ಈ ಬಾರಿಯೂ ಉತ್ತಮ ಬಜೆಟ್ ಮಂಡನೆ

KannadaprabhaNewsNetwork | Published : Dec 24, 2023 1:46 AM

ಸಾರಾಂಶ

ತೇರದಾಳ ಪಟ್ಟಣದ ಪುರಸಭೆಯಲ್ಲಿ ೨೦೨೪-೨೫ನೇ ಸಾಲಿನ ಬಜೆಟ್ ಮಂಡಿಸಲು ಕೈಗೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಾರ್ವಜನಿಕರಿಂದ ಸಲಹೆ ಬಯಸಿ ಶನಿವಾರ ಪೂರ್ವಭಾವಿ ಸಭೆ ಜರುಗಿತು.

ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)

ತೇರದಾಳ ಪಟ್ಟಣದ ಪುರಸಭೆಯಲ್ಲಿ ೨೦೨೪-೨೫ನೇ ಸಾಲಿನ ಬಜೆಟ್ ಮಂಡಿಸಲು ಕೈಗೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಾರ್ವಜನಿಕರಿಂದ ಸಲಹೆ ಬಯಸಿ ಶನಿವಾರ ಪೂರ್ವಭಾವಿ ಸಭೆ ಜರುಗಿತು.

ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಕಾರ್ಯಾಲಯದ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರ ಪಾಟೀಲ್, ಕಳೆದ ಬಾರಿ ಮಂಡಿಸಿದ ಬಜೆಟ್‌ನಲ್ಲಿ ₹೧.೬೮ ಲಕ್ಷದಷ್ಟು ತೆರಿಗೆ ಸಂಗ್ರಹಿಸಿ, ₹೧.೪೫ ಲಕ್ಷ ಖರ್ಚು ಮಾಡುವ ಗುರಿ ಹೊಂದುವ ಮೂಲಕ ₹೨ ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಗಿತ್ತು. ಈ ವರ್ಷ ಕೂಡ ಪಟ್ಟಣದಲ್ಲಿ ಸಂಗ್ರಹವಾಗುವ ವಿವಿಧ ತೆರಿಗೆಗಳು ಸೇರಿದಂತೆ ಸರ್ಕಾರ ನೀಡುವ ಅನುದಾನಗಳನ್ನು ಬಳಸಿಕೊಂಡು ಉತ್ತಮ ಬಜೆಟ್ ಮಂಡನೆ ಮಾಡಲಾಗುವುದೆಂದರು.

ಹಲವರು ಪಟ್ಟಣದ ಅಭಿವೃದ್ಧಿಗಾಗಿ ಮುಂಬರುವ ಸಾಲಿನಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತಾಗಿ ತಮ್ಮ ಸಲಹೆಗಳನ್ನು ನೀಡಿದರು. ಪುರಸಭೆ ಸೇರಿದ ಆಸ್ತಿಗಳು ಒತ್ತುವರಿಯಾಗುತ್ತಿದ್ದು ಅಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಾಣ ಮಾಡುವ ಮೂಲಕ ಪುರಸಭೆ ಆದಾಯ ಹೆಚ್ಚಿಸದುವುದಲ್ಲದೆ, ಕೆಲವೊಂದು ಉದ್ಯೋಗಗಳನ್ನು ಸೃಷ್ಟಿಸಿದಂತಾಗುತ್ತದೆ, ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸೇರಿದಂತೆ ಎಲ್ಲ ಕಡೆ ರಸ್ತೆ ಅಗಲೀಕರಣ, ಉತ್ತಮ ಚರಂಡಿ ನಿರ್ಮಾಣ, ಸವದಿ ನಗರದಲ್ಲಿ ಸಮರ್ಪಕ ನೀರು ಸರಬರಾಜು, ಬೀದಿ ದೀಪ ಅಳವಡಿಕೆ ಮಾಡಬೇಕು. ಕಲ್ಲಟ್ಟಿ ಭಾಗ ಸೇರಿದಂತೆ ವಿವಿದೆಡೆ ಬಯಲು ಶೌಚ ಬಳಸುವ ಪ್ರಕರಣಗಳು ಕಾಣಬರುತ್ತಿದ್ದು, ಅವಶ್ಯವಿದ್ದಲ್ಲಿ ಶೌಚಾಲಯಗಳ ನಿರ್ಮಾಣ, ಅವುಗಳಿಗೆ ಮೂಲ ಸೌಕರ್ಯ ಒದಗಿಸಲು, ಪಟ್ಟಣವನ್ನು ಮಾಸ್ಟರ್ ಪ್ಲ್ಯಾನ್ ವ್ಯವಸ್ಥೆಯಡಿ ರಸ್ತೆಗಳ ಅಗಲೀಕರಣವಾಗಬೇಕು. ಅಂಬೇಡ್ಕರ್ ವೃತ್ತ ಸೇರಿದಂತೆ ಹಲವು ಕಡೆಗೆ ಸಿಸಿಟಿವಿ ಅಳವಡಿಸಬೇಕು. ೨೪/೭ ನೀರು ಸರಬರಾಜಿಗೆ ಅಗೆದ ರಸ್ತೆಯ ಗುಂಡಿ ಮುಚ್ಚಲು ಕ್ರಮ ವಹಿಸಲು, ಎರಡು ಐತಿಹಾಸಿಕ ಕೆರೆ ಮೇಲೆ ವಾಕಿಂಗ್ ಟ್ರ್ಯಾಕ್, ಉದ್ಯಾನವನ ನಿರ್ಮಾಣ, ವಿವಿಧೆಡೆ ಇರುವ ಶೌಚಾಲಯಗಳಿಗೆ ನೀರು ಸರಬರಾಜು, ದೀಪ ಅಳವಡಿಸುವಂತೆ ಸಭೆಯಲ್ಲಿದ್ದ ಮಹಾಂತೇಶ ಸೊಟ್ಟಿ, ಭುಜಬಲಿ ಕೆಂಗಾಲಿ, ಬಸಪ್ಪ ಲಕ್ಕಪ್ಪಗೋಳ, ಈರಪ್ಪ ಬಾಳಿಕಾಯಿ, ಸುನೀಲ ಹಟ್ಟೆನ್ನವರ, ದಶರಥ ಅಕ್ಕೆನ್ನವರ ಹಾಗೂ ಕಬಾಡಗಿಯವರು ಸಲಹೆ ಸೂಚನೆಗಳನ್ನು ನೀಡಿದರು.

ಇವಗಳನ್ನು ಆಲಿಸಿದ ನಂತರ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ, ಸಾರ್ವಜನಿಕರು ನೀಡಿದ ಸಲಹೆ ಸೂಚನೆಗಳನ್ನು ಬಜೆಟ್‌ನಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದರು. ಪುರಸಭೆ ಕಂದಾಯ ಅಧಿಕಾರಿ ಎಫ್.ಬಿ.ಗಿಡ್ಡಿ, ಸಿಬ್ಬಂದಿಯಾದ ಪ್ರತಾಪ ಕೊಡಗೆ, ರೂಪಾ ಗೊಂಬಿ, ಭರಮು ದನಗರ ಸೇರಿದಂತೆ ಹಲವರಿದ್ದರು.

Share this article