ಶಿರಸಿ: ಒಳ್ಳೆಯ ಪತ್ರಕರ್ತ ತಯಾರಾಗಲು ಉತ್ತಮ ವಾತಾವರಣವೂ ಅತ್ಯವಶ್ಯವಾಗಿದ್ದು, ಪತ್ರಕರ್ತರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಬದ್ಧತೆ ಇರಬೇಕು. ತಮ್ಮ ಜವಾಬ್ದಾರಿಗಳನ್ನು ಅರಿತು ಅದನ್ನು ಅಳವಡಿಸಿಕೊಂಡು ಪರಿಶ್ರಮಪಟ್ಟರೆ ಪತ್ರಿಕೋದ್ಯಮದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ ಎಂದು ಸಂಯುಕ್ತ ಕರ್ನಾಟಕ ಸಂಪಾದಕ ಮಹಾಬಲ ಸೀತಾಳಭಾವಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿಗಳ ಹಾವಳಿ ಹೆಚ್ಚಾಗಿದ್ದು, ಯಾವುದು ಸುಳ್ಳು ಸುದ್ದಿ, ಯಾವುದು ನಿಜ ಸುದ್ದಿ ಎಂಬುದನ್ನು ಕಂಡುಹಿಡಿಯುವುದು ದೊಡ್ಡ ಸವಾಲು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡು ಅವಸಾನದಲ್ಲಿರುವ ಪತ್ರಿಕೋದ್ಯಮವನ್ನು ಮೇಲಕ್ಕೆತ್ತಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಮಾತನಾಡಿದರು.ದತ್ತಿನಿಧಿ ಪ್ರಶಸ್ತಿ ಪ್ರದಾನ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಗಳಾದ ಕೆ. ಶಾಮರಾವ್ ದತ್ತಿನಿಧಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತೆ ಶೈಲಜಾ ಗೋರನಮನೆ ಅವರಿಗೆ, ಡಾ. ಯು. ಚಿತ್ತರಂಜನ್ ದತ್ತಿನಿಧಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಗಣೇಶ ಹೆಗಡೆ ಇಟಗಿ ಹಾಗೂ ಜಿ.ಎಸ್. ಹೆಗಡೆ ಅಜ್ಜೀಬಳ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ದೀಪಕ ಕುಮಾರ್ ಶೇಣ್ವಿ ಅವರಿಗೆ ನೀಡಿ ಗೌರವಿಸಲಾಯಿತು.
ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳಾದ ಸುಜನ್ ಮನಮೋಹನ್ ನಾಯ್ಕ ಹಾಗೂ ದೀಪ್ತಿ ದತ್ತಾತ್ರೇಯ ಭಟ್ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಸಾಧನೆ ಮಾಡಿದ ತುಳಸಿ ರಾಘವೇಂದ್ರ ಹೆಗಡೆ ಅವರನ್ನು ಪುರಸ್ಕೃರಿಸಲಾಯಿತು.ರಾಜ್ಯ ಸಮಿತಿ ಸದಸ್ಯ ಬಸವರಾಜ ಪಾಟೀಲ, ಖಜಾಂಚಿ ರಾಜೇಂದ್ರ ಹೆಗಡೆ, ಪತ್ರಿಕಾ ಮಂಡಳಿ ಸದಸ್ಯ ಪ್ರದೀಪ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ, ಸಂಘದ ಜಿಲ್ಲಾ ಉಪಾಧ್ಯಕ್ಷ ವಿಠ್ಠಲದಾಸ ಕಾಮತ್, ಹಿರಿಯ ಸಹಕಾರಿ ಸುಭಾಷ್ ಶೆಟ್ಟಿ, ಸಂಘದ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಭಟ್ ಮತ್ತಿತರರು ಇದ್ದರು. ಗಾಯತ್ರಿ ರಾಘವೇಂದ್ರ ಪ್ರಾರ್ಥಿಸಿದರು. ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಸ್ವಾಗತಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಮೂರ್ತಿ ಕೆರೆಗದ್ದೆ ವಂದಿಸಿದರು.