇಜ್ ಗೇಟ್ ಅಳವಡಿಸಲು ಮುಂದಾಗಿದ್ದು ಹಾಗೂ ಚಿರತೆ ಚಲನವಲನ ಸಹ ಪತ್ತೆಹಚ್ಚಲು ಸಿಬ್ಬಂದಿ ನೇಮಕ ಮಾಡಲಾಗಿದೆ. ಹೀಗಾಗಿ ರೈತರು ಸಹ ಚಿರತೆಯ ಚಲನವಲನ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ವಲಯ ಅರಣ್ಯಾಧಿಕಾರಿ ಪ್ರವೀಣ್ ತಿಳಿಸಿದ್ದಾರೆ.ಕಳೆದ ಹಲವು ತಿಂಗಳುಗಳಿಂದ ಬಸಪ್ಪನ ದೊಡ್ಡಿ ಗಂಗನ ದೊಡ್ಡಿ ಸುತ್ತಲಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಸೋಮವಾರ ರಾತ್ರಿ ಅಂಬಿಕಾಪುರದ ರೈತರ ಜಮೀನಿನಲ್ಲಿ ಕಟ್ಟಿ ಹಾಕಲಾಗಿದ್ದ ಕುರಿ ಮೇಕೆಯನ್ನು ಸಹ ಬಲಿ ಪಡೆದಿದ್ದು ಈ ಭಾಗದ ಜನತೆ ಭಯಭೀತರಾಗಿದ್ದಾರೆ. ಕೂಡಲೇ ಅರಣ್ಯ ಅಧಿಕಾರಿಗಳು ಉಪಟಳ ನೀಡುತ್ತಿರುವ ಚಿರತೆ ಸೆರೆ ಹಿಡಿಯಬೇಕು ಇಲ್ಲದಿದ್ದರೆ ಸಂಬಂಧಿಸಿದ ಕಚೇರಿಯ ಮುಂಭಾಗ ರೈತ ಸಂಘಟನೆ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ.
ಅಮ್ಜದ್ ಖಾನ್, ಕರ್ನಾಟಕ ರಾಜ್ಯ ರೈತ ಸಂಘ, ಹನೂರು ತಾಲೂಕು ಘಟಕ.